
ಬೆಂಗಳೂರು: ‘ಮರುಳಸಿದ್ದಪ್ಪ (ಕೆಎಂಎಸ್) ಅವರು ಸಮಕಾಲೀನ ಪ್ರಜ್ಞೆಯ ಸಂಕೇತವಾಗಿದ್ದು, ಅವರು ವೃತ್ತಿಯಿಂದ ನಿವೃತ್ತರಾದ ಬಳಿಕ ಹೆಚ್ಚು ಸಕ್ರಿಯರಾಗಿದ್ದಾರೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಬಿ.ಎಂ.ಶ್ರೀ. ಪ್ರತಿಷ್ಠಾನ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾಹಿತಿ ಕೆ.ಮರುಳಸಿದ್ದಪ್ಪ ಅವರಿಗೆ ‘ಶ್ರೀ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು. ಕಮಲಿನಿ ಶಾ. ಬಾಲುರಾವ್ ಅವರು ಪ್ರತಿಷ್ಠಾನದಲ್ಲಿ ಸ್ಥಾಪಿಸಿರುವ ಈ ದತ್ತಿ ಪ್ರಶಸ್ತಿಯು ₹ 1 ಲಕ್ಷ ನಗದು ಒಳಗೊಂಡಿದೆ.
‘ಮರುಳಸಿದ್ದಪ್ಪ ಅವರು ನಾಟಕ ವಿಮರ್ಶೆಯನ್ನು ಕೈಗೆತ್ತಿಕೊಂಡ ಸಂದರ್ಭ ಸಂಕ್ರಮಣ ಕಾಲವಾಗಿತ್ತು. ದಲಿತ ಸೇರಿ ವಿವಿಧ ಚಳವಳಿಗಳು ಜಾಗೃತವಾಗಿದ್ದವು. ಅವರ ಕನ್ನಡ ನಾಟಕ ವಿಮರ್ಶೆಯು ಚಾರಿತ್ರಿಕತೆ ಗುರುತಿಸುವ ವಿಶೇಷ ಬರವಣಿಗೆಯಾಗಿದೆ. ಅವರು ಸಮಕಾಲೀನ ಸಂದರ್ಭದ ವಿದ್ಯಮಾನಗಳಿಗೆ ಪ್ರತಿ ಕ್ಷಣ ಪ್ರತಿಕ್ರಿಯಿಸುತ್ತಿದ್ದಾರೆ. ಅದು ಅವರ ಜೀವನಶಕ್ತಿಯ ಸಂಕೇತ. ಅನೇಕರು ವೃತ್ತಿಯಿಂದ ನಿವೃತ್ತರಾದ ಬಳಿಕ ಸಂಪೂರ್ಣ ನಿವೃತ್ತಿಯಾಗಿ, ಕೊರಗುವುದು ಜಾಸ್ತಿ. ಆದರೆ, ಕೆಎಂಎಸ್ ಇದಕ್ಕೆ ವಿರುದ್ಧವಾಗಿದ್ದು, ಇಳಿವಯಸ್ಸಿನಲ್ಲಿಯೂ ಹೆಚ್ಚು ಕ್ರಿಯಾಶೀಲರಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಸಮಕಾಲೀನ ಸಂದರ್ಭದಲ್ಲಿ ಪ‍್ರಗತಿಪರ ವಿಚಾರಧಾರೆ ಬಿತ್ತಿ ಬೆಳೆಸಲು ಅವರು ಅಭಿಪ್ರಾಯ ರೂಪಿಸುತ್ತಿದ್ದಾರೆ’ ಎಂದರು.
ಮರುಳಸಿದ್ದಪ್ಪ, ‘ನವೋದಯ ಸಾಹಿತ್ಯದ ಆಚಾರ್ಯ ಪುರುಷರೆಂದು ಹೆಸರಾಗಿರುವ ಬಿ.ಎಂ. ಶ್ರೀಕಂಠಯ್ಯ ಅವರು, ತಮ್ಮ ಸಾಹಿತ್ಯ ಕೃತಿಗಳ ಮೂಲಕ ಈ ನಾಡಿಗೆ ಮಾರ್ಗದರ್ಶನ ಮಾಡಿದ್ದಾರೆ. ಅವರು ಸಾಂಸ್ಕೃತಿಕ ಆಡಳಿತಕ್ಕೆ ಒಂದು ಮಾದರಿ ಒದಗಿಸಿದ್ದಾರೆ. ಕರ್ನಾಟಕ ಏಕೀಕರಣದ ಕನಸು ಕಂಡ ಅವರು, ಆ ಸಂಬಂಧ ಕನ್ನಡ ನಾಡಿನಲ್ಲಿ ಓಡಾಡಿ ಕೆಲಸ ಮಾಡಿದ್ದರು’ ಎಂದು ಹೇಳಿದರು.
‘ಪ್ರಶಸ್ತಿಗೆ ಅರ್ಹರು ಅನೇಕರು ಇರುತ್ತಾರೆ. ಈ ವಿನಯ ಮತ್ತು ಪ್ರಜ್ಞೆ ಪ್ರಶಸ್ತಿಗೆ ಭಾಜನರಾದವರಿಗೆ ಇರಬೇಕು. ‘ಶ್ರೀ ಸಾಹಿತ್ಯ’ದಂತಹ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಬೇಕು’ ಎಂದು ಅಭಿಪ್ರಾಯಪಟ್ಟರು.
ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಮರ್ಶಕ ಎಚ್.ದಂಡಪ್ಪ ಅವರು ಅಭಿನಂದನಾ ನುಡಿಗಳನ್ನಾಡಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಆರ್. ಲಕ್ಷ್ಮೀನಾರಾಯಣ, ದತ್ತಿ ದಾನಿ ಕಮಲಿನಿ ಶಾ. ಬಾಲುರಾವ್ ಉಪಸ್ಥಿತರಿದ್ದರು.