
ಹೈಕೋರ್ಟ್
ದಾಬಸ್ ಪೇಟೆ: ‘ಹೈಕೋರ್ಟ್ ತಡೆಯಾಜ್ಞೆ ಇದ್ದರೂ ದರ ನಿಗದಿ ಸಭೆ ನಡೆಸಿದ ಕೆಐಎಡಿಬಿ ಮತ್ತು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುತ್ತೇವೆ’ ಎಂದು ರೈತ ಮುಖಂಡ ಹನುಮಂತಪುರ ವಿಜಯ್ ಕುಮಾರ್ ತಿಳಿಸಿದರು.
‘ಹನುಮಂತಪುರ, ಬಿದಲೂರು, ಕೋಡಿಪಾಳ್ಯ ಗ್ರಾಮಗಳಲ್ಲಿನ 387 ಎಕರೆ ಜಮೀನು ಭೂಸ್ವಾಧೀನಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ದಾಬಸ್‌ಪೇಟೆಯಲ್ಲಿ ಮಂಗಳವಾರ ನಡೆದ ಭೂದರ ನಿಗದಿ ಸಭೆಯಲ್ಲಿ 116 ಎಕರೆ ಬಿಟ್ಟು 271 ಎಕರೆ ಜಮೀನಿಗೆ ದರ ನಿಗದಿ ಮಾಡಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಕೆಐಎಡಿಬಿ ಅಧಿಕಾರಿಗಳು ತರಾತುರಿಯಲ್ಲಿ ದರ ನಿಗದಿ ಮಾಡಿರುವ ಹಿಂದೆ ಪ್ರಭಾವಿ ಸಚಿವರು ಮತ್ತು ಭೂಗಳ್ಳರ ಕೈವಾಡವಿದೆ. ಸಭೆ ನಿಗದಿಯಾಗಿದೆ ಎಂದು ಎರಡು ದಿನಗಳ ಹಿಂದೆ ನೋಟಿಸ್ ನೀಡಿ, ಕೆಐಎಡಿಬಿ ಅಧಿಕಾರಿಗಳು ರಾಜಕಾರಣಿಗಳ ರೀತಿ ಮನೆ ಮನೆಗೆ ಭೇಟಿ ನೀಡಿ ಅವರನ್ನು ಪುಸಲಾಯಿಸಿ ಸಭೆಗೆ ಕರೆದುಕೊಂಡು ಹೋಗಿದ್ದಾರೆ’ ಎಂದು ದೂರಿದರು.
ರೈತ ಹೋರಾಟಗಾರರಾದ ಬಿದಲೂರು ಬಿ.ವಿ.ನರಸಿಂಹಯ್ಯ, ಶಿವರುದ್ರಯ್ಯ ಮಾತನಾಡಿ, ‘ನಾವು ಯಾವುದೇ ಕಾರಣಕ್ಕೆ ಜಮೀನು ಬಿಡುವುದಿಲ್ಲ. ಕಾನೂನಿನ ಹೋರಾಟ ಮುಂದುವರಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.