ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಹೆಸರಿನಲ್ಲಿ ಏಳು ಮಂದಿ ಉದ್ಯೋಗ ಆಕಾಂಕ್ಷಿಗಳಿಗೆ ನಕಲಿ ನೇಮಕಾತಿ ಪತ್ರ ನೀಡಿ ₹49 ಲಕ್ಷ ವಂಚಿಸಿದ್ದ ಆರೋಪದಡಿ ದಾಖಲಾಗಿದ್ದ ಪ್ರಕರಣದ ಸಂಬಂಧ ಮತ್ತೊಬ್ಬ ಆರೋಪಿಯನ್ನು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕೊಪ್ಪಳ ನಗರಸಭೆ ಮಾಜಿ ಸದಸ್ಯೆ ವಿಜಯಾ ಹಿರೇಮಠ್ ಬಂಧಿತ ಆರೋಪಿ.
2024ರ ಸೆ.3ರಂದು ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ಸಿದ್ದಲಿಂಗಯ್ಯ ಹಿರೇಮಠ್ ಅವರನ್ನು ಬಂಧಿಸಲಾಗಿತ್ತು. ವಿಜಯಾ ಹಿರೇಮಠ್ ಅವರು ತಲೆಮರೆಸಿಕೊಂಡಿದ್ದರು. ರಾಮದುರ್ಗದ ಸಂಬಂಧಿಕರ ಮನೆಯಲ್ಲಿದ್ದ ಮಾಹಿತಿ ಆಧರಿಸಿ ಗುರುವಾರ ಕಾರ್ಯಾಚರಣೆ ನಡೆಸಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಪ್ರತಿಭಟನೆ ನಡೆಸಿದ್ದ ಉದ್ಯೋಗ ಆಕಾಂಕ್ಷಿಗಳು: ಹಣ ಕಳೆದುಕೊಂಡಿದ್ದ ಉದ್ಯೋಗ ಆಕಾಂಕ್ಷಿಗಳು, ಮೂರು ದಿನಗಳ ಹಿಂದೆ ಕೊಪ್ಪಳದ ಆರೋಪಿಯ ಮನೆಯ ಎದುರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಆರ್.ಟಿ. ನಗರ ಕೌಸರ್ ಬಡಾವಣೆಯ ಅಬ್ದುಲ್ ರಜಾಕ್ ಅವರು ದೂರು ನೀಡಿದ್ದರು. ದೂರು ಆಧರಿಸಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
‘ಕೊಪ್ಪಳದ ಸಿದ್ದಲಿಂಗಯ್ಯ ಹಿರೇಮಠ್ ಅವರು ಸಹಕಾರ ನಗರದಲ್ಲಿ ವಾಸಿಸುತ್ತಿದ್ದರು. ತನಗೆ ನ್ಯಾಯಮೂರ್ತಿಗಳ ಪರಿಚಯವಿದ್ದು, ನೇರ ನೇಮಕಾತಿ ಮೂಲಕ ನ್ಯಾಯಾಲಯದಲ್ಲಿ ಕೆಳ ಹಂತದ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ಉದ್ಯೋಗ ಆಕಾಂಕ್ಷಿಗಳಿಂದ ಹಂತಹಂತವಾಗಿ ಹಣ ಪಡೆದು ವಂಚಿಸಿದ್ದರು. ಆರೋಪಿಯ ಕೃತ್ಯಕ್ಕೆ ವಿಜಯಾ ಅವರು ಸಹಕಾರ ನೀಡಿದ್ದರು’ ಎಂದು ಪೊಲೀಸರು ಹೇಳಿದರು.
‘ಅಬ್ದುಲ್ ರಜಾಕ್ ಅವರು ತನ್ನ ಚಿಕ್ಕಪ್ಪನ ಪುತ್ರ ಜಾವೀದ್ ಅವರಿಗೆ ಕೆಲಸ ಕೊಡಿಸುವಂತೆ ಆರೋಪಿಯೊಂದಿಗೆ ಮಾತುಕತೆ ನಡೆಸಿದ್ದರು. ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದ ಜಾವೀದ್ಗೆ ಸರ್ವರ್ ಹುದ್ದೆ ಕೊಡಿಸುವುದಾಗಿ ಹೇಳಿ ಸಿದ್ದಲಿಂಗಯ್ಯ ಅವರು ಹಂತಹಂತವಾಗಿ ₹7 ಲಕ್ಷ ಹಣ ಪಡೆದುಕೊಂಡಿದ್ದರು. ಅಲ್ಲದೇ ಹೈಕೋರ್ಟ್ ನ್ಯಾಯಮೂರ್ತಿ ಹೆಸರಿನ ನಕಲಿ ಸಹಿಯುಳ್ಳ ನೇಮಕಾತಿ ಪತ್ರ ನೀಡಿದ್ದರು. ಜಾವೀದ್ ಜತೆಗೆ ಇನ್ನೂ ಆರು ಮಂದಿಗೆ ಇದೇ ರೀತಿಯಲ್ಲಿ ವಂಚಿಸಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.