ADVERTISEMENT

ಕೋಗಿಲು ಅಕ್ರಮ ಮನೆಗಳ ತೆರವು ಕಾರ್ಯಾಚರಣೆ: ನಿರಾಶ್ರಿತರಿಗೆ ಅಗತ್ಯ ಸೌಕರ್ಯ; ಎಜಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 15:40 IST
Last Updated 7 ಜನವರಿ 2026, 15:40 IST
ನೆಲಸಮಗೊಂಡಿರುವ ಕೋಗಿಲು ಬಂಡೆ ಪ್ರದೇಶದಲ್ಲಿ ಅಲ್ಲಲ್ಲಿರುವ ತಾತ್ಕಾಲಿಕ ಟೆಂಟ್‌ ಮನೆಗಳು
ನೆಲಸಮಗೊಂಡಿರುವ ಕೋಗಿಲು ಬಂಡೆ ಪ್ರದೇಶದಲ್ಲಿ ಅಲ್ಲಲ್ಲಿರುವ ತಾತ್ಕಾಲಿಕ ಟೆಂಟ್‌ ಮನೆಗಳು   

ಬೆಂಗಳೂರು: ‘ಯಲಹಂಕ ವ್ಯಾಪ್ತಿಯ ಕೋಗಿಲು ಲೇ ಔಟ್ ವ್ಯಾಪ್ತಿಯ ಫಕೀರ್ ಹಾಗೂ ವಸೀಂ ಕಾಲೋನಿಯಿಂದ ತೆರವುಗೊಳಿಸಲಾಗಿರುವ ಅನಧಿಕೃತ ನಿವಾಸಿಗಳಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲು ಮೂರು ಜಾಗಗಳನ್ನು ಗುರುತಿಸಲಾಗಿದೆ ಮತ್ತು ಅವರಿಗೆ ಆಹಾರ, ಔಷಧಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು’ ಎಂದು ರಾಜ್ಯ ಸರ್ಕಾರ, ಹೈಕೋರ್ಟ್‌ಗೆ ಅರುಹಿದೆ.

‘ತೆರವು ಕಾರ್ಯಾಚರಣೆಯನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು, ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಪರಿಹಾರ ನೀಡಲು ನಿರ್ದೇಶಿಸಬೇಕು’ ಎಂದು ಕೋರಿ ಈ ಪ್ರದೇಶದಲ್ಲಿ ವಾಸವಿದ್ದ ಝೈಬಾ ತಬಸ್ಸುಮ್, ರೆಹಾನ ಮತ್ತು ಅರೀಫಾ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವುದಕ್ಕೂ ಮುನ್ನ ಯಾವುದೇ ರೀತಿಯ ನೋಟಿಸ್‌ ನೀಡಲಾಗಿಲ್ಲ. ಸಹಜ ನ್ಯಾಯ ತತ್ವ ಪಾಲನೆ ಮಾಡಲಾಗಿಲ್ಲ. ಬುಲ್ಡೋಜರ್‌ ಬಳಸಿ ನೆಲಸಮಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ಈ ತೀರ್ಪಿಗೆ ವಿರುದ್ಧವಾಗಿ ಈ ಪ್ರಕರಣದಲ್ಲಿ ನಡೆದುಕೊಳ್ಳಲಾಗಿದೆ’ ಎಂದು ಆಕ್ಷೇಪಿಸಿದರು. 

ADVERTISEMENT

‘ಈ ಪ್ರದೇಶಲ್ಲಿದ್ದ ಅರ್ಜಿದಾರ ನಿವಾಸಿಗಳಿಗೆ 2014ರಲ್ಲಿಯೇ ಈ ಹಿಂದಿನ ಬಿಬಿಎಂಪಿ ಸ್ಥಳ ಹಂಚಿಕೆ ಮಾಡಿತ್ತು. ಕಾರ್ಯಾಚರಣೆಯಲ್ಲಿ ನಿರ್ಗತಿಕರಾಗಿರುವ 300 ಕುಟುಂಬಗಳ 3,000 ಮಂದಿಗೆ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಡ್ವೊಕೇಟ್‌ ಜನರಲ್‌ (ಎಜಿ) ಕೆ.ಶಶಿಕಿರಣ ಶೆಟ್ಟಿ, ‘ಒತ್ತುವರಿಯಾಗಿದ್ದ ಪ್ರದೇಶವು ಸರ್ಕಾರದ ಜಾಗ. ಇಲ್ಲಿನ ಕಟ್ಟಡಗಳ ತೆರವು ಕಾರ್ಯಾಚರಣೆಯಲ್ಲಿ ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಅನ್ವಯ ಆಗುವುದಿಲ್ಲ. ಈ ನಿರ್ದಿಷ್ಟ ಜಾಗವು ಕ್ವಾರಿ ಪ್ರದೇಶವಾಗಿದ್ದು, ನಂತರದಲ್ಲಿ ಇದನ್ನು ನೀರಿನ ಕೆರೆ ಪ್ರದೇಶವನ್ನಾಗಿ ಬಳಕೆ ಮಾಡಲಾಗಿತ್ತು. ಏತನ್ಮಧ್ಯೆ, ಸಂತ್ರಸ್ತರು ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಕಾರಣ ಆ ನೀರು ಕಲುಷಿತಗೊಂಡಿತ್ತು. ಹಾಗಾಗಿ, ಇದು ಕೊಳಚೆ ಪ್ರದೇಶವಲ್ಲ’ ಎಂದು ಸ್ಪಷ್ಟಪಡಿಸಿದರು.

‘ಅರ್ಜಿದಾರರು 28 ವರ್ಷಗಳಿಂದ ಈ ಸ್ಥಳದಲ್ಲಿದ್ದೆವು ಎಂಬ ಹೇಳಿಕೆ ವಾಸ್ತವಕ್ಕೆ ದೂರ. ಇಲ್ಲಿ ಕಟ್ಟಿಕೊಳ್ಳಲಾಗಿದ್ದ ಪ್ರತಿಯೊಂದು ಅಕ್ರಮ ಮನೆಯ ಬಗ್ಗೆ ಉಪಗ್ರಹ ಫೋಟೊ ಹಾಜರುಪಡಿಸಲಾಗುವುದು. ಈ ನಿಟ್ಟಿನಲ್ಲಿ ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಅಂತೆಯೇ, ‘ನಿರಾಶ್ರಿತರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲು ಗುರುತಿಸಲಾದ ಜಾಗದ ಬಗ್ಗೆ ಒಂದು ವಾರದಲ್ಲಿ ಸಮಗ್ರ ವರದಿ ಸಲ್ಲಿಸಿ’ ಎಂದು ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿತು.

ಅರ್ಜಿದಾರರ ಕೋರಿಕೆ ಏನು?

* 2025ರ ಡಿಸೆಂಬರ್ 20ರಂದು ಪೂರ್ವ ಸೂಚನೆ ಇಲ್ಲದೆ ನಡೆಸಲಾದ ಕಾರ್ಯಾಚರಣೆ ಕಾನೂನುಬಾಹಿರ, ಸಂವಿಧಾನಬಾಹಿರ ಮತ್ತು ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ

* ರಾಜ್ಯ ಸರ್ಕಾರ ಮತ್ತು ಜಿಬಿಎ ಸೇರಿದಂತೆ ಪ್ರಕರಣದ ಎಲ್ಲ ಪ್ರತಿವಾದಿಗಳು ಸಂವಿಧಾನದ 14, 19, 21 ಮತ್ತು 21ಎ ವಿಧಿಗಳ ಅಡಿಯಲ್ಲಿ ಬಾಧಿತ ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ

* ಬಾಧಿತರು ಪುನರ್ವಸತಿ ಹೊಂದುವ ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಅವರನ್ನು ಬೀದಿಗಳಲ್ಲಿ ಬಿಡಲಾಗುವುದಿಲ್ಲ

* ಎಲ್ಲಾ ಗಾಯಗೊಂಡ ವ್ಯಕ್ತಿಗಳಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಹಾನಿಗಳಿಗೆ ಪರಿಹಾರ ಪಾವತಿಸಬೇಕು

* ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅಕ್ರಮವಾಗಿ ನೆಲಸಮ ಮಾಡಿದ್ದಕ್ಕಾಗಿ ಜವಾಬ್ದಾರರಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು

* ಕಾನೂನು ಮತ್ತು ತತ್ವಗಳಿಗೆ ಅನುಗುಣವಾಗಿ ಫಕೀರ್ ಮತ್ತು ವಸೀಂ ಕಾಲೋನಿಯಲ್ಲಿ ವಾಸವಿದ್ದ ಎಲ್ಲಾ 3,000 ಸಂತ್ರಸ್ತರಿಗೆ ಯಥೋಚಿತ ಪುನರ್ವಸತಿ ಮತ್ತು ಪರ್ಯಾಯ ವಸತಿ ಒದಗಿಸಬೇಕು

* ಎಲ್ಲಾ ಸಂತ್ರಸ್ತರನ್ನು ಗುರುತಿಸಲು ಮತ್ತು ಪುನರ್ವಸತಿಗಾಗಿ ಅವರ ಅರ್ಹತೆಯನ್ನು ಗುರುತಿಸಲು ಅಗತ್ಯ ಸಮೀಕ್ಷೆ ನಡೆಸಬೇಕು

* ಸಂತ್ರಸ್ತರು ಪ್ರಸ್ತುತ ಸ್ಥಳದಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ತಮ್ಮ ಜೀವನೋಪಾಯ ಮುಂದುವರಿಸುವಂತೆ ಅನುವು ಮಾಡಿಕೊಡಬೇಕು

* ಈ ಪ್ರದೇಶದಲ್ಲಿ ಕಳೆದ 30 ವರ್ಷಗಳಿಗೂ ಹೆಚ್ಚು ಕಾಲದಿಂದ ವಾಸಿಸುತ್ತಿದ್ದ ಜನರು ಇದೀಗ ಮನೆ, ಆಸ್ತಿ ಮತ್ತು ಜೀವನೋಪಾಯದ ಆಧಾರವನ್ನು ಕಳೆದುಕೊಂಡಿದ್ದು, ಈ ಎಲ್ಲಾ ಬಾಧಿತರಿಗೆ ಸೂಕ್ತ ಪರಿಹಾರ ಒದಗಿಸಬೇಕು

* ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಡೆಸಲಾದ ಅಕ್ರಮ ಕಾರ್ಯಾಚರಣೆಗೆ ಪ್ರತಿಯಾಗಿ ಪರಿಹಾರ ಒದಗಿಸಬೇಕು

* ಕೆಡವಲಾದ ಮನೆಗಳನ್ನು ಪುನರ್ನಿರ್ಮಿಸಿ ಅಥವಾ ಬಾಧಿತ ವ್ಯಕ್ತಿಗಳ ಜೀವನವನ್ನು ಪುನರ್‌ ಸ್ಥಾಪಿಸಲು ಪರ್ಯಾಯ ಮನೆಗಳನ್ನು ಒದಗಿಸಬೇಕು

* ಸುಪ್ರೀಂ ಕೋರ್ಟ್ ಆದೇಶಿಸಿದಂತೆ ಪರಿಹಾರ ಮತ್ತು ಹಾನಿಗಳಿಗೆ ಅಧಿಕಾರಿಗಳನ್ನು ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.