ಬೆಂಗಳೂರು: ನಗರದ ವಸತಿ ಯೋಜನೆಗಳಲ್ಲಿ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವುದು ಬಿಲ್ಡರ್‌ಗಳು ಮತ್ತು ಭೂಮಾಲೀಕರ ಜಂಟಿ ಹೊಣೆಗಾರಿಕೆಯಾಗಿದ್ದು, ಈ ಯೋಜನೆಯಲ್ಲಿ ಡೆವಲಪರ್‌ಗಳು ವಿಫಲವಾದರೆ, ಭೂಮಾಲೀಕರು ಸಹ ಜವಾಬ್ದಾರರು ಎಂದು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಆದೇಶ ನೀಡಿದೆ.
ಅಲ್ಲದೆ, ಎಲ್ಲಾ ಮೂಲ ಯೋಜನಾ ದಾಖಲೆಗಳನ್ನು ಗೃಹ ಖರೀದಿದಾರರ ಸಂಘಕ್ಕೆ ಹಸ್ತಾಂತರಿಸಬೇಕು ಎಂದು ನಿರ್ದೇಶಿಸಿದೆ.
'ಮನೆ ಖರೀದಿದಾರರಿಗೆ ನೀರು ಮತ್ತು ಒಳಚರಂಡಿ ಸಂಪರ್ಕ ಒದಗಿಸುವುದು ಸೇರಿ ಶಾಸನಬದ್ಧ ನಿಯಮಗಳ ಪಾಲನೆಗೆ ವಸತಿ ಯೋಜನೆ ನಿರ್ಮಾಣಕ್ಕೆ ಜಂಟಿ ಒಪ್ಪಂದ ಮಾಡಿಕೊಂಡಿರುವ ಬಿಲ್ಡರ್‌ಗಳು ಮತ್ತು ಭೂ ಮಾಲೀಕರು ಬಾಧ್ಯಸ್ಥರು. ಡೆವಲಪರ್, ಭೂಮಾಲೀಕರು ಮತ್ತು ಗೃಹ ಖರೀದಿದಾರರ ಸಂಘವು ಜಲಮಂಡಳಿ ಅಧಿಕಾರಿಗಳೊಂದಿಗೆ ಸಮನ್ವಯದಿಂದ ನೀರು ಮತ್ತು ಒಳಚರಂಡಿ ಸಂಪರ್ಕಗಳನ್ನು ಪಡೆಯಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಆದೇಶದಲ್ಲಿ ತಿಳಿಸಿದೆ.
ಆದಿ ಡೆವಲಪರ್ಸ್ ವಿರುದ್ಧ ಎಲ್.ಅರುಣ್ ಸೇರಿ ಮೂವತ್ತು ನಿವಾಸಿಗಳು ಸಲ್ಲಿಸಿದ್ದ ದೂರನ್ನು ಆಲಿಸಿದ ಕೆ-ರೇರಾ ಅಧ್ಯಕ್ಷ ರಾಕೇಶ್ ಸಿಂಗ್ ಮತ್ತು ಸದಸ್ಯ ಜಿ.ಆರ್.ರೆಡ್ಡಿ ಅವರಿದ್ದ ಪೀಠ ಈ ಆದೇಶ ನೀಡಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ಪೀಠ, 'ಮೂಲಸೌಕರ್ಯ ಖಾತ್ರಿಪಡಿಸಿಕೊಳ್ಳುವ ಜವಾಬ್ದಾರಿ ಡೆವಲಪರ್‌ಗೆ ಮಾತ್ರ ಸೀಮಿತವಾಗಿರಬಾರದು. ಮನೆ ಖರೀದಿದಾರರ ಮೂಲ ಸೇವೆಗಳ ಲಭ್ಯತೆ ಮೇಲೆ ನೇರ ಪರಿಣಾಮ ಬೀರುವ ಜವಾಬ್ದಾರಿ ಪೂರೈಸಲು ಭೂಮಾಲೀಕರು ಸಹ ಸಮಾನ ಜವಾಬ್ದಾರರು’ ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ, ಡೆವಲಪರ್ ಮತ್ತು ಭೂಮಾಲೀಕರು ಹಕ್ಕು ಪತ್ರಗಳು, ಜಂಟಿ ಅಭಿವೃದ್ಧಿ ಒಪ್ಪಂದ, ಅನುಮೋದಿತ ಯೋಜನೆಗಳು, ಸ್ವಾಧೀನಾನುಭವ ಪ್ರಮಾಣಪತ್ರ ಮತ್ತು ಶಾಸನಬದ್ಧ ಅನುಮೋದನೆಗಳು ಸೇರಿದಂತೆ ಎಲ್ಲಾ ಮೂಲ ಯೋಜನಾ ದಾಖಲೆಗಳನ್ನು ಗೃಹ ಖರೀದಿದಾರರ ಕಲ್ಯಾಣ ಸಂಘಕ್ಕೆ ಹಸ್ತಾಂತರಿಸಬೇಕು ಎಂದು ಕೆ-ರೇರಾ ತಿಳಿಸಿದೆ.
ಆದಿ ಡೆವಲಪರ್ಸ್ ಬೆಂಗಳೂರು ಉತ್ತರ ತಾಲ್ಲೂಕಿನ ಅಗ್ರಹಾರ ಗ್ರಾಮದ ಸರ್ವೆ ನಂಬರ್ 1/2 ಮತ್ತು 18/2 ನಲ್ಲಿಆದಿ ನಾರ್ತ್ ಲೇಕ್ ಅನ್ನು ಅಭಿವೃದ್ಧಿಪಡಿಸಲು ಮುಂದಾಗಿ, ಆ ಸಂಬಂಧ ಭೂ ಮಾಲೀಕ ಬಿ.ಎ.ರಾಜಗೋಪಾಲ್ ಅವರೊಂದಿಗೆ ಜಂಟಿ ಅಭಿವೃದ್ಧಿ ಒಪ್ಪಂದ (ಜೆಡಿಎ) ಮಾಡಿಕೊಂಡಿತ್ತು. ಅಲ್ಲಿ ದೂರುದಾರ ಅರುಣ್ ಸೇರಿ ಮೂವತ್ತಕ್ಕೂ ಅಧಿಕ ಮಂದಿ ಹಣ ಹೂಡಿ ಫ್ಲ್ಯಾಟ್‌ಗಳನ್ನು ಖರೀದಿಸಿದ್ದರು.
ಡೆವಲಪರ್ ಮತ್ತು ಭೂ ಮಾಲೀಕರ ನಡುವೆ ಕ್ರಮವಾಗಿ ಶೇ 58 ಮತ್ತು ಶೇ 42ರಷ್ಟು ಹೂಡಿಕೆಗೆ ಒಪ್ಪಂದವಾಗಿತ್ತು. ಕಟ್ಟಡ ನಿರ್ಮಾಣ ಕಾರ್ಯವು ಪೂರ್ಣಗೊಂಡಿತ್ತು. ಬಹುತೇಕ ಮಂದಿಗೆ ಫ್ಲ್ಯಾಟ್‌ಗಳನ್ನು ಹಸ್ತಾಂತರ ಮಾಡಲಾಗಿತ್ತು. ಆದರೆ, ಜಲಮಂಡಳಿಯಿಂದ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸಿರಲಿಲ್ಲ.
ಜಲಮಂಡಳಿಯು ಹಲವು ಬಾರಿ ನೋಟಿಸ್ ನೀಡಿ, ಎಸ್‌ಟಿಪಿ ಸಂಪರ್ಕವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿತ್ತು. ಕಾವೇರಿ ನೀರಿನ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿ ಅದನ್ನು ಪಡೆಯುವ ಜತೆಗೆ ಒಳಚರಂಡಿ ಸಂಪರ್ಕ ಪಡೆದುಕೊಳ್ಳುವಂತೆ ಸೂಚನೆ ನೀಡಿತ್ತು. ಆದರೂ ಡೆವಲಪರ್ ಕ್ರಮ ಕೈಗೊಂಡಿರಲಿಲ್ಲ. ನೀರು ಮತ್ತು ಒಳಚರಂಡಿ ಕಾಮಗಾರಿಗಳನ್ನೂ ಪೂರ್ಣಗೊಳಿಸಿರಲಿಲ್ಲ. ಹಾಗಾಗಿ ದೂರುದಾರರು ಕೆ–ರೇರಾ ಮೊರೆ ಹೋಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.