ADVERTISEMENT

ಬಸನಗೌಡ ಪಾಟೀಲ ಯತ್ನಾಳ ಉಚ್ಛಾಟನೆಗೆ ಬಿ.ವೈ.ವಿಜಯೇಂದ್ರ ಬಣ ಪಟ್ಟು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2024, 9:41 IST
Last Updated 29 ನವೆಂಬರ್ 2024, 9:41 IST
<div class="paragraphs"><p>ಬಿ.ವೈ ವಿಜಯೇಂದ್ರ, ಬಸನಗೌಡ ಪಾಟೀಲ ಯತ್ನಾಳ </p></div>

ಬಿ.ವೈ ವಿಜಯೇಂದ್ರ, ಬಸನಗೌಡ ಪಾಟೀಲ ಯತ್ನಾಳ

   

ಬೆಂಗಳೂರು: ‘ಪಕ್ಷ ವಿರೋಧಿ ಚಟುವಟಿಕೆ ನಡೆಸಲು ಬಸನಗೌಡ ಪಾಟೀಲ ಯತ್ನಾಳ ಅವರು ಸೋನಿಯಾ ಮತ್ತು ರಾಹುಲ್‌ ಗಾಂಧಿ ಅವರಿಂದ ಸುಪಾರಿ ಪಡೆದಿದ್ದಾರೆ. ಈ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಅವರನ್ನು ಪಕ್ಷದಿಂದ ಕೂಡಲೇ ಉಚ್ಛಾಟನೆ’ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರ ಬಣ ಒತ್ತಾಯಿಸಿದೆ.

ಬಿಜೆಪಿಯ 20ಕ್ಕೂ ಹೆಚ್ಚು ಮಾಜಿ ಶಾಸಕರು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮನೆಯಲ್ಲಿ ಶುಕ್ರವಾರ ಸಭೆ ನಡೆಸಿದರು. ಸಭೆಯಲ್ಲಿ ಎಂ.ಪಿ.ರೇಣುಖಾಚಾರ್ಯ, ಹರತಾಳ್‌ ಹಾಲಪ್ಪ, ಪರಣ್ಣ ಮನವಳ್ಳಿ, ಬಸವರಾಜ್ ದಡೇಸೂರ್, ಗೋಪಾಲ್ ನಾಯಕ್, ಸುನೀಲ್ ಹೆಗಡೆ, ಸುನೀಲ್ ನಾಯಕ್, ಬಸವರಾಜ ನಾಯಕ್, ಪಿಳ್ಳೆ ಮುನಿಸ್ವಾಮಪ್ಪ, ಬೆಳ್ಳಿ ಪ್ರಕಾಶ್, ಮಸಾಲೆ ಜಯರಾಮ್, ಎಂ.ಡಿ.ಲಕ್ಷ್ಮಿನಾರಾಯಣ ಇದ್ದರು.

ADVERTISEMENT

ಆನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಎಂ.ಪಿ.ರೇಣುಖಾಚಾರ್ಯ ಮಾತನಾಡಿ, ‘ಕರ್ನಾಟಕದಲ್ಲಿ ಬಿಜೆಪಿಯನ್ನು ಮುಗಿಸಬೇಕೆಂದು ಕಾಂಗ್ರೆಸ್ ನಾಯಕರು ಸುಫಾರಿ ನೀಡಿದ್ದಾರೆ. ಆದ್ದರಿಂದಲೇ ಯತ್ನಾಳ್ ಎಲ್ಲರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಅವರು ಬಾಯಿ ಮುಚ್ಚಿಕೊಂಡು ಸುಮ್ಮನಿರದಿದ್ದರೆ ನಾವು ಬೀದಿಗೆ ಬರಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.

‘ಪಕ್ಷದ ಒಳಿತಿಗಾಗಿ ಹಿರಿಯ ನಾಯಕ ಸದಾನಂದಗೌಡರು ಸಲಹೆ ನೀಡಿದರೆ, ಅವರ ವಿರುದ್ಧವೇ ಹೇಳಿಕೆ ನೀಡುವಷ್ಟು ಯತ್ನಾಳ್‌ ಮಹಾನಾಯಕರಾಗಿದ್ದಾರೆ. ಸದಾನಂದಗೌಡರದ್ದು ಬಿಚ್ಚಿಡುತ್ತೇನೆ ಎಂದಿದ್ದಾರೆ. ಏನು ಬಿಚ್ಚಿಡುತ್ತೀಯೋ ನೋಡೋಣ. ನೀನೊಬ್ಬ ನಾಗರಹಾವು, ಬ್ಲ್ಯಾಕ್‌ಮೇಲರ್‌’ ಎಂದು ಏಕವಚನದಲ್ಲಿ ಕಿಡಿಕಾರಿದರು.

‘ಪಕ್ಷಕ್ಕೆ ಯತ್ನಾಳ ಕೊಡುಗೆ ಏನು? ವಿಜಯಪುರದಲ್ಲಿ ತಾವೊಬ್ಬ ಗೆದ್ದು, ಉಳಿದೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಲು ಮತ್ತು ಶಿಗ್ಗಾವಿ ಉಪಚುನಾವಣೆಯಲ್ಲಿ ಭರತ್ ಬೊಮ್ಮಾಯಿ ಸೋಲಲೂ ಯತ್ನಾಳ್‌ ಕಾರಣ’ ಎಂದು ಆರೋಪಿಸಿದರು.

‘ಶೋಭಾ ಕರಂದ್ಲಾಜೆ ಮತ್ತು ಪ್ರಲ್ಹಾದ್‌ ಜೋಷಿ ವಕ್ಫ್ ಹೋರಾಟಕ್ಕೆ ಬೆಂಬಲ ಕೊಟ್ಟರೇ ಹೊರತು, ನಿಮಗಲ್ಲ. ಸಂಘರ್ಷಕ್ಕೆ ಇಳಿಯಲು ನಿಮಗೆ ಅನುಮತಿ ಕೊಟ್ಟ ರಾಷ್ಟ್ರೀಯ ನಾಯಕರು ಯಾರು? ಪ್ರಧಾನಿ ನರೇಂದ್ರ ಮೋದಿ ಅವರಿಗಿಂತಾ ದೊಡ್ಡವನಾಗಿದ್ದೀರಾ’ ಎಂದು ಯತ್ನಾಳ್‌ ಅವರನ್ನು ಪ್ರಶ್ನಿಸಿದರು.

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ‘ನಮ್ಮಲ್ಲಿ ಯಾವುದೇ ರೀತಿಯ ಒಡಕುಗಳಿಲ್ಲ. ಕೆಲವು ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನ ಈಡೇರುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.