ADVERTISEMENT

ಬೆಂಗಳೂರು | ಕೆಎಂಎಫ್‌ ಉತ್ಪನ್ನಗಳ ಅಪಪ್ರಚಾರ: ವೈದ್ಯೆ ವಿರುದ್ಧ ಎಫ್‌ಐಆರ್

ನಂದಿನಿ ಉತ್ಪನ್ನಗಳ ಕುರಿತು ‘ರೀಲ್ಸ್’ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 16:10 IST
Last Updated 19 ಫೆಬ್ರುವರಿ 2026, 16:10 IST
ಕೆಎಂಎಫ್
ಕೆಎಂಎಫ್   

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳದ(ಕೆಎಂಎಫ್) ಉತ್ಪನ್ನಗಳ ಕುರಿತು ಅಪಪ್ರಚಾರ ನಡೆಸಿದ್ದ ಆರೋಪದ ಮೇಲೆ ವೈದ್ಯೆ ವಿರುದ್ಧ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಎಂಎಫ್‌ನ ಆರ್‌.ಪದ್ಮಾವತಿ ಅವರು ನೀಡಿದ ದೂರಿನ ಮೇರೆಗೆ ಮಲ್ಲೇಶ್ವರದಲ್ಲಿರುವ ಮಣಿಪಾಲ ಆಸ್ಪತ್ರೆಯ ಚರ್ಮರೋಗ ತಜ್ಞೆ ಶರಣ್ಯಾ ಪದ್ಮಾ ಅವರ (ಬಾಲಾಜಿ ಕ್ಲಿನಿಕ್, ಮಾಲೂರು) ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353(1)(ಬಿ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 66(ಡಿ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಫೆ.8ರಂದು ನಂದಿನಿ ಉತ್ಪನ್ನಗಳ ಬಗ್ಗೆ ‘ರೀಲ್ಸ್’ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಆ ‘ರೀಲ್ಸ್‌’ನಲ್ಲಿ, ನಂದಿನಿ ಉತ್ಪನ್ನಗಳಾದ ಕ್ರೀಮ್‌ ಬನ್‌, ಸ್ಟ್ರಾಬೆರಿ ಫ್ಲೇವರ್ಡ್‌ ಮಿಲ್ಕ್ ಹಾಗೂ ತಂಪು ಪಾನೀಯಗಳ ಕುರಿತು ಅಪಪ್ರಚಾರ ಮಾಡಿದ್ದರು. ಈ ಉತ್ಪನ್ನಗಳನ್ನು ದಿನನಿತ್ಯ ಸೇವಿಸುವುದರಿಂದ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಸ್ಟಿರಾಯ್ಡ್‌ನಂತಹ ಔಷಧ ನೀಡಬೇಕಾಗುತ್ತದೆ. ದೀರ್ಘಾವಧಿಯಲ್ಲಿ ಕ್ಯಾನ್ಸರ್‌ ಬರುತ್ತದೆ. ಸ್ಟ್ರಾಬೆರಿ ಫ್ಲೇವರ್ಡ್‌ ಮಿಲ್ಕ್‌ನಲ್ಲಿ ನೈಸರ್ಗಿಕ ಸ್ಟ್ರಾಬೆರಿ ಇರುವುದಿಲ್ಲ. ಬದಲಾಗಿ ಕೃತಕ ಬಣ್ಣ ಹಾಕಿ ತಯಾರು ಮಾಡಲಾಗಿರುತ್ತದೆ. ಈ ರೀತಿಯ ಉತ್ಪನ್ನಗಳಿಗೆ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹೇಗೆ ಅನುಮತಿ ನೀಡಿದೆ’ ಎಂಬುದಾಗಿ ‘ರೀಲ್ಸ್‌’ನಲ್ಲಿ ವೈದ್ಯೆ ಪ್ರಶ್ನಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಕೆಎಂಎಫ್‌ ಸರ್ಕಾರಿ ಸಂಸ್ಥೆ. ಈ ರೀತಿಯ ವಸ್ತುಗಳ ಉತ್ಪಾದನೆ ಹಾಗೂ ಮಾರಾಟ ಮಾಡಿ ಲಾಭ ಮಾಡುತ್ತಿರುವ ಭ್ರಮೆಯಲ್ಲಿ ಸರ್ಕಾರ ಇರಬಾರದು. ಈ ಉತ್ಪನ್ನಗಳು ನಿಜವಾಗಿಯೂ ಆಹಾರ ಅಲ್ಲವೇ ಅಲ್ಲ. ಬದಲಿಗೆ ವಿಷಕಾರಿಯಾಗಿದ್ದು, ಈ ರೀತಿಯ ಉತ್ಪನ್ನಗಳನ್ನು ಕೆಎಂಎಫ್‌ ಮಾರುಕಟ್ಟೆಗೆ ಬಿಡಬಾರದು ಎಂಬುದಾಗಿಯೂ ‘ರೀಲ್ಸ್’ ವೈದ್ಯೆ ಹೇಳಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ಕುರಿತು ಅಪಪ್ರಚಾರ ಮಾಡಿ ತಪ್ಪು ಸಂದೇಶ ನೀಡಿ ಸಾರ್ವಜನಿಕರಿಗೆ ದಿಕ್ಕು ತಪ್ಪಿಸುತ್ತಿರುವ ಶರಣ್ಯಾ ಪದ್ಮಾ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಕೆಎಂಎಫ್ ಅಧಿಕಾರಿಗಳು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.