ADVERTISEMENT

ಮೊದಲ ಎರಡು ವರ್ಷದ ನಿರ್ವಹಣೆಗೆ ₹ 291 ಕೋಟಿ ಅಗತ್ಯ: ಕೆಆರ್‌ಡಿಸಿಎಲ್‌

‘ರಸ್ತೆ ನಿರ್ವಹಣೆಗೆ ₹785 ಕೋಟಿ ಬೇಕು’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 20:25 IST
Last Updated 23 ಡಿಸೆಂಬರ್ 2021, 20:25 IST

ಬೆಂಗಳೂರು: ನಗರದ 12 ಅತಿ ದಟ್ಟಣೆ ಕಾರಿಡಾರ್‌ ರಸ್ತೆಗಳ ನಿರ್ವಹಣೆಗೆ ಐದು ವರ್ಷಗಳಲ್ಲಿ ₹ 785 ಕೋಟಿ ವೆಚ್ಚ ಮಾಡುವುದನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಸಮರ್ಥಿಸಿಕೊಂಡಿದೆ.

ನಗರದ 12 ಅತಿ ದಟ್ಟಣೆಯ ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ₹1,120.48 ಕೋಟಿ ವೆಚ್ಚದ ಯೋಜನೆಯ ಟೆಂಡರ್‌ ಪ್ರಕ್ರಿಯೆಯ ನ್ಯೂನತೆಗಳ ಬಗ್ಗೆ ಕುರಿತು ‘ಪ್ರಜಾವಾಣಿ’ ಸರಣಿ ವಿಶೇಷ ವರದಿಗಳನ್ನು ಪ್ರಕಟಿಸಿ ಗಮನ ಸೆಳೆದಿತ್ತು.

ನಾಲ್ಕು ಪ್ಯಾಕೇಜ್‌ಗಳನ್ನು ಒಳಗೊಂಡ ಈ ಯೋಜನೆಯ ಏಳು ಗಹನವಾದ ನ್ಯೂನತೆಗಳನ್ನು ಪಟ್ಟಿ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಟೆಂಡರ್‌ ಪ್ರಕ್ರಿಯೆಯನ್ನೇ ರದ್ದುಪಡಿಸಬೇಕು. ಅಲ್ಪಾವಧಿ ಟೆಂಡರ್‌ ಕರೆದು ಸಚಿವ ಸಂಪುಟದ ಮುಂದೆ ಮಂಡಿಸಬೇಕು ಎಂದೂ ಮುಖ್ಯಮಂತ್ರಿ ಅವರು ನಿರ್ದೇಶನ ನೀಡಿದ್ದರು. ಆ ಬಳಿಕ ಏಳು ನ್ಯೂನತೆಗಳ ಬಗ್ಗೆ ನಗರಾಭಿವೃದ್ಧಿ ಇಲಾಖೆಯು ಕೆಆರ್‌ಡಿಸಿಎಲ್‌ಗೆ ಪತ್ರ ಬರೆದಿತ್ತು. ನಿಗಮವು ಇವುಗಳಿಗೆ ಇದೇ 18ರಂದು ಉತ್ತರಿಸಿದೆ.

ADVERTISEMENT

12 ಕಾರಿಡಾರ್‌ಗಳಲ್ಲಿ 191 ಕಿ.ಮೀ ಉದ್ದದ ರಸ್ತೆಯನ್ನು ದೈನಂದಿನ ನಿರ್ವಹಣೆ ಮಾಡಬೇಕಿದೆ. ಪ್ರಾರಂಭಿಕ ಹಂತದ ಸುಧಾರಣೆ ಕಾಮಗಾರಿಗಳಿಗೆ ₹ 335.17 ಕೋಟಿ ವೆಚ್ಚವಾಗಲಿದೆ.ರಸ್ತೆ ಕ್ಯಾರಿಯೇಜ್ ವೇ, ಪಾದಚಾರಿ ಮಾರ್ಗ, ಚರಂಡಿ,ಮೋರಿಗಳು, ರಸ್ತೆ ವಿಭಜಕಗಳು ಹಾಗೂಜಂಕ್ಷನ್‌ಗಳ ಅಭಿವೃದ್ಧಿಗೆ, ರಸ್ತೆ ಪಕ್ಕ ಗಿಡ ಬೆಳೆಸಲು ಮತ್ತು ಸಂಚಾರ ಸಿಗ್ನಲ್‌ ಅಳವಡಿಕೆಗೆ ಇಷ್ಟು ವೆಚ್ಚ ಆಗಲಿದೆ. ಅಲ್ಲದೇ 112.29 ಕಿ.ಮೀ ಉದ್ದದ ನಾಲ್ಕು ಪಥಗಳ ರಸ್ತೆ, 78.71 ಕಿ.ಮೀ ಉದ್ದದ ಆರು ಪಥಗಳ ರಸ್ತೆ, 106.75 ಕಿ.ಮೀ ಉದ್ದದ ಸರ್ವಿಸ್‌ ರಸ್ತೆಗಳ ನಿರ್ವಹಣೆ ಮಾಡಬೇಕಿದೆ. ಇವುಗಳ ಮೊದಲ ವರ್ಷದ ನಿರ್ವಹಣೆಗೆ ₹ 141 ಕೋಟಿ ಬೇಕು. ಇವರೆಡೂ ಸೇರಿ ಮೊದಲ ವರ್ಷಕ್ಕೆ ₹ 477.29 ಕೋಟಿ ಅನುದಾನದ ಅಗತ್ಯವಿದೆ. ಬಳಿಕ ಪ್ರತಿ ವರ್ಷ ಶೇ 5ರಷ್ಟು ಹೆಚ್ಚುವರಿ ವೆಚ್ಚವಾಗುತ್ತದೆ. ಆ ಪ್ರಕಾರ ಎರಡನೇ, ಮೂರನೇ, ನಾಲ್ಕನೇ ಹಾಗೂ ಐದನೇ ವರ್ಷಗಳ ನಿರ್ವಹಣೆಗೆ, ಡಿಪಿಆರ್ ಮತ್ತು ಯೋಜನೆ ನಿರ್ವಹಣೆ ಸಲಹೆಗಾರರ ವೆಚ್ಚ, ಆಡಳಿತಾತ್ಮಕ ವೆಚ್ಚ, ಜಿಎಸ್‌ಟಿ ಹಾಗೂ ಟೆಂಡರ್‌ ಪ್ರೀಮಿಯಂ ವೆಚ್ಚಗಲೂ ಸೇರಿ ಈ ಯೋಜನೆಗೆ ಒಟ್ಟು ₹ 1120.48 ಕೋಟಿ ಅಗತ್ಯವಿದೆ ಎಂಬುದು ಕೆಆರ್‌ಡಿಸಿಎಲ್‌ ವಾದ.

191 ಕಿ.ಮೀ ಉದ್ದದ ರಸ್ತೆಗಳಲ್ಲಿ 65.85 ಕಿ.ಮೀ ಉದ್ದದ ರಸ್ತೆಗೆ ಮಾತ್ರ ಪ್ರಾರಂಭಿಕ ಹಂತದ ಸುಧಾರಣೆಯ ಕಾಮಗಾರಿ ಕೈಗೊಳ್ಳಬೇಕಿದೆ. ಇದಕ್ಕೂ ₹ 335.17 ಕೋಟಿ ವೆಚ್ಚ ಮಾಡಿದರೆ ಪ್ರತಿ ಕಿ.ಮೀಗೆ ₹6.15 ಕೋಟಿ ವೆಚ್ಚವಾಗಲಿದೆ. ಅದರಲ್ಲಿ ಎರಡು ವರ್ಷಗಳಲ್ಲಿ ಏನೇ ದೋಷ ಕಂಡುಬಂದರೂ ಗುತ್ತಿಗೆದಾರರೇ ಸರಿಪಡಿಸಬೇಕು. ಆದರೂ ಮೊದಲ ಎರಡು ವರ್ಷದಲ್ಲಿ ರಸ್ತೆ ನಿರ್ವಹಣೆಗೆ ₹ 291 ಕೋಟಿ ವೆಚ್ಚ ಮಾಡುವುದೇಕೆ ಎಂಬ ಪ್ರಶ್ನೆಗೆ ಕೆಆರ್‌ಡಿಸಿಎಲ್‌ ವಿವರಣೆ ನೀಡಿಲ್ಲ.

ಕೆಆರ್‌ಡಿಸಿಎಲ್‌ ನೀಡಿದ ವಿವರಣೆ ಪ್ರಕಾರ, ಪ್ರತಿ ಕಿ.ಮೀ ರಸ್ತೆಯ ನಿರ್ವಹಣೆಗೆ ವರ್ಷಕ್ಕೆ ₹ 74 ಲಕ್ಷ ವೆಚ್ಚವಾಗಲಿದೆ. ‘ನಿರ್ವಹಣೆ ಮಾಡಬೇಕಿರುವ ರಸ್ತೆಗಳಲ್ಲಿ 36 ಕಿ.ಮೀ ಉದ್ದದ ರಸ್ತೆ ವೈಟ್‌ ಟಾಪಿಂಗ್ ಆಗಿರುವುದು ನಿಜ. ಆದರೂ ಈ ರಸ್ತೆಗಳನ್ನು ಹಾಗೂ ಪಾದಚಾರಿ ಮಾರ್ಗಗಳನ್ನು ಗುಡಿಸಲು, ರಸ್ತೆಯ ಕಸ ತೆಗೆಸಲು, ರಸ್ತೆ ಪಕ್ಕದ ಚರಂಡಿ ಹೂಳೆತ್ತಲು ಗಿಡಗಳ ನಿರ್ವಹಣೆ ಮಾಡಲು, ಶಿಥಿಲಗೊಂಡ ರೆಂಬೆ ಕೊಂಬೆ ತೆರವುಗೊಳಿಸಲು, ರಸ್ತೆ ಗಸ್ತು ತಿರುಗಲು ಹಣ ಬಳಕೆ ಮಾಡಲಾಗುತ್ತದೆ’ ಎಂದು ನಿಗಮವು ಸಮರ್ಥನೆ
ನೀಡಿದೆ.

ಹೆಬ್ಬಾಳ– ಕೆ.ಆರ್‌.ಪುರ– ಸಿಲ್ಕ್‌ಬೋರ್ಡ್‌ ಹೊರ್ವರ್ತುಲ ರಸ್ತೆಯಲ್ಲಿ ಮೆಟ್ರೊ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಇಲ್ಲಿ ರಸ್ತೆ ಅಭಿವೃದ್ಧಿ ಮತ್ತು ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳುವುದನ್ನು ಮರುಪರಿಶೀಲಿಸುವುದಾಗಿ ನಿಗಮ ಹೇಳಿದೆ. ಆದರೆ, ಇದಕ್ಕೆ ತಗಲುವ ವೆಚ್ಚ ಕಡಿತದ ಬಗ್ಗೆ ಉತ್ತರದಲ್ಲಿ ಪ್ರಸ್ತಾಪಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.