ADVERTISEMENT

ಕೋಗಿಲು: ಸೂರು ಕಳೆದುಕೊಂಡವರ ಗೋಳು; 10 ದಿನ ಕಳೆದರೂ ಸ್ಥಳ ಬಿಟ್ಟು ಕದಲದ ಜನರು

ಬಾಲಕೃಷ್ಣ ಪಿ.ಎಚ್‌
Published 29 ಡಿಸೆಂಬರ್ 2025, 18:55 IST
Last Updated 29 ಡಿಸೆಂಬರ್ 2025, 18:55 IST
ನೆಲಸಮಗೊಂಡಿರುವ ಕೋಗಿಲು ಬಂಡೆ ಪ್ರದೇಶದಲ್ಲಿ ಅಲ್ಲಲ್ಲಿರುವ ತಾತ್ಕಾಲಿಕ ಟೆಂಟ್‌ ಮನೆಗಳು
ನೆಲಸಮಗೊಂಡಿರುವ ಕೋಗಿಲು ಬಂಡೆ ಪ್ರದೇಶದಲ್ಲಿ ಅಲ್ಲಲ್ಲಿರುವ ತಾತ್ಕಾಲಿಕ ಟೆಂಟ್‌ ಮನೆಗಳು   

ಬೆಂಗಳೂರು: ಬಯಲಿನ ಬಿಸಿಲಲ್ಲೇ ಮೂರು ಕಲ್ಲು ಇಟ್ಟು ತಯಾರಿಸಿದ ಒಲೆಯಲ್ಲಿ ನೀರು ಕಾಯಿಸುತ್ತಿದ್ದಾರೆ. ಪಕ್ಕದಲ್ಲಿ ಟಾರ್ಪಲ್‌ ಅಡಿಯಲ್ಲಿ ಅನಾರೋಗ್ಯದ ವ್ಯಕ್ತಿ ಮಲಗಿದ್ದಾರೆ. ನೆಲಸಮಗೊಳಿಸಿದ ಮನೆ, ಶೆಡ್‌ಗಳ ಇಟ್ಟಿಗೆಗಳು ರಾಶಿ ಬಿದ್ದಿವೆ. ಅದರ ಮಧ್ಯೆಯೇ ಅಲ್ಲಲ್ಲಿ ಟಾರ್ಪಲ್‌ ಹಾಕಿಕೊಂಡು ಜನರು ವಾಸ ಮಾಡುತ್ತಿದ್ದಾರೆ...

ಇವು ಬೆಂಗಳೂರು ಉತ್ತರ ನಗರ ಪಾಲಿಕೆಯ ಯಲಹಂಕ ಹೊಬಳಿಯ ಕೋಗಿಲು ಬಂಡೆ ಕ್ವಾರಿ ಪ್ರದೇಶದಲ್ಲಿ ಸೋಮವಾರ ಕಂಡು ಬಂದ ದೃಶ್ಯಗಳು. ಇಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಶೆಡ್‌, ಮನೆಗಳನ್ನು ನೆಲಸಮಗೊಳಿಸಿ 10 ದಿನಗಳು ಕಳೆದರೂ ಸಂತ್ರಸ್ತರ ಪರಿಸ್ಥಿತಿ ಬದಲಾಗಿಲ್ಲ.

ಈ ಸಂತ್ರಸ್ತರಿಗೆ ಕೆಲವು ಸಂಘ ಸಂಸ್ಥೆಗಳು ಊಟ, ಉಪಾಹಾರದ ವ್ಯವಸ್ಥೆ ಮಾಡಿವೆ. ಯುವಕರು ಅಲ್ಲಿ ಇಲ್ಲಿ ಅಡ್ಡಾಡುತ್ತಿದ್ದಾರೆ. ಮಹಿಳೆಯರು ಆತಂಕ ಇಟ್ಟುಕೊಂಡೇ ನೀರು ಹೊತ್ತು ತರುತ್ತಾ, ಪಾತ್ರೆ ತೊಳೆಯುತ್ತಾ ದಿನ ದೂಡುತ್ತಿದ್ದಾರೆ.

ADVERTISEMENT

ಏನಿದು ವಿವಾದ: ಕಲ್ಲು ಕ್ವಾರಿ ನಡೆಸಿದ್ದ ಈ ಜಾಗಕ್ಕೆ ಮಣ್ಣು ತುಂಬಿಸಲಾಗಿತ್ತು. ಆ ಜಾಗದಲ್ಲಿ ಮನೆಗಳು ತಲೆ ಎತ್ತಿದ್ದವು. ಕೆಲವು ಮನೆಗಳು ಹಳೆಯದ್ದಾಗಿದ್ದರೆ, ಕೆಲವು ಇತ್ತೀಚಿನವು. ಎಲ್ಲವನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತವು ನೆಲಸಮ ಮಾಡಿದೆ. ಬದಲಿ ವ್ಯವಸ್ಥೆ ಮಾಡದೇ ತೆರವು ಮಾಡಿರುವುದು ಒಂದೆಡೆ ಆಕ್ರೋಶಕ್ಕೆ ಕಾರಣವಾಗಿದ್ದರೆ, ಕೇರಳ ಸರ್ಕಾರದ ಪ್ರತಿನಿಧಿಗಳ ಪ್ರವೇಶದಿಂದಾಗಿ ಈ ಪ್ರಕರಣವು ರಾಜಕೀಯ ಆಯಾಮವನ್ನು ಪಡೆದುಕೊಂಡಿದೆ. 

ಬೆಂಗಳೂರಿಗರಲ್ಲದೇ ಉತ್ತರಪ್ರದೇಶ, ಪಶ್ಚಿಮ ಬಂಗಾಳದಿಂದ ಬಂದವರೆಲ್ಲ ಇಲ್ಲಿ ನೆಲಸಿದ್ದಾರೆ. ಊರೂರು ತಿರುಗುತ್ತಾ ಖವ್ವಾಲಿ ಹಾಡುವ ದರ್ವೇಶಿ ಫಕೀರರೇ ಒಂದೆಡೆ ನೆಲೆಸಿರುವುದರಿಂದ ಇದಕ್ಕೆ ಫಕೀರ್‌ ಲೇಔಟ್‌ ಎಂದೂ ಕರೆಯಲಾಗುತ್ತಿದೆ. ಇದರ ಕೆಳ ಭಾಗದಲ್ಲಿ ಫಕೀರರಲ್ಲದ ಮುಸ್ಲಿಮರ ಮನೆಗಳೇ ಹೆಚ್ಚಿದ್ದರೂ ಪರಿಶಿಷ್ಟ ಜಾತಿ ಸಮುದಾಯದ ಮನೆಗಳು, ಬೆರಳೆಣಿಕೆಯ ಕ್ರೈಸ್ತ ಧರ್ಮೀಯರ ಮನೆಗಳೂ ಇವೆ. ಕ್ವಾರಿಯ ಇನ್ನೊಂದು ಭಾಗವನ್ನು ವಸೀಂ ಕಾಲೊನಿ ಎಂದು ಹೆಸರಿಡಲಾಗಿದ್ದು, ಅಲ್ಲಿಯೂ ಹಲವು ಮನೆಗಳು ತಲೆ ಎತ್ತಿದ್ದವು.

‘ಒಂಬತ್ತು ವರ್ಷಗಳ ಹಿಂದೆ ಈ ಜಾಗವನ್ನು ತ್ಯಾಜ್ಯ ತುಂಬಿಸುವುದಕ್ಕಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತಕ್ಕೆ ಅಂದಿನ ಬಿಬಿಎಂಪಿ ಹಸ್ತಾಂತರಿಸಿತ್ತು. ಆಗ ಇಲ್ಲಿ ಕೆಲವೇ ಮನೆಗಳಿದ್ದವು. ಆನಂತರ ಎಲ್ಲೆಲ್ಲಿಂದಲೋ ಬಂದವರು ಇಲ್ಲಿ ಸೇರಿಕೊಂಡಿದ್ದಾರೆ. ಇವರಲ್ಲಿ ಸ್ಥಳೀಯರ ಸಂಖ್ಯೆ ಕಡಿಮೆ ಇದ್ದು, ಹೊರಗಿನಿಂದ ಬಂದವರೇ ಹೆಚ್ಚಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಒಂದು ನೋಟಿಸ್‌ ಕೂಡ ನೀಡದೇ ಡಿ. 20ರಂದು ಬೆಳಿಗ್ಗೆ 6 ಗಂಟೆಗೆ ಬಂದು ಎಲ್ಲ ಮನೆಗಳನ್ನು ಕೆಡವಿದ್ದಾರೆ. ನಾವು ಯಾರೂ ಇತ್ತೀಚೆಗೆ ಬಂದವರಲ್ಲ. 25–30 ವರ್ಷಗಳ ಹಿಂದೆಯೇ ಬಂದವರು’ ಎಂದು ಅನೇಕ ಸಂತ್ರಸ್ತರು ತಮ್ಮ ಅಳಲು ಹೇಳಿಕೊಂಡರು.

‘ನಾವು 10 ವರ್ಷಗಳ ಹಿಂದೆ ಬಂದಿದ್ದೇವೆ’ ಎಂದು ಕೆಲವರಷ್ಟೇ ತಿಳಿಸಿದರು.

ಎಲ್ಲ ದಾಖಲೆ ಇದೆ: ‘ನಮ್ಮ ಹತ್ತಿರ ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಮತದಾರರ ಚೀಟಿ ಎಲ್ಲವೂ ಇದೆ. ಕೆಲವು ವರ್ಷಗಳ ಹಿಂದೆ ಈಗ ಸಚಿವರಾಗಿರುವ, ಸ್ಥಳೀಯ ಶಾಸಕರಾದ ಕೃಷ್ಣ ಬೈರೇಗೌಡ ಸಹಿತ ಕೆಲವು ಮುಖಂಡರು ಬಂದು ನಮಗೆ ತಾತ್ಕಾಲಿಕ ಹಕ್ಕುಪತ್ರ ನೀಡಿದ್ದರು. ಅಧಿಕೃತ ಪತ್ರ ನೀಡುತ್ತೇವೆ ಎಂದು ಭರವಸೆಯನ್ನೂ ಕೊಟ್ಟಿದ್ದರು. ಈಗ ನೋಡಿದರೆ ಮನೆ ಒಡೆದು ಹಾಕಿದ್ದಾರೆ’ ಎಂದು ಖಾದರ್‌ಬಿ ತಮ್ಮ ಅಸಹಾಯಕತೆ ತೋಡಿಕೊಂಡರು.

ಸಂತ್ರಸ್ತರು ಏನಂತಾರೆ?

ನಾನು ಕೂಲಿ ಕೆಲಸ ಮಾಡಿ ಕುಟುಂಬ ಸಾಕುತ್ತಿದ್ದೇನೆ. ಬಾಡಿಗೆಗೆ ಮನೆ ಪಡೆಯುವಷ್ಟು ಸಾಮರ್ಥ್ಯ ನನ್ನಲ್ಲಿಲ್ಲ. ನಮಗೆ ಬೇರೆ ಕಡೆ ಮನೆ ಕಟ್ಟಿಕೊಡಬೇಕು. ಇಲ್ಲದೇ ಇದ್ದರೆ ಇಲ್ಲೇ ಇರುತ್ತೇವೆ. ಇಲ್ಲಿಯೇ ಸತ್ತರೂ ಪರವಾಗಿಲ್ಲ.

- ಮಹಮ್ಮದ್‌ ಇಲ್ಯಾಸ್‌

ಗಂಡ ತೀರಿಕೊಂಡಿದ್ದಾರೆ. ನಾನು ಮಗ ಅಕ್ಕ ಇಲ್ಲಿ 15 ವರ್ಷಗಳಿಂದ ಇಲ್ಲಿದ್ದೇವೆ. ಡಿ.20ರಂದು ಬೆಳಿಗ್ಗೆ ಬಂದು ಗ್ಯಾಸ್‌ ಸಿಲಿಂಡರ್‌ ಹೊರಗಿಡಿ ಅಂದರು. ಜೆಸಿಬಿ ಮೂಲಕ ನೆಲಸಮ ಮಾಡಿದರು. ನಾವು ಬಟ್ಟೆ ಬದಲಾಯಿಸುವಂತಿಲ್ಲ. ಸರಿಯಾದ ಶೌಚಾಲಯವೂ ಇಲ್ಲ. ಆದರೂ ನಾವು ಇಲ್ಲಿಂದ ಹೋದರೆ ಮತ್ತೆ ಬರಲು ಬಿಡುವುದಿಲ್ಲ ಎಂಬುದು ಗೊತ್ತಿದೆ. ನಮಗೆ ಜಾಗ ಕೊಡುವವರೆಗೆ ಹೋಗುವುದಿಲ್ಲ.

-ಸರೋಜಾ

ಪಶ್ಚಿಮ ಬಂಗಾಳದಿಂದ ನಾವು ಬೆಂಗಳೂರಿಗೆ ಬಂದು 30 ವರ್ಷ ದಾಟಿದೆ. ನಾವು ಯಾವಾಗಲೂ ಕಾಂಗ್ರೆಸ್‌ಗೆ ಮತ ಹಾಕಿಕೊಂಡೇ ಬಂದವರು. ಮೊದಲು ಬಳ್ಳಾರಿ ರಸ್ತೆಯಲ್ಲಿದ್ದೆವು. ಆನಂತರ ಇಲ್ಲಿಗೆ ಬಂದೆವು. ಬಡವರಿಗೆ ಸರ್ಕಾರ ಹೀಗೆ ಮಾಡಿದರೆ ಹೇಗೆ? 

-ಮೈನುದ್ದೀನ್‌

ಪತಿ ಗಾರೆ ಕೆಲಸ ಮಾಡುತ್ತಾರೆ. ಅದರಲ್ಲಿಯೇ ಮೂರು ಮಕ್ಕಳನ್ನು ಸಾಕಬೇಕು. ಮನೆ ಒಡೆದು ಹಾಕಿರುವುದರಿಂದ ನಾವು ಬೀದಿಗೆ ಬಿದ್ದಿದ್ದೇವೆ. ನಮಗೆ ಮನೆ ಕಟ್ಟಲು ಅವಕಾಶ ನೀಡಬೇಕು. ಆರಿಫಾ ನಾವೂ 10 ವರ್ಷದ ಹಿಂದೆಯೇ ಬಂದಿದ್ದೇವೆ. ಅದಕ್ಕಿಂತ ಹಿಂದೆ ಬಂದವರಿಗಷ್ಟೇ ಅಲ್ಲ. ನಮಗೂ ಮನೆ ನೀಡಬೇಕು. ಮನೆಕೆಲಸ ಮಾಡಿ ಬದುಕುವ ನಮಗೆ ಮನೆ ಕೊಂಡುಕೊಳ್ಳುವ ಶಕ್ತಿ ಇಲ್ಲ.

-ಕಾಳಿಯಮ್ಮಾಳ್‌ ಸುಧಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.