ADVERTISEMENT

ಬೆಂಗಳೂರು ವಿಮಾನ ನಿಲ್ದಾಣ: ಒಂದೇ ವರ್ಷದಲ್ಲಿ 4.38 ಲಕ್ಷ ಜನ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 18:08 IST
Last Updated 15 ಜನವರಿ 2026, 18:08 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರುತ್ತಿರುವ ವಿಮಾನ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರುತ್ತಿರುವ ವಿಮಾನ   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಕಳೆದ ವರ್ಷ (2025) ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

4,38,20,000 ಜನರು ಪ್ರಯಾಣಿಸಿದ್ದಾರೆ. ನವೆಂಬರ್‌ 23ರಂದು ಒಂದೇ ದಿನ 1,37,317 ಪ್ರಯಾಣಿಸಿರುವುದು ದಾಖಲೆಯಾಗಿದೆ. ಸಾಮಾನ್ಯವಾಗಿ ದೈನಂದಿನ ಸರಾಸರಿ ವಿಮಾನ ಸಂಚಾರ 765 ಇರುತ್ತಿದ್ದು, ಅ.19ರಂದು 837 ಬಾರಿ ವಿಮಾನಗಳು ಹಾರಾಟ ನಡೆಸಿದ್ದು, ಇದು ಗರಿಷ್ಠ ವಾಯು ಸಂಚಾರ ನಿರ್ವಹಣೆಯಾಗಿದೆ. ಭಾರತೀಯ ವಿಮಾನ ನಿಲ್ದಾಣಗಳಲ್ಲಿ ದೇಶೀಯ ವಿಮಾನಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದ್ದ ಕೆಐಎ ಅಕ್ಟೋಬರ್‌ನಲ್ಲಿ ಎರಡನೇ ಸ್ಥಾನಕ್ಕೇರಿದೆ.

2024ರಲ್ಲಿ ದೈನಂದಿನ ಪ್ರಯಾಣಿಕರ ಸಂಚಾರ ಶೇ 38 ಇದ್ದಿದ್ದು, 2025ರಲ್ಲಿ ಶೇ 51ಕ್ಕೆ ಏರಿದೆ. ಅಂತರರಾಷ್ಟ್ರೀಯ ಪ್ರಯಾಣಿಕರ ಸಂಚಾರದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, 2025ರಲ್ಲಿ ಶೇ 28.7ರಷ್ಟು ಹೆಚ್ಚಳವಾಗಿರುವುದು ದಾಖಲೆಯಾಗಿದೆ. ಇದೇ ಸಮಯದಲ್ಲಿ ಐದು ಹೊಸ ದೇಶೀಯ ಮತ್ತು ಐದು ಹೊಸ ಅಂತಾರಾಷ್ಟ್ರೀಯ ಮಾರ್ಗಗಳ ಸೇರ್ಪಡೆಯಾಗಿವೆ ಎಂದು ಬಿಐಎಎಲ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಗಿರೀಶ್ ನಾಯರ್ ಮಾಹಿತಿ ನೀಡಿದ್ದಾರೆ.

ADVERTISEMENT

ಡಿ.31ರ ಹೊತ್ತಿಗೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 79 ದೇಶೀಯ ಮತ್ತು 34 ಅಂತರರಾಷ್ಟ್ರೀಯ ನಗರಗಳನ್ನು ಒಳಗೊಂಡ 113 ಪ್ರಯಾಣಿಕರ ತಾಣಗಳಿಗೆ ಸಂಪರ್ಕ ಹೊಂದಿದೆ. ದೆಹಲಿ, ಮುಂಬೈ, ಕೋಲ್ಕತ್ತ, ಹೈದರಾಬಾದ್ ಮತ್ತು ಪುಣೆ ಪ್ರಮುಖ ದೇಶೀಯ ತಾಣಗಳಾಗಿ ಹೊರಹೊಮ್ಮಿದರೆ, ದುಬೈ, ಅಬುಧಾಬಿ, ಸಿಂಗಪುರ, ಲಂಡನ್ ಮತ್ತು ಕೌಲಾಲಂಪುರ ಅಂತಾರಾಷ್ಟ್ರೀಯ ಜಾಲವನ್ನು ಹೊಂದಿದೆ. 2025ರಲ್ಲಿ ದೇಶೀಯ ಮಾರ್ಗದಲ್ಲಿ ಹಿಂದನ್, ಬೀದರ್, ಜೈಸಲ್ಮೇರ್, ಸಿಲ್ಚಾರ್ ಮತ್ತು ನವಿ ಮುಂಬೈ ಸೇರ್ಪಡೆಗೊಂಡಿವೆ. ಹಾಗೆಯೇ, ದಮ್ಮಾಮ್, ಹೋ ಚಿ ಮಿನ್ಹ್ ಸಿಟಿ, ಕ್ರಾಬಿ, ಹನೋಯ್ ಮತ್ತು ರಿಯಾದ್ ಅಂತರರಾಷ್ಟ್ರೀಯ ಮಾರ್ಗಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸರಕು ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇ 5ರಷ್ಟು ಬೆಳವಣಿಗೆಯಾಗುತ್ತಿದ್ದು, 2025ರಲ್ಲಿ 5,20,985 ಟನ್‌ಗಳ ನಿರ್ವಹಣೆಯಾಗಿದೆ. ಆ.7ರಂದು ಒಂದೇ ದಿನ 2,207 ಟನ್‌ಗಳ ಸರಕು ಸಾಗಣೆಯ ದಾಖಲೆ ಬರೆದಿದೆ.

ವಿಮಾನ ನಿಲ್ದಾಣವು ಈಗ 15 ದೇಶೀಯ ಮತ್ತು ಅಂತರರಾಷ್ಟ್ರೀಯ ಸರಕು ಸಾಗಣೆ ವಿಮಾನಯಾನ ಸಂಸ್ಥೆಗಳ ಮೂಲಕ 37 ಸರಕು ಸಾಗಣೆ ತಾಣಗಳಿಗೆ ಸಂಪರ್ಕ ಹೊಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.