ADVERTISEMENT

ಕೆಂಗೇರಿ: ಬೀದಿನಾಯಿಗಳ ಆಶ್ರಯ ತಾಣಕ್ಕೆ ಸ್ಥಳೀಯರ ವಿರೋಧ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 20:26 IST
Last Updated 6 ಡಿಸೆಂಬರ್ 2025, 20:26 IST
ವಳಗೆರೆಹಳ್ಳಿ ನಿವಾಸಿಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು. 
ವಳಗೆರೆಹಳ್ಳಿ ನಿವಾಸಿಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.    

ಕೆಂಗೇರಿ: ಸುಭಾಷ್ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಪಾ ಲಿವಿಂಗ್ ಅನಿಮಲ್ಸ್ (ಪ್ರಾಣಿಗಳ ಆಶ್ರಯ ಕೇಂದ್ರ) ಸಂಸ್ಥೆಯನ್ನು ತಾತ್ಕಾಲಿಕ ನಾಯಿಗಳ ಆಶ್ರಯ ತಾಣವಾಗಿ ವಿಸ್ತರಿಸುವ ಜಿಬಿಎ ಪ್ರಸ್ತಾವಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.

‘ಸುಪ್ರೀಂಕೋರ್ಟ್ ಸೂಚನೆಯಂತೆ ಬೀದಿ ನಾಯಿಗಳ ಆರೈಕೆಗಾಗಿ ಕೃಪಾ ಕೇಂದ್ರವನ್ನು ತಾತ್ಕಾಲಿಕ ಆಶ್ರಯ ತಾಣವಾಗಿಸುವ ಪ್ರಸ್ತಾವವನ್ನು ಪಾಲಿಕೆ ಸರ್ಕಾರದ ಮುಂದಿಟ್ಟಿದೆ. ಸಂಸ್ಥೆಯು ನಿಯಮ ಉಲ್ಲಂಘಿಸಿ ಬೀದಿ ನಾಯಿಗಳು ಹಾಗೂ ರೋಗ ಪೀಡಿತ ಪಶುಗಳನ್ನು ತಂದಿಟ್ಟುಕೊಂಡು ಸುತ್ತಮುತ್ತಲ ನಾಗರಿಕರಿಗೆ ರೋಗ ಹರಡಿಸುತ್ತಿದೆ. ಇದರಿಂದ ನಾಗರಿಕರಿಗೆ ಮತ್ತಷ್ಟು ತೊಂದರೆಯಾಗಲಿದೆ’ ಎಂದು ವಳಗೆರೆಹಳ್ಳಿ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಎನ್.ಕದರಪ್ಪ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

‘ಸಂಸ್ಥೆಯು ಸ್ವಚ್ಛತೆ ಕಾಪಾಡದ ಕಾರಣ 1 ಕಿ.ಮೀ ವ್ಯಾಪ್ತಿಯವರೆಗೆ ಕೆಟ್ಟ ವಾಸನೆ ಹರಡುತ್ತಿದೆ. ಕಡಿಮೆ ಸ್ಥಳದಲ್ಲಿ ಹೆಚ್ಚು ನಾಯಿಗಳನ್ನು ಕೂಡಿ ಹಾಕಿರುವುದರಿಂದ ಪರಸ್ಪರ ಕಚ್ಚಾಡುತ್ತವೆ. ಸತ್ತ ಪ್ರಾಣಿಗಳನ್ನು ಕೇಂದ್ರದ ಸಮೀಪದ ಕೆರೆಯ ಅಂಚಿನಲ್ಲಿ ಹೂಳುತ್ತಿರುವ ಕಾರಣ ಅಂತರ್ಜಲವೂ ಮಲಿನವಾಗುತ್ತಿದೆ’ ಎಂದು ದೂರಿದರು. 

ADVERTISEMENT

ಕೂಡಲೇ ಪ್ರಸ್ತಾವನೆ ಹಿಂಪಡೆಯದಿದ್ದರೆ ಬಡಾವಣೆಯ ಸಾವಿರಾರು ಕುಟುಂಬಗಳು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಒಕ್ಕೂಟದ ಸದಸ್ಯರು ಎಚ್ಚರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.