ADVERTISEMENT

ಬೆಂಗಳೂರು | ನಗರದಲ್ಲಿ 10 ಖಾತಾ ಸೇವಾ ಕೇಂದ್ರ: ತುಷಾರ್‌ ಗಿರಿನಾಥ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 18:32 IST
Last Updated 6 ಡಿಸೆಂಬರ್ 2025, 18:32 IST
ತುಷಾರ್‌ ಗಿರಿನಾಥ್‌
ತುಷಾರ್‌ ಗಿರಿನಾಥ್‌   

ಬೆಂಗಳೂರು: ಇ– ಖಾತಾ, ಹೊಸ ಖಾತಾ, ಬಿ ಖಾತಾದಿಂದ ಎ ಖಾತಾಗೆ ಅರ್ಜಿ ಸಲ್ಲಿಸಲು ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಮಾದರಿಯಲ್ಲಿ ನಗರದಲ್ಲಿ 10 ಖಾತಾ ಸೇವಾ ಕೇಂದ್ರ ಆರಂಭಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ತಿಳಿಸಿದರು.

ಜಿಬಿಎ ವ್ಯಾಪ್ತಿಯ ಐದೂ ನಗರ ಪಾಲಿಕೆ ವ್ಯಾಪ್ತಿಯ 10 ವಲಯದಲ್ಲಿ ತಲಾ ಒಂದು ಖಾತಾ ಸೇವಾ ಕೇಂದ್ರ ಆರಂಭಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸೇವಾ ಕೇಂದ್ರದಲ್ಲಿ ಇ- ಖಾತಾ ಅರ್ಜಿ ಸಲ್ಲಿಕೆ, ಹೊಸ ಖಾತಾ ಅರ್ಜಿ ಹಾಗೂ ಬಿ ಖಾತಾ ಆಸ್ತಿಗೆ ಎ ಖಾತಾ ಪಡೆಯುವುದಕ್ಕೆ ಅರ್ಜಿ ಸಲ್ಲಿಕೆ, ಖಾತಾ ವಿತರಣೆ ಸಂಬಂಧಿಸಿದಂತೆ ಎಲ್ಲ ಕಾರ್ಯಗಳನ್ನು ಖಾತಾ ಸೇವಾ ಕೇಂದ್ರದಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ADVERTISEMENT

ಬೆಂಗಳೂರು ಒನ್‌ ಕೇಂದ್ರ ಹಾಗೂ ಒಂದು ಸಾವಿರಕ್ಕೂ ಅಧಿಕ ಖಾಸಗಿ ವ್ಯಕ್ತಿಗಳು ಇ–ಖಾತಾಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅದರೊಂದಿಗೆ ಸ್ವಯಂ ಪ್ರೇರಿತರಾಗಿ ಆಸ್ತಿ ಮಾಲೀಕರೇ ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆದರೂ, ಈವರೆಗೆ 8.21 ಲಕ್ಷ ಆಸ್ತಿ ಮಾಲೀಕರು ಅರ್ಜಿ ಸಲ್ಲಿಸಿ, 8.16 ಲಕ್ಷ ಆಸ್ತಿ ಮಾಲೀಕರು ಖಾತಾ ಪಡೆದುಕೊಂಡಿದ್ದಾರೆ. ಇನ್ನೂ ಸುಮಾರು 10 ಲಕ್ಷ ಮಾಲೀಕರು ಅರ್ಜಿ ಹಾಕಲು ಮುಂದಾಗಿಲ್ಲ. ಸೇವಾ ಕೇಂದ್ರ ಮೂರು ತಿಂಗಳಲ್ಲಿ ಆರಂಭವಾಗಲಿದೆ  ಎಂದು ಹೇಳಿದರು.

ಆಸ್ತಿ ಮಾಲೀಕರ ಖಾತಾ ಅರ್ಜಿಗಳನ್ನು ಅನಗತ್ಯವಾಗಿ ತಿರಸ್ಕರಿಸುವಂತಿಲ್ಲ. ತಿರಸ್ಕರಿಸಿದ ಅರ್ಜಿಗಳನ್ನು, 25 ಜನರ ಕಣ್ಗಾವಲು ತಂಡ ಮರು ಪರಿಶೀಲಿಸಲಿದೆ. ಅನಗತ್ಯವಾಗಿ ಅರ್ಜಿ ತಿರಸ್ಕರಿಸಿರುವುದು ಸಾಬೀತಾದರೆ, ಕಂದಾಯ ವಿಭಾಗದ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಎ ಖಾತಾಗೆ 3 ಸಾವಿರ ಅರ್ಜಿ
ಬಿ ಖಾತಾ ಆಸ್ತಿಗಳಿಗೆ ಎ ಖಾತಾ ವಿತರಿಸುವಂತೆ ಈವರೆಗೆ 3,252 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಶೇ 98ರಷ್ಟು ಮಾಲೀಕರು ನಕ್ಷೆಯ ದಾಖಲೆ ನೀಡಿಲ್ಲ. ಜಿಬಿಎಯಿಂದ ನಕ್ಷೆ ರಚಿಸಿ, ದಾಖಲೆ ಸೃಷ್ಟಿಸಿ ಖಾತಾ ನೀಡಲಾಗುವುದು ಎಂದು ಹೇಳಿದರು.₹1,500 ಕೋಟಿ: ಪ್ರೀಮಿಯಂ ಎಫ್‌ಎಆರ್‌ ವಿರುದ್ಧದ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿದೆ. ಹೀಗಾಗಿ,ಅದರ ಅನುಷ್ಠಾನದಿಂದ, ವಾರ್ಷಿಕ ₹2,000 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಮುನೀಶ್ ಮೌದ್ಗಿಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.