ಬೆಂಗಳೂರು: ಇಲ್ಲಿನ ಕೋಮಂಗಲದ ಕೆಎಸ್‌ಆರ್‌ಪಿ ಕ್ರೀಡಾಂಗಣದಲ್ಲಿ ಎರಡು ದಿನ ನಡೆದ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಶನಿವಾರ ಸಂಜೆ ತೆರೆಬಿತ್ತು.
ಸಮಾರೋಪ ಸಮಾರಂಭದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
ಬಳಿಕ ಮಾತನಾಡಿದ ಅವರು, ‘ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯ ಪೊಲೀಸ್ ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮಬೇಕು. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಉತ್ತೇಜನ ನೀಡಲಾಗುವುದು’ ಎಂದು ನುಡಿದರು.
‘ಕ್ರೀಡೆಯಲ್ಲಿ ಭಾಗವಹಿಸುವವರಿಗೆ ತಯಾರಿ ಬಹಳ ಮುಖ್ಯವಾಗುತ್ತದೆ. ವಿಶೇಷ ತರಬೇತಿ ನೀಡುವಂತೆ ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಲಾಗುವುದು. ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಬೇಕು. ತನಿಖೆಯಲ್ಲಿ ಕರ್ನಾಟಕ ಪೊಲೀಸ್ ‘ಬೆಸ್ಟ್ ಪೊಲೀಸ್’ ಎಂದು ಹೇಳುತ್ತಾರೆ. ಕ್ರೀಡೆಯಲ್ಲಿಯೂ ‘ಕರ್ನಾಟಕ ಪೊಲೀಸ್ ಬೆಸ್ಟ್’ ಎಂದು ಹೇಳುವಂತಾಗಬೇಕು’ ಎಂದರು.
‘ಮುಖ್ಯಮಂತ್ರಿ ಅವರು ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಶೇ 3ರಷ್ಟು ಮೀಸಲಾತಿ ಕಲ್ಪಿಸಿ ಕ್ರೀಡಾಪಟುಗಳಿಗೆ ಉತ್ತೇಜಿಸಿದ್ದಾರೆ. ಬೇರೆ ಯಾವ ರಾಜ್ಯಗಳಲ್ಲೂ ಇಷ್ಟೊಂದು ಮೀಸಲಾತಿ ನೀಡಿಲ್ಲ. ಕೆಎಸ್‌ಆರ್‌ಪಿ ಕ್ರೀಡಾಂಗಣ ನವೀಕರಣಗೊಳಿಸಲು ₹ 3 ಕೋಟಿ ಅನುದಾನ ನೀಡಲಾಗಿದೆ. ಮುಂದಿನ ವರ್ಷದ ಕ್ರೀಡಾಕೂಟದ ವೇಳೆಗೆ ಸಿಂಥೆಟಿಕ್ ಟ್ರ್ಯಾಕ್ ಸಿದ್ಧವಾಗಲಿದೆ’ ಎಂದು ಹೇಳಿದರು.
ಎರಡು ದಿನದಿಂದ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಪೊಲೀಸ್ ದೂರದೃಷ್ಟಿಯ ಬಗ್ಗೆ ಚರ್ಚಿಸಲಾಯಿತು. ಇಲಾಖೆ ಜನಸಮುದಾಯದ ಜೊತೆ ಹೇಗೆ ಕೆಲಸ ಮಾಡಬೇಕು ಎಂಬುದು ಸೇರಿದಂತೆ ಹಲವು ಮಹತ್ವದ ವಿಚಾರಗಳು ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಕೆಎಸ್‌ಆರ್‌ಪಿ ಎಡಿಜಿಪಿ ಉಮೇಶ್ ಕುಮಾರ್, ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಕೆಎಸ್‌ಆರ್‌ಪಿ ಐಜಿಪಿ ಸಂದೀಪ್ ಪಾಟೀಲ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.