ADVERTISEMENT

ಕೆಂಗೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಾಣಂತಿಯರ ಊಟಕ್ಕೂ ಕತ್ತರಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 17:58 IST
Last Updated 14 ಜನವರಿ 2026, 17:58 IST
ಮಾನವ ಹಕ್ಕುಗಳ ಆಯೋಗದ ಡಿವೈಎಸ್‌ಪಿ ಸುಧೀರ್‌ ಎಂ. ಹೆಗ್ಡೆ ರೋಗಿಗಳು ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆದರು.
ಮಾನವ ಹಕ್ಕುಗಳ ಆಯೋಗದ ಡಿವೈಎಸ್‌ಪಿ ಸುಧೀರ್‌ ಎಂ. ಹೆಗ್ಡೆ ರೋಗಿಗಳು ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆದರು.   

ಕೆಂಗೇರಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿದ್ದ ಸರ್ಕಾರ ಇದೀಗ ಬಾಣಂತಿಯರಿಗೆ ಊಟವನ್ನೂ ನೀಡುತ್ತಿಲ್ಲ ಎಂಬುದು ಮಾನವ ಹಕ್ಕುಗಳ ಆಯೋಗದ ಸದಸ್ಯರು ಭೇಟಿ ನೀಡಿದಾಗ ಬಹಿರಂಗವಾಯಿತು.

ಕೆಂಗೇರಿ ಕೋಟೆ ಸಮುದಾಯ ಆರೋಗ್ಯ ಕೇಂದ್ರದ ಶಿಶು ತಜ್ಞರನ್ನು ಸರ್ಕಾರ ಏಕಾಏಕಿ ವರ್ಗಾವಣೆ ಮಾಡಿದ್ದು, ಕೆಂಗೇರಿ ಸುತ್ತಮುತ್ತಲಿನ ಗ್ರಾಮಗಳ ಗರ್ಭಿಣಿಯರಿಗೆ ತುರ್ತು ಪರಿಸ್ಥಿತಿಯಲ್ಲಿ ತೊಂದರೆಯಾಗುತ್ತಿದೆ ಎಂದು ಜಯಪ್ರಕಾಶ್ ನಾರಾಯಣ ವಿಚಾರ ವೇದಿಕೆ ವತಿಯಿಂದ ದೂರು ನೀಡಲಾಗಿತ್ತು.

ಈ  ಕಾರಣದಿಂದ ಮಾನವ ಹಕ್ಕುಗಳ ಆಯೋಗದ ಡಿವೈಎಸ್ಪಿ ಸುಧೀರ್ ಎಂ.ಹೆಗ್ಡೆ ಅವರು ಕೆಂಗೇರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ADVERTISEMENT

ಈ ಹಿಂದೆ ಎನ್‌ಜಿಒ ಮೂಲಕ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಸರ್ಕಾರದಿಂದ ಊಟದ ಬಿಲ್ ಪಾವತಿಯಾಗದ ಕಾರಣ ಊಟದ ವ್ಯವಸ್ಥೆ ಸ್ಥಗಿತಗೊಂಡಿದೆ ಎಂದು ವೈದ್ಯಾಧಿಕಾರಿ ಕೆ.ಟಿ.ವೆಂಕಟೇಶ್ ತಿಳಿಸಿದ್ದಾರೆ. ಸರ್ಕಾರದ ನಿಯಮಗಳ ಪ್ರಕಾರ ಗರಿಷ್ಠ 5 ದಿನಗಳವರೆಗೆ ಬಾಣಂತಿಯರಿಗೆ ಊಟದ ವ್ಯವಸ್ಥೆ ಕಲ್ಪಿಸಬೇಕಿದೆ. ಬಾಣಂತಿಯರು ಮನೆಯಿಂದಲೇ ಊಟವನ್ನು ತರಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ವೇದಿಕೆ ಅಧ್ಯಕ್ಷ ಬಿ.ಎಂ.ಶಿವಕುಮಾರ್‌ ಹೇಳಿದರು.

ಡಿವೈಎಸ್‌ಪಿ ಕೆಂಡಾಮಂಡಲ: ಆಡಳಿತ ವೈದ್ಯಾಧಿಕಾರಿ ಡಾ.ಕೆ.ಟಿ.ವೆಂಕಟೇಶ್ ಅವರು ಮಾಹಿತಿ  ಕೊಡಲು ನಿರಾಕರಿಸಿದ ಸಂದರ್ಭದಲ್ಲಿ ಅವರನ್ನು ತರಾಟೆಗೆ ತೆಗೆದುಕೊಂಡ ಡಿವೈಎಸ್ಪಿ ಸುಧೀರ್‌ ಹೆಗ್ಡೆ, ‘ಆಯೋಗದ ಅಧಿಕಾರಿಗೆ ಮಾಹಿತಿ ನೀಡುವುದು ಕಾನೂನಿನ ಅನ್ವಯ ನಿಮ್ಮ ಜವಾಬ್ದಾರಿ. ಮಾಹಿತಿ ನಿರಾಕರಿಸಿದರೆ ಪ್ರಕರಣ ದಾಖಲು ಮಾಡಬಹುದಾಗಿದೆ’ ಎಂದು ತರಾಟೆಗೆ ತೆಗೆದುಕೊಂಡರು.

‘ದೂರಿಗೆ ಸಂಬಂಧಿಸಿದಂತೆ ವೈದ್ಯಾಧಿಕಾರಿ, ರೋಗಿಗಳು ಹಾಗೂ ಸ್ಥಳೀಯರಿಂದ ಆಡಿಯೊ, ವಿಡಿಯೊ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ. ತ್ರಿಸದಸ್ಯ ಪೀಠದ ಮೂಲಕ ನೋಟಿಸ್ ಜಾರಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಸಮುದಾಯ ಆಸ್ಪತ್ರೆಗೆ ಹೆರಿಗೆಗಾಗಿ ಬರುವವರಿಗೆ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಹೇಳುವ ಮೂಲಕ 30ಕ್ಕಿಂತ ಕಡಿಮೆ ಹೆರಿಗೆ ನಡೆಸಲಾಗುತ್ತಿದೆ ಎಂದು ಬಿಂಬಿಸುವ ಕೆಲಸವಾಗುತ್ತಿದೆ. ಸರ್ಕಾರ ಸಮುದಾಯ ಆಸ್ಪತ್ರೆಗೆ ಹೆಚ್ಚಿನ ಮೂಲಭೂತ ಸೌಕರ್ಯ ಕಲ್ಪಿಸಿ ಬಡವರು, ಮಧ್ಯಮ ವರ್ಗದವರಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು’ ಎಂದು ಕೆಂಗೇರಿ ಕೋಟೆ ನಿವಾಸಿ ಆನಂದ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.