ADVERTISEMENT

ಕೆಎಂಎಫ್ ಉತ್ಪನ್ನಗಳ ಕುರಿತು ಅಪಪ್ರಚಾರದ ಆರೋಪ: ವೈದ್ಯೆ ವಿಚಾರಣೆಗೆ ಸಿದ್ಧತೆ

ಮಕ್ಕಳ ಆರೋಗ್ಯದ ಕಾಳಜಿಯಿಂದ ಹೋರಾಟ: ವೈದ್ಯೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 16:14 IST
Last Updated 20 ಫೆಬ್ರುವರಿ 2026, 16:14 IST
ಶರಣ್ಯಾ ಪದ್ಮಾ 
ಶರಣ್ಯಾ ಪದ್ಮಾ    

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳದ(ಕೆಎಂಎಫ್) ಉತ್ಪನ್ನಗಳ ಕುರಿತು ಅಪಪ್ರಚಾರ ನಡೆಸಿದ ಆರೋಪದ ಮೇಲೆ ಮಲ್ಲೇಶ್ವರದ ಮಣಿಪಾಲ್‌ ಆಸ್ಪತ್ರೆಯ ಚರ್ಮರೋಗ ತಜ್ಞೆ ಶರಣ್ಯಾ ಪದ್ಮಾ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ಬರುವಂತೆ ವೈದ್ಯೆಗೆ ಮಲ್ಲೇಶ್ವರ ಠಾಣೆಯ ಪೊಲೀಸರು ಸೂಚಿಸಿದ್ದಾರೆ.

‘ವೈದ್ಯೆ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353(1)(ಬಿ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 66(ಡಿ) ಅಡಿ ಪ್ರಕರಣ ದಾಖಲಾಗಿದೆ. ವೈದ್ಯೆಯ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.

ಪ್ರಕರಣ ದಾಖಲಾದ ಮೇಲೆ ಶರಣ್ಯಾ ಪದ್ಮಾ ಅವರು ಮತ್ತೊಂದು ವಿಡಿಯೊ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ‌

ADVERTISEMENT

‘ಮಕ್ಕಳ ಆರೋಗ್ಯದ ಕಾಳಜಿಯಿಂದ ನಾನು ಹೋರಾಟ ನಡೆಸುತ್ತಿದ್ದೇನೆ. ನನ್ನ ವೈಯಕ್ತಿಕ ಹಿತಾಸಕ್ತಿ ಇಲ್ಲ. ಕಳೆದ ಎರಡು ವರ್ಷಗಳಲ್ಲಿ ನಾನು ನನ್ನ ಮಗನಿಗೆ ಯಾವುದೇ ಔಷಧ ಕೊಟ್ಟಿಲ್ಲ, ಮಕ್ಕಳನ್ನು ನಾವು ಕೊಡುವ ಆಹಾರ ಪದ್ಧತಿ, ಜೀವನಶೈಲಿಯಿಂದ ಆರೋಗ್ಯವಾಗಿ ಸಾಕಬಹುದು. ಔಷಧಗಳನ್ನು ಹೆಚ್ಚೆಚ್ಚು ನೀಡಿದಷ್ಟು ಕರುಳಿನ ಆರೋಗ್ಯ ಹಾಳಾಗುತ್ತದೆ, ಆರೋಗ್ಯಕ್ಕೆ ಆಧಾರಸ್ತಂಭ ನಮ್ಮ ಆಹಾರ’ ಎಂದು ವಿಡಿಯೊ ಹೇಳಿಕೆಯಲ್ಲಿ ವಿವರಿಸಿದ್ದಾರೆ.

‘‌ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (ಎಫ್‌ಎಸ್‌ಎಸ್‌ಎಐ) ಹೇಗೆ ಅನುಮೋದನೆ ಸಿಕ್ಕಿದೆ ಎಂಬುದು ಗೊತ್ತಿಲ್ಲ. ಎಫ್‌ಎಸ್‌ಎಸ್‌ಎಐ ಅನುಮೋದನೆ ಆಗಿದೆ ಅಂದರೆ, ಉತ್ತಮ ಆಹಾರ ಎಂದು ಭಾವಿಸಿಕೊಳ್ಳುತ್ತಾರೆ. ಈ ರೀತಿಯ ಉತ್ಪನ್ನಗಳಿಗೆ ಅನುಮೋದನೆ ನೀಡುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆ ವಿಡಿಯೊದಲ್ಲಿ ವೈದ್ಯೆ ಒತ್ತಾಯಿಸಿದ್ದಾರೆ.

‘ಒಂದು ಸಂಸ್ಥೆಯ ವಿರುದ್ಧ ಆರೋಪ ಮಾಡಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಆ ವಿಡಿಯೊ ಹರಿದಾಡುತ್ತದೆ, ಪೊಲೀಸರಿಗೆ ದೂರು ನೀಡಲಾಗುತ್ತದೆ ಎಂಬ ಅರಿವು ಇತ್ತು. ಮಲ್ಲೇಶ್ವರ ಠಾಣೆ ಪೊಲೀಸರಿಂದ ಫೋನ್ ಕರೆ ಬಂದಿತ್ತು. ನನ್ನ ವಿರುದ್ಧ ದೂರು ಹೋಗಿರುವುದು ನಿಜ. ಒಂದು ವೇಳೆ ಎಫ್‌ಐಆರ್ ಆಗಿದ್ದರೂ ನಾನು ಹೆದರುವುದಿಲ್ಲ’ ಎಂದು ವೈದ್ಯೆ ಹೇಳಿದ್ದಾರೆ.

‘ಫೆ.8ರಂದು ನಂದಿನಿ ಉತ್ಪನ್ನಗಳ ಬಗ್ಗೆ ಶರಣ್ಯಾ ಪದ್ಮಾ ಅವರು ‘ರೀಲ್ಸ್’ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಆ ‘ರೀಲ್ಸ್‌’ನಲ್ಲಿ, ನಂದಿನಿ ಉತ್ಪನ್ನಗಳಾದ ಕ್ರೀಮ್‌ ಬನ್‌, ಸ್ಟ್ರಾಬೆರಿ ಫ್ಲೇವರ್ಡ್‌ ಮಿಲ್ಕ್ ಹಾಗೂ ತಂಪು ಪಾನೀಯದಂತಹ ಉತ್ಪನ್ನಗಳನ್ನು ದಿನನಿತ್ಯ ಸೇವಿಸುವುದರಿಂದ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಸ್ಟಿರಾಯ್ಡ್‌ನಂತಹ ಔಷಧ ನೀಡಬೇಕಾಗುತ್ತದೆ. ದೀರ್ಘಾವಧಿಯಲ್ಲಿ ಕ್ಯಾನ್ಸರ್‌ ಬರುತ್ತದೆ. ಸ್ಟ್ರಾಬೆರಿ ಫ್ಲೇವರ್ಡ್‌ ಮಿಲ್ಕ್‌ನಲ್ಲಿ ನೈಸರ್ಗಿಕ ಸ್ಟ್ರಾಬೆರಿ ಇರುವುದಿಲ್ಲ. ಬದಲಾಗಿ ಕೃತಕ ಬಣ್ಣ ಹಾಕಿ ತಯಾರು ಮಾಡಲಾಗಿರುತ್ತದೆ. ಈ ರೀತಿಯ ಉತ್ಪನ್ನಗಳಿಗೆ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹೇಗೆ ಅನುಮತಿ ನೀಡಿದೆ’ ಎಂಬುದಾಗಿ ‘ರೀಲ್ಸ್‌’ನಲ್ಲಿ ವೈದ್ಯೆ ಪ್ರಶ್ನಿಸಿದ್ದರು’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.