ADVERTISEMENT

ನೂತನ ಜವಳಿ ನೀತಿ: ಎರಡು ಲಕ್ಷ ಉದ್ಯೋಗ; ಸಚಿವ ಶಿವಾನಂದ ಪಾಟೀಲ

ಐವರು ಕೈ ಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 18:51 IST
Last Updated 7 ಆಗಸ್ಟ್ 2025, 18:51 IST
   

ಬೆಂಗಳೂರು: ಜವಳಿ ಹಾಗೂ ಸಿದ್ಧ ಉಡುಪು ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಿಸಿ ಸುಮಾರು ಎರಡು ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ನೂತನ ಜವಳಿ ನೀತಿ ರೂಪಿಸಲಾಗುತ್ತಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದಲ್ಲಿ ಗುರುವಾರ ಆಯೋಜಿಸಿದ್ದ 11ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವರ ಗೈರಿನಲ್ಲಿ ಅವರ ಸಿದ್ಧ ಭಾಷಣವನ್ನು ಕಾವೇರಿ ಹ್ಯಾಂಡ್‌ ಲೂಮ್ಸ್‌ ಅಧ್ಯಕ್ಷ ಜೆ.ಬಿ.ಗಣೇಶ ಓದಿದರು.

ಜವಳಿ ಕ್ಷೇತ್ರ ಹಾಗೂ ನೇಕಾರಿಕೆ ಅಭಿವೃದ್ಧಿ, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಜನೆಗೆ ಉದ್ಯಮಿ ಸ್ನೇಹಿ ಜವಳಿ ಮತ್ತು ಸಿದ್ಧ ಉಡುಪು ನೀತಿ– 2025-30 ರೂಪಿಸಲಾಗುವುದು. ಜವಳಿ ಮತ್ತು ಸಿದ್ಧ ಉಡುಪು ನೀತಿ– 2019-24ರ ಅಡಿ ರಾಜ್ಯದಲ್ಲಿ ಒಟ್ಟು ₹3,322 ಕೋಟಿ ಬಂಡವಾಳ ಹೂಡಿಕೆಯಾಗಿದ್ದು, ಸುಮಾರು 83 ಸಾವಿರ ಉದ್ಯೋಗ ಸೃಷ್ಟಿಯಾಗಿದೆ. ಶೇಕಡ 70 ಕ್ಕಿಂತಲೂ ಅಧಿಕ ಮಹಿಳೆಯರಿಗೆ ಉದ್ಯೋಗಾವಕಾಶ ಸಿಕ್ಕಿದೆ ಎಂದರು.

ADVERTISEMENT

ಪ್ರಸ್ತುತ ಜವಳಿ ನೀತಿ ಅನುಷ್ಠಾನಕ್ಕಾಗಿ ಅನುದಾನದ ರೂಪದಲ್ಲಿ ಒಟ್ಟು ₹793.66 ಕೋಟಿ ಬಿಡುಗಡೆ ಮಾಡಿದ್ದು, 311 ಸಣ್ಣ, ಮಧ್ಯಮ ಘಟಕಗಳಿಗೆ ಹಾಗೂ ಎರಡು ಬೃಹತ್ ಯೋಜನೆಗಳಿಗೆ ಅನುದಾನ ನೀಡಲಾಗಿದೆ ಎಂದು ವಿವರಿಸಿದರು.

ವಿಧಾನ ಪರಿಷತ್‌ನ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ ಮಾತನಾಡಿ, ‘ನೇಕಾರಿಕೆ ವೃತ್ತಿಯನ್ನು ಸರ್ಕಾರ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಶೋ ರೂಂಗಳ ಸಂಖ್ಯೆ 54ರಿಂದ 8ಕ್ಕೆ ಇಳಿದಿದೆ. ನೇಕಾರರ ನೋವು ಸರ್ಕಾರಕ್ಕೆ ಅರ್ಥ ಆಗಬೇಕು. ನೇಕಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿತ್ತು. ಶಾಸಕ  ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲಾ, ಜವಳಿ ಅಭಿವೃದ್ಧಿ ಆಯುಕ್ತೆ ಕೆ.ಜ್ಯೋತಿ, ಮುಖಂಡರಾದ ಕೆ.ಟಿ ರಾಜು, ದೇವದಾಸ್, ರವಿ ಕಲಬುರ್ಗಿ, ಶಿವಲಿಂಗ ಸ್ವಾಮೀಜಿ ಹಾಜರಿದ್ದರು.

ಬಹುಮಾನ ಪುರಸ್ಕೃತರು: ಐವರು ಕೈಮಗ್ಗ ನೇಕಾರರಿಗೆ ಸ್ಮರಣಿಕೆಯೊಂದಿಗೆ, ನಗದು ಬಹುಮಾನ ನೀಡಿ ಗೌರವಿಸಲಾಯಿತು.
ರೇಷ್ಮೆ ವಿಭಾಗ; ವೈ.ಎನ್‌. ಹೊಸಕೋಟೆಯ ಎಂ.ವಿ. ಪ್ರಕಾಶ್‌ (ಪ್ರಥಮ), ಚಿತ್ರದುರ್ಗದ ಸುರೇಶ್‌ ಡಿ.ಎಸ್‌. (ದ್ವಿತೀಯ)
ಹತ್ತಿ ವಿಭಾಗ: ಗಜೇಂದ್ರಗಡದ ತೇಜಪ್ಪ ಚಿನ್ನೂರ (ಪ್ರಥಮ), ಬಾಗಲಕೋಟೆಯ ಕಮತಗಿಯ ಲಕ್ಷ್ಮಣ ಕಕ್ಕಣ್ಣವರ (ದ್ವಿತೀಯ)
ಉಣ್ಣೆ ವಿಭಾಗ: ಕೊಂಡ್ಲಹಳ್ಳಿಯ ಕೆ.ಎಂ. ಬಜ್ಜಪ್ಪ (ಪ್ರಥಮ)

ಏರ್‌ಪೋರ್ಟ್‌ನಲ್ಲಿ ಶೋರೂಂ

ರಾಜ್ಯದ ಕೈಮಗ್ಗ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್‌ ಮಾಡುವ ಅಗತ್ಯವಿದ್ದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ಆರಂಭಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಹೇಳಿದರು.

ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬದಲಾದ ಕಾಲಕ್ಕೆ ಅನುಗುಣವಾಗಿ ಸಾಂಪ್ರದಾಯಿಕ ಕೈಮಗ್ಗ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್‌ ಮಾಡಬೇಕಾದರೆ ಕೆಲ ಸುಧಾರಣೆ ಮಾಡಬೇಕಾಗುತ್ತದೆ ಎಂದರು. ನೇಕಾರರ ಸಮ್ಮಾನ್ ಯೋಜನೆಯಡಿ 2024-25ನೇ ಸಾಲಿನಲ್ಲಿ 30789 ಕೈಮಗ್ಗ ನೇಕಾರರಿಗೆ ತಲಾ ₹5 ಸಾವಿರ ಪರಿಹಾರಧನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ. ಸರ್ಕಾರದಿಂದ ₹3 ಲಕ್ಷದಿಂದ ₹30 ಲಕ್ಷದವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.