ADVERTISEMENT

ಕೆನರಾ ಬ್ಯಾಂಕ್‌ಗೆ ₹ 3 ಕೋಟಿ ವಂಚನೆ: ಮ್ಯಾನೇಜರ್ ಹುಡುಕಲು ಹೊರ ರಾಜ್ಯಕ್ಕೆ ತಂಡ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 23:30 IST
Last Updated 18 ಜನವರಿ 2026, 23:30 IST
<div class="paragraphs"><p>ಕೆನರಾ ಬ್ಯಾಂಕ್‌ ಹಾಗೂ ಎನ್.ರಘು</p></div>

ಕೆನರಾ ಬ್ಯಾಂಕ್‌ ಹಾಗೂ ಎನ್.ರಘು

   

ಬೆಂಗಳೂರು: ‌ಕೆನರಾ ಬ್ಯಾಂಕ್‌ನ ಮಲ್ಲೇಶ್ವರ ಶಾಖೆಗೆ ಸೇರಿದ ₹3.11 ಕೋಟಿಯನ್ನು ದೋಚಿಕೊಂಡು ಪರಾರಿಯಾಗಿರುವ ಹಿರಿಯ ವ್ಯವಸ್ಥಾಪಕ ಎನ್‌.ರಘು ಅವರ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

ಗ್ರಾಹಕರ ಹೆಸರಿನಲ್ಲಿ ಚಿನ್ನದ ಸಾಲ ತೆಗೆದುಕೊಂಡು ನಾಪತ್ತೆ ಆಗಿರುವ ಆರೋಪಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಕೆನರಾ ಬ್ಯಾಂಕ್‌ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಕಬೀಂದ್ರ ಕುಮಾರ್ ಸಾಹು ಅವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿತ್ತು.

ADVERTISEMENT

ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದು, ಆರೋಪಿ ಆಂಧ್ರಪ್ರದೇಶದಲ್ಲಿ ಅಡಗಿರುವ ಸುಳಿವು ಸಿಕ್ಕಿದೆ. ಉತ್ತರ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ವಿಶೇಷ ತಂಡ ಆಂಧ್ರಪ್ರದೇಶಕ್ಕೆ ತೆರಳಿ, ಆರೋಪಿಯ ಬಂಧನಕ್ಕೆ ಮುಂದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ರಘು ಅವರು 40ಕ್ಕೂ ಹೆಚ್ಚು ಗ್ರಾಹಕರ ಹೆಸರಿನಲ್ಲಿ ಚಿನ್ನದ ಮೇಲೆ ಸಾಲ ಪಡೆದು, ಆ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಬ್ಯಾಂಕ್‌–ಗ್ರಾಹಕರಿಗೆ ವಂಚಿಸಿದ್ದಾರೆ. ‘ಮನೆಯಲ್ಲಿ ಕಷ್ಟವಿದೆ. ನಿಮ್ಮ (ಗ್ರಾಹಕರು) ಹೆಸರಲ್ಲಿ ಸಾಲ ತೆಗೆದುಕೊಳ್ಳುತ್ತೇನೆ. ನನ್ನ ಬಳಿ ಚಿನ್ನವಿದ್ದು ಅದನ್ನು ಅಡಮಾನ ಇರಿಸಿ ಬ್ಯಾಂಕ್‌ನಲ್ಲಿಟ್ಟು ಸಾಲ ತೆಗೆದುಕೊಳ್ಳುತ್ತೇನೆ’ ಎಂಬುದಾಗಿ ಗ್ರಾಹಕರಿಗೆ ನಂಬಿಸುತ್ತಿದ್ದರು. ಕೆಲವು ಗ್ರಾಹಕರಿಂದ ಸಹಿ ಪಡೆದು ಸಾಲ ಪಡೆದುಕೊಂಡಿದ್ದಾರೆ’’ ಎಂದು ಪೊಲೀಸರು ಹೇಳಿದರು.

‘ಮ್ಯಾನೇಜರ್ ಮಾತು ನಂಬಿದ್ದ ಗ್ರಾಹಕರು, ಬ್ಯಾಂಕ್‌ ಖಾತೆಯ ವಿವರ, ಆಧಾರ್ ಕಾರ್ಡ್‌, ಒಟಿಪಿ ನೀಡಿದ್ದರು. ಜತೆಗೆ ರಘು ಅವರು ಚೆಕ್‌ ಸಹ ಪಡೆದುಕೊಂಡು, ಗ್ರಾಹಕರ ಹೆಸರಿನಲ್ಲಿ ಸಾಲ ಮಂಜೂರಾತಿ ಮಾಡಿಕೊಳ್ಳುತ್ತಿದ್ದರು’ ಎಂದು ತಿಳಿಸಿದರು.

ಬ್ಯಾಂಕಿನ ಮಾರ್ಗಸೂಚಿ ಪ್ರಕಾರ ಚಿನ್ನದ ಸಾಲಗಳ ತ್ರೈಮಾಸಿಕ ಮರುಮೌಲ್ಯಮಾಪನ ಹಾಗೂ ಲೆಕ್ಕ ಪರಿಶೋಧನೆ ನಡೆಸಲಾಗಿತ್ತು. ಆಗ, 41 ಸಾಲಗಳು ಕಾಲ್ಪನಿಕ ಸ್ವರೂಪದವು ಎಂಬುದು ಪತ್ತೆಯಾಗಿತ್ತು. ಅಲ್ಲದೇ, ಚಿನ್ನದ ಆಭರಣಗಳು ಇರಲಿಲ್ಲ ಎಂಬುದು ಲೆಕ್ಕ ಪರಿಶೋಧನೆ ಅಧಿಕಾರಿಗಳ ಗಮನಕ್ಕೆ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.