ADVERTISEMENT

ನಿಯೋಜನೆಗೆ ಬಂದು ‘ಸಂಘಟಿತ’ ಅಕ್ರಮ

92 ಒಎಂಆರ್ ವ್ಯತ್ಯಾಸ: ‘ಡಿಐಜಿ’ ಆಪ್ತ ಸಹಾಯಕನೂ ಆರೋಪಿ

​ಪ್ರಜಾವಾಣಿ ವಾರ್ತೆ
Published 10 ಮೇ 2022, 21:01 IST
Last Updated 10 ಮೇ 2022, 21:01 IST
   

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಪೊಲೀಸ್ ನೇಮಕಾತಿ ವಿಭಾಗದ ನೌಕರರೂ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಬೇರೆ ವಿಭಾಗದಿಂದ ‘ನಿಯೋಜನೆ’ ಮೇರೆಗೆ ಬಂದಿದ್ದ ನೌಕರರು, ಸಂಘಟಿತರಾಗಿ ಅಕ್ರಮ ಎಸಗಿರುವುದಾಗಿ ಸಿಐಡಿ ಮೂಲಗಳು ಹೇಳಿವೆ.

ನೇಮಕಾತಿ ವಿಭಾಗದ ನೌಕರರು ಸೇರಿ ಆರು ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದು, ಎಲ್ಲರನ್ನೂ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

‘ನೇಮಕಾತಿ ವಿಭಾಗದ ‘ಡಿಐಜಿ’ ಅವರ ಆಪ್ತ ಸಹಾಯಕ ಶ್ರೀನಿವಾಸ್‌ ಎಂಬಾತನನ್ನೂ ಬಂಧಿಸಲಾಗಿದೆ. ನಗರ ಸಶಸ್ತ್ರ ಮೀಸಲು (ಸಿಎಆರ್) ಪಡೆಯ ಹೆಡ್‌ ಕಾನ್‌ಸ್ಟೆಬಲ್‌ ಆಗಿದ್ದ ಶ್ರೀನಿವಾಸ್, ನಿಯೋಜನೆ ಮೇರೆಗೆ ಹಲವು ವರ್ಷಗಳ ಹಿಂದೆ ನೇಮಕಾತಿ ವಿಭಾಗಕ್ಕೆ ಬಂದಿದ್ದ. ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳನ್ನು ಸಂಪರ್ಕಿಸಿ, ಅಕ್ರಮಕ್ಕೆ ಸಹಕಾರ ನೀಡುತ್ತಿದ್ದ’ ಎಂದು ಸಿಐಡಿ ಮೂಲಗಳು ಹೇಳಿವೆ.

ADVERTISEMENT

‘ಡಿಐಜಿಗಳು ಬದಲಾದರೂ ಶ್ರೀನಿವಾಸ್ ಮಾತ್ರ ಅದೇ ಸ್ಥಾನದಲ್ಲಿ ಮುಂದುವರಿದಿದ್ದ. ವಿಭಾಗದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆ ಉತ್ತಮ ಒಡನಾಟವನ್ನೂ ಇಟ್ಟುಕೊಂಡಿದ್ದ’ ಎಂದೂ ತಿಳಿಸಿವೆ.

ನೌಕರರ ಸಂಘದ ಪ್ರತಿನಿಧಿ: ‘ಬಂಧಿತ ಮಂಜುನಾಥ್ ಸಿಎಆರ್‌ನ ಸಬ್‌ ಇನ್‌ಸ್ಪೆಕ್ಟರ್‌. ಸರ್ಕಾರಿ ನೌಕರರ ಸಂಘದ ಪೊಲೀಸ್ ಪ್ರತಿನಿಧಿ ಆಗಿದ್ದ. ಈತ, ಅಭ್ಯರ್ಥಿಗಳನ್ನು ಹುಡುಕಿ ತರುತ್ತಿದ್ದ’ ಎಂದು ಮೂಲಗಳು ಹೇಳಿವೆ.

92 ಒಎಂಆರ್‌ ಪ್ರತಿಗಳಲ್ಲಿ ವ್ಯತ್ಯಾಸ: ‘ಒಎಂಆರ್‌ ಪರೀಕ್ಷೆ ನಡೆಸಿದ್ದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ವರದಿ ನೀಡಿದ್ದಾರೆ. ಪಿಎಸ್‌ಐ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದ 545 ಅಭ್ಯರ್ಥಿಗಳ ಪೈಕಿ, 92 ಅಭ್ಯರ್ಥಿಗಳ ಒಎಂಆರ್‌ ಪ್ರತಿಗಳಲ್ಲಿ ವ್ಯತ್ಯಾಸ ಕಂಡುಬಂದಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.