
ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟದ ಮುಂದಿನ ನಿರ್ಧಾರವನ್ನು ಗುರುವಾರ ಪ್ರಕಟಿಸಿದ ಸಂದರ್ಭದಲ್ಲಿ ಮುಖಂಡರ ನಿಲುವನ್ನು ಸಾರಿಗೆ ನೌಕರರು ವಿರೋಧಿಸಿದರು.
–ಪ್ರಜಾವಾಣಿ ಚಿತ್ರ
ಬೆಂಗಳೂರು: ವೇತನ ಪರಿಷ್ಕರಣೆ, ಹಿಂಬಾಕಿ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಬೆಂಗಳೂರು ಚಲೊ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ರಾಜ್ಯ ಸರ್ಕಾರ ಮಾರ್ಚ್ 2ರ ಒಳಗೆ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
38 ತಿಂಗಳ ಹಿಂಬಾಕಿ ನೀಡಿಲ್ಲ. 2024ರ ಜನವರಿಯಿಂದ ವೇತನ ಪರಿಷ್ಕರಣೆ ನಡೆಸಬೇಕಿತ್ತು. ಹಲವು ಬಾರಿ ಸರ್ಕಾರದೊಂದಿಗೆ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗುರುವಾರ ಬೆಂಗಳೂರು ಚಲೊ ಕಾರ್ಯಕ್ರಮವನ್ನು ಸ್ವಾತಂತ್ರ್ಯ ಉದ್ಯಾನದಲ್ಲಿ ಜಂಟಿ ಕ್ರಿಯಾ ಸಮಿತಿ ಹಮ್ಮಿಕೊಂಡಿತ್ತು.
ಸರ್ಕಾರದ ಸ್ಪಂದನೆ ನೋಡಿ ಮುಂದಿನ ಹೋರಾಟದ ಬಗ್ಗೆ ಗುರುವಾರ ಸಂಜೆ 4ಕ್ಕೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಮಿತಿ ಮುಖಂಡರು ಹೇಳಿದ್ದರು. ಈ ನಡುವೆ ಕೆಲವರು ಗುರುವಾರ ಸಂಜೆಯಿಂದಲೇ ಮುಷ್ಕರ ನಡೆಯಲಿದೆ ಎಂದು ಸುದ್ದಿ ಹಬ್ಬಿಸಿದ್ದರು. ‘ಯಾವುದೇ ಮುಷ್ಕರ ಕೈಗೊಳ್ಳುವುದಿಲ್ಲ. ನಾಲ್ಕು ನಿಗಮಗಳಲ್ಲಿ 1.10 ಲಕ್ಷಕ್ಕೂ ಅಧಿಕ ನೌಕರರಿದ್ದು, ಅವರ ಭವಿಷ್ಯವನ್ನೂ ನೋಡಿಕೊಳ್ಳಬೇಕಾಗುತ್ತದೆ. ಉದ್ವೇಗದಲ್ಲಿ ನಿರ್ಧಾರ ಕೈಗೊಳ್ಳಲಾಗುವುದಿಲ್ಲ’ ಎಂದು ಮುಖಂಡರು ಸ್ಪಷ್ಟಪಡಿಸಿದರು.
ಮಾತುಕತೆಗೆ ಬನ್ನಿ: ‘ಸರ್ಕಾರವು 38 ತಿಂಗಳ ಹಿಂಬಾಕಿಯಲ್ಲಿ 26 ತಿಂಗಳ ಹಿಂಬಾಕಿಯನ್ನು ಬಿಡುಗಡೆ ಮಾಡುವುದಾಗಿ ಬುಧವಾರ ಘೋಷಿಸಿದೆ. ಅಲ್ಲದೇ ವೇತನ ಪರಿಷ್ಕರಣೆಯನ್ನು 2025ರ ಏಪ್ರಿಲ್ 1ಕ್ಕೆ ಅನ್ವಯವಾಗುವಂತೆ ಮಾಡಲು ಸಾರಿಗೆ ಕಾರ್ಮಿಕ ಮುಖಂಡರೊಂದಿಗೆ ಚರ್ಚೆ ನಡೆಸಲು ಸಾರಿಗೆ ಸಚಿವರು ಸೂಚನೆ ನೀಡಿದ್ದಾರೆ. ನಾವು ಒಂದು ಹೆಜ್ಜೆ ಮುಂದೆ ಬಂದಿದ್ದೇವೆ. ನೀವು ಕೂಡ ಒಂದು ಹೆಜ್ಜೆ ಮುಂದೆ ಬಂದರೆ ಸಮಸ್ಯೆ ಇತ್ಯರ್ಥವಾಗುತ್ತದೆ. ಈ ಬಗ್ಗೆ ಮಾತುಕತೆಗೆ ಬನ್ನಿ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ತಿಳಿಸಿದರು.
‘ಸರ್ಕಾರದ ನಿರ್ಧಾರವನ್ನು ನಾವು ಒಪ್ಪುವುದಿಲ್ಲ. ಎಲ್ಲ 38 ತಿಂಗಳ ಹಿಂಬಾಕಿ ನೀಡಬೇಕು. 2025ರಿಂದ ವೇತನ ಪರಿಷ್ಕರಣೆ ಮಾಡಿದರೆ ಒಂದು ವರ್ಷ ನಷ್ಟವಾಗುತ್ತದೆ. 2024ರ ಜನವರಿಯಿಂದಲೇ ವೇತನ ಪರಿಷ್ಕರಿಸಬೇಕು‘ ಎಂದು ಪ್ರತಿಭಟನಕಾರರು ಉತ್ತರಿಸಿದರು.
ಕ್ರಿಯಾ ಸಮಿತಿಯ ಬಿ. ಜಯದೇವ ಅರಸ್, ವಿಜಯ ಭಾಸ್ಕರ ಡಿ.ಎ., ಎಚ್.ಎಸ್. ಮಂಜುನಾಥ್, ಸಿದ್ದನಗೌಡ ಪಾಟೀಲ, ಪ್ರಕಾಶ್, ಜ್ಯೋತಿ ಅನಂತಸುಬ್ಬರಾವ್, ಎಚ್.ಡಿ. ರೇವಪ್ಪ, ಮೋಹನ್‌ದಾಸ್, ವಿವಿಧ ಮುಖಂಡರು ಭಾಗವಹಿಸಿದ್ದರು.
ನೌಕರರ ವಿರೋಧ
ಪ್ರತಿಭಟನೆಯನ್ನು ಗುರುವಾರ ಒಂದೇ ದಿನಕ್ಕೆ ಮುಕ್ತಾಯಗೊಳಿಸಿರುವುದನ್ನು ಜಯದೇವ ಅರಸ್ ಘೊಷಣೆ ಮಾಡುತ್ತಿದ್ದಂತೆ ಕೆಲವು ನೌಕರರು ವಿರೋಧ ವ್ಯಕ್ತಪಡಿಸಿದರು.
‘ಪ್ರತಿಭಟನೆ ಸ್ಥಗಿತಗೊಳಿಸಬಾರದು ನ್ಯಾಯ ಸಿಗುವವರೆಗೆ ಧರಣಿ ಕುಳಿತುಕೊಳ್ಳಬೇಕು ಮುಷ್ಕರ ನಡೆಸಬೇಕು’ ಎಂದು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಲಹೆ ನೀಡಿದರು.
‘ನೀವು ಪ್ರತಿಭಟನೆ ಸ್ಥಗಿತಗೊಳಿಸಲು ಎಷ್ಟು ತೆಗೆದುಕೊಂಡಿದ್ದೀರಿ’ ಎಂದು ಕೆಲವರು ಪ್ರಶ್ನಿಸಿದರು. ಕೆಲ ಹೊತ್ತು ಗೊಂದಲದ ಗೂಡಾಯಿತು. ವಿರೋಧ ವ್ಯಕ್ತಪಡಿಸಿ ಕೂಗಾಡುತ್ತಿದ್ದವರನ್ನು ನಿಯಂತ್ರಿಸಿ ಕೆಲವರನ್ನು ಹೊರಗೆ ಕಳಿಸಿ ಪೊಲೀಸರು ಗೊಂದಲ ತಿಳಿಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.