
ಯಲಹಂಕ: ‘ಕೋಗಿಲು ಬಡಾವಣೆಯಲ್ಲಿ ಶೆಡ್‌ಗಳನ್ನು ತೆರವುಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದ ಸಮಗ್ರ ವರದಿಯನ್ನು ಇನ್ನೆರಡು ದಿನಗಳಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಿಗೆ ಸಲ್ಲಿಸಲಾಗುವುದು’ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ತಿಳಿಸಿದರು.
ಕೋಗಿಲು ಬಡಾವಣೆಯ ಫಕೀರ್ ಕಾಲೊನಿ ಹಾಗೂ ವಸೀಮ್ ಬಡಾವಣೆಯಲ್ಲಿ ಮನೆ–ಗುಡಿಸಲುಗಳ ನಿರ್ಮಾಣದ ಸತ್ಯಾಸತ್ಯತೆ ಪರಿಶೀಲನೆಗಾಗಿ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ರಚಿಸಿರುವ ರಾಜ್ಯ ಬಿಜೆಪಿ ಸತ್ಯಶೋಧನಾ ತಂಡವು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.
‘ಈ ಬಡಾವಣೆಯಲ್ಲಿ ಶೇ 95ರಷ್ಟು ಮನೆಗಳು ಎರಡು ವರ್ಷಗಳಲ್ಲಿ ನಿರ್ಮಾಣಗೊಂಡಿವೆ. ಬಿಬಿಎಂಪಿಗೆ ಜಾಗ ಹಸ್ತಾಂತರವಾದ ವಿವರ, ಸರ್ವೆ ನಂಬರ್, ಗೂಗಲ್ ಮ್ಯಾಪ್ ದಾಖಲೆಗಳು ಹಾಗೂ ಕಾನೂನು ಅಂಶ ಸೇರಿದಂತೆ ಎಲ್ಲ ಮಾಹಿತಿಗಳು ವರದಿಯಲ್ಲಿ ಒಳಗೊಳ್ಳಲಿವೆ’ ಎಂದು ವಿಶ್ವನಾಥ್ ತಿಳಿಸಿದರು.
ಈ ವರದಿಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು, ರಾಜ್ಯಪಾಲರಿಗೆ ಸಲ್ಲಿಸುವ ಅಥವಾ ನ್ಯಾಯಾಲಯದಲ್ಲಿ ಪ್ರಶ್ನಿಸುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದರು.
‘ನಾನೂ ನೂರು ಗುಡಿಸಲುಗಳನ್ನು ಹಾಕಿಸಬಹುದು. ಒಡೆದ ನಂತರ ಮನೆ ಕೊಡಬೇಕಾಗುತ್ತದೆ. ನೆರೆಪೀಡಿತರು, ರಾಜಕಾಲುವೆಗಳ ಮೇಲೆ ಮನೆ ಕಟ್ಟಿದವರಿಗೆ ಇನ್ನೂ ಮನೆ ನೀಡಿಲ್ಲ. ಇದು ಸಂಪೂರ್ಣವಾಗಿ ಮತಬ್ಯಾಂಕ್ ರಾಜಕಾರಣ’ ಎಂದು ಆರೋಪಿಸಿದರು.
ಜನವರಿ 5ರಂದು ಕೋಗಿಲು ಬಡಾವಣೆಯಲ್ಲಿ ಭಾರಿ ಹೋರಾಟ ನಡೆಸಲಾಗುವುದು. ರಾಜೀವ್ ಗಾಂಧಿ ಗೃಹನಿರ್ಮಾಣ ನಿಗಮದಡಿ ಅರ್ಜಿ ಸಲ್ಲಿಸಿರುವವರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಸೀಮ್ ಬಡಾವಣೆಯನ್ನು ನಿರ್ಮಿಸಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
‘ಹಣ ಪಡೆದು ಅಕ್ರಮವಾಗಿ ಮನೆಗಳನ್ನು ಒದಗಿಸಿರುವವರನ್ನು ಕಾನೂನು ಕ್ರಮದಡಿಯಲ್ಲಿ ಬಂಧಿಸಬೇಕು. ವಸೀಮ್ ಆಗಿರಲಿ ಅಥವಾ ವಿಶ್ವನಾಥ್ ಆಗಿರಲಿ, ತಪ್ಪು ಮಾಡಿದರೆ ಒದ್ದು ಒಳಗೆ ಹಾಕಬೇಕು. ವಸೀಮ್ ಬಡಾವಣೆಯ ನಿರ್ಮಾತೃ ಕಾಂಗ್ರೆಸ್‌ನ ಸ್ಥಳೀಯ ಮುಖಂಡ ಹಾಗೂ ಸಚಿವರಿಗೆ ಹತ್ತಿರದ ವ್ಯಕ್ತಿ’ ಎಂದು ಆರೋಪಿಸಿದರು.
‘₹3.5 ಲಕ್ಷದಿಂದ ₹4 ಲಕ್ಷಕ್ಕೆ ಗುಡಿಸಲು ಹಾಕಿಸುವ ಬಗ್ಗೆ ಧ್ವನಿ ಮುದ್ರಿಕೆಗಳು ನಮ್ಮಬಳಿ ಇವೆ. ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ಮಾಡಿಸಿಕೊಟ್ಟಿರುವ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಲಾಗುವುದು’ ಎಂದು ಹೇಳಿದರು.
ಬಿಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ಶಾಸಕರಾದ ಮುನಿರಾಜ್, ಕೆ.ಎಸ್. ನವೀನ್, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಹರೀಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.