ADVERTISEMENT

ಕರ್ನಾಟಕ ನಾಟಕ ಅಕಾಡೆಮಿಯಿಂದ ‘ಮಕ್ಕಳ ರಂಗ ಹಬ್ಬ’:ಏಳು ನಾಟಕ ಪ್ರದರ್ಶಿಸಿದ ಚಿಣ್ಣರು

​ಪ್ರಜಾವಾಣಿ ವಾರ್ತೆ
Published 20 ಮೇ 2025, 16:03 IST
Last Updated 20 ಮೇ 2025, 16:03 IST
ನಗರದಲ್ಲಿ ಮಂಗಳವಾರ ನಡೆದ ಮಕ್ಕಳ ರಂಗ ಹಬ್ಬದಲ್ಲಿ  ಉತ್ತರ ಕನ್ನಡ ಜಿಲ್ಲೆಯ ಮಂಚಿಕೆರೆ ಬಳಿಯ ಕಾಡಿನ ಹಾಡಿ ಮಕ್ಕಳು ‘ಕಾಡಿನ ಕಥೆ’ ನಾಟಕ ಪ್ರದರ್ಶಿಸಿದರು.          –ಪ್ರಜಾವಾಣಿ ಚಿತ್ರ
ನಗರದಲ್ಲಿ ಮಂಗಳವಾರ ನಡೆದ ಮಕ್ಕಳ ರಂಗ ಹಬ್ಬದಲ್ಲಿ  ಉತ್ತರ ಕನ್ನಡ ಜಿಲ್ಲೆಯ ಮಂಚಿಕೆರೆ ಬಳಿಯ ಕಾಡಿನ ಹಾಡಿ ಮಕ್ಕಳು ‘ಕಾಡಿನ ಕಥೆ’ ನಾಟಕ ಪ್ರದರ್ಶಿಸಿದರು.          –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಐವತ್ತು ವರ್ಷಗಳ ಹಿಂದೆ ಕಾಕನಕೋಟೆ ನಾಟಕವನ್ನು ಇದೇ ವೇದಿಕೆಯಲ್ಲಿ ನಟಿಸಿ, ಸೈ ಅನಿಸಿಕೊಂಡಿದ್ದೆ. ಅಭಿನಯ ನನಗೆ ಎಲ್ಲವನ್ನೂ ಕೊಟ್ಟಿದೆ. ಮನೆ, ಮಕ್ಕಳು, ಸಂಸಾರ, ದೊಡ್ಡ ಕಲಾ ಕುಟುಂಬ ಹೀಗೆ. ಕಲಾವಿದೆಯಾಗಿ ಬದುಕು ತೃಪ್ತಿ ಕೊಟ್ಟಿದೆ’ ಎಂದು ನಟಿ ಗಿರಿಜಾ ಲೋಕೇಶ್ ಹರ್ಷ ವ್ಯಕ್ತಪಡಿಸಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ರಂಗ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಮಕ್ಕಳು ನಾಟಕ ಪ್ರದರ್ಶಿಸುವ ಮೂಲಕ ಸಂದೇಶ ನೀಡುತ್ತಿದ್ದಾರೆ’ ಎಂದರು. 

ನಟ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ‘ಮಕ್ಕಳೇ ಇಂಥ ರಂಗ ಉತ್ಸವಗಳ ಉದ್ಘಾಟನಾ ಭಾಷಣ ಮಾಡಬೇಕು. ವೇದಿಕೆ ಮೇಲೆಯೂ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯರಾಗಿ ಭಾಗವಹಿಸಬೇಕು. ಇಂಥದ್ದೊಂದು ವಾತಾವರಣ ಮಕ್ಕಳಿಗಾಗಿ ಕಲ್ಪಿಸಿಕೊಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ‘ರಾಜ್ಯದಲ್ಲಿ ಕನ್ನಡ ರಂಗಭೂಮಿ ಅದರಲ್ಲೂ ‘ಮಕ್ಕಳ ರಂಗಭೂಮಿ’ ದೇಶಕ್ಕೆ ಮಾದರಿಯಾಗಿ ಬೆಳೆಯುತ್ತಿದೆ. ಮಕ್ಕಳ ರಂಗಭೂಮಿ 13 ಜಿಲ್ಲೆಗಳಲ್ಲಿ ಬಲಿಷ್ಠವಾಗಿದೆ. ಕಾಡಿನ ಹಾಡಿಯ ಮಕ್ಕಳು ರಂಗಭೂಮಿ ಮೂಲಕ ಸಂಸ್ಕೃತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕೆಲವರು ಭಾರತೀಯ ಸಂಸ್ಕೃತಿ ಎಂದರೆ ಕೇವಲ ವೈದಿಕ ಸಂಸ್ಕೃತಿ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಆದರೆ, ಹಾಡಿಯ ಜನರು ಬಹುತ್ವ ಭಾರತ ಕಟ್ಟಿದ್ದಾರೆ. ಬಹುತ್ವದ ಸಂಸ್ಕೃತಿ ಉಳಿಸಬೇಕು’ ಎಂದರು. 

ಉತ್ಸವಕ್ಕೆ ರಂಗು

ಬೆಳಿಗ್ಗೆ 10.30ರಿಂದ ರಾತ್ರಿ 7.30ರವರೆಗೆ ಮಕ್ಕಳು ಏಳು ನಾಟಕ ಪ್ರದರ್ಶಿಸಿದರು. ನಾಟಕದ ಜತೆ ಪರಿಸರ ಗೀತೆಗಳ ಗಾಯನ ನೃತ್ಯಗಳು ಉತ್ಸವಕ್ಕೆ ರಂಗು ನೀಡಿದವು. ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ ಬಳಿ ಕಾಡಿನ ಹಾಡಿ ಮಕ್ಕಳು ‘ಕಾಡಿನ ಕಥೆ’ ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರದ ’ಹೊಸ್ಸಾಬು’ ಹಾಗೂ ಬೆಂಗಳೂರಿನ ಆಭಯಾಶ್ರಮದ ವಾತ್ಸಲ್ಯ ಮಕ್ಕಳು ‘ಮೈಲಾರ ಮಹದೇವ’ ‘ಸಂಪಿಗೆ ರಾಣೆ’ ‘ತಾಯಿಯ ಕಣ್ಣು’ ‘ಕತ್ತೆ ತಂದ ಭಾಗ್ಯ’ ಮತ್ತು ‘ಅರ್ಧಾಥ’ ನಾಟಕಗಳನ್ನು ಪ್ರದರ್ಶಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ನಾಟಕ ವಿಭಾಗದ ಮುಖ್ಯಸ್ಥ ಡಾ. ಕೆ. ರಾಮಕೃಷ್ಣಯ್ಯ ಆಭಯಾಶ್ರಮ ಅಧ್ಯಕ್ಷೆ ನಾಗರತ್ನ ಸತೀಶ್ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ನಾಟಕ ಅಕಾಡೆಮಿ ಸದಸ್ಯ ಜಿ.ಪಿ.ಓ ಚಂದ್ರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.