
ಬೆಂಗಳೂರು: ‘ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ವ್ಯವಹಾರದ ಬಗೆಗಿನ ಆರೋಪಗಳ ತನಿಖೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸಬೇಕು’ ಎಂದು ಮಹೇಶ ಜೋಶಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಅವರು ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
‘ರಾಜಕೀಯ ನಂಟು ಹೊಂದಿರುವ ಮಂಡ್ಯದ ಪ್ರೊ. ಜಯಪ್ರಕಾಶ್ ಗೌಡ, ಕೆ.ಟಿ. ಶ್ರೀಕಂಠೇಗೌಡ, ರಾಮನಗರದ ಸಿ.ಕೆ. ರಾಮೇಗೌಡ, ಎಸ್.ಜಿ. ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ವಸುಂಧರಾ ಭೂಪತಿ, ಆರ್.ಜಿ.ಹಳ್ಳಿ ನಾಗರಾಜ್, ಹಂಪ ನಾಗರಾಜಯ್ಯ ಮೊದಲಾದ ಬೆರಳೆಣಿಕೆಯಷ್ಟು ಮಂದಿ ಪೂರ್ವಗ್ರಹ ಪೀಡಿತರಾಗಿದ್ದಾರೆ. ಕಸಾಪ ಚುನಾವಣೆ ವೇಳೆಯಲ್ಲಿಯೂ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದರು. ಅಂತಹವರು ನೀಡಿರುವ ದೂರು ಆಧರಿಸಿ ವಿಚಾರಣಾಧಿಕಾರಿಗಳನ್ನು ನೇಮಿಸಲಾಗಿದೆ. ಈ ಕಾರಣಕ್ಕೆ ನಡೆಯುತ್ತಿರುವ ವಿಚಾರಣೆಯು ನಿಷ್ಪಕ್ಷಪಾತ ಹಾಗೂ ನ್ಯಾಯೋಚಿತವಾಗಿ ನಡೆಯುತ್ತಿದೆ ಎಂಬ ವಿಶ್ವಾಸವಿಲ್ಲ’ ಎಂದಿದ್ದಾರೆ.
‘ಈ ಕೆಲವರು ದುರುದ್ದೇಶದಿಂದ ಕಸಾಪ, ನನ್ನ ಮೇಲೆ ಮತ್ತು ಕಾರ್ಯಕಾರಿ ಸಮಿತಿಯ ವಿರುದ್ಧ ಅಪಪ್ರಚಾರ ಮಾಡಿಸುತ್ತಾ, ನಿರಂತರ ದೂರು ನೀಡುತ್ತಿದ್ದಾರೆ. ಕಸಾಪ ಹಾಗೂ ನನ್ನನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ವಿಚಾರಣಾಧಿಕಾರಿಯು ವಿಚಾರಣೆ ನಡೆಸದೆ ವರದಿ ನೀಡುವ ಬಗ್ಗೆ ಅನುಮಾನವಿದೆ. ಹೀಗಾಗಿ, ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.
‘ಈ ಹಿಂದೆ ಹಂಪ ನಾಗರಾಜಯ್ಯ ಅವರ ವಿರುದ್ಧ ಆರೋಪಗಳು ಎದುರಾದಾಗ ನ್ಯಾಯಮೂರ್ತಿ ಪಿ.ಕೆ. ಶ್ಯಾಮ್ ಸುಂದರ್ ಅವರ ಏಕ ಸದಸ್ಯ ಆಯೋಗ ರಚಿಸಿ, ವಿಚಾರಣೆ ನಡೆಸಲಾಗಿತ್ತು. ಅದೇ ರೀತಿ, ಈಗಲೂ ಏಕ ಸದಸ್ಯ ವಿಚಾರಣಾ ಆಯೋಗ ರಚಿಸಿ, ನ್ಯಾಯ ದೊರಕಿಸಿ ಕೊಡಬೇಕು’ ಎಂದು ಮನವಿ ಮಾಡಿದ್ದಾರೆ.
‘ಕಸಾಪದ ಎಲ್ಲ ಕಾರ್ಯಚಟುವಟಿಕೆಗಳ ವಿಷಯದಲ್ಲಿ ಅಧ್ಯಕ್ಷರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲು ಪರಿಷತ್ತಿನ ನಿಯಮಗಳ ಅಡಿ ಆಸ್ಪದವಿಲ್ಲ. ಬಹುಮತದ ಒಪ್ಪಿಗೆ ನಂತರ ಚಟುವಟಿಕೆಗಳು ಜಾರಿಗೆ ಬರುತ್ತವೆ. ಅಲ್ಲಿ ತೆಗೆದುಕೊಂಡ ನಿರ್ಣಯಗಳು ಸಾಮೂಹಿಕ ಜವಾಬ್ದಾರಿಗಳಾಗಿರುತ್ತವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.