
ಕಾಂಗ್ರೆಸ್
ಬೆಂಗಳೂರು: ಕೆಪಿಸಿಸಿಯ ನೂತನ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್, ಜಿ.ಸಿ. ಚಂದ್ರಶೇಖರ್, ವಿನಯ ಕುಲಕರ್ಣಿ, ಮಂಜುನಾಥ ಭಂಡಾರಿ, ವಸಂತಕುಮಾರ್ ಮತ್ತು ಚುನಾವಣಾ ಪ್ರಚಾರ ಸಮಿತಿಯ ನೂತನ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಅವರು ಶುಕ್ರವಾರ ಪದಗ್ರಹಣ ಮಾಡಿದರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೊ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಆರು ಮಂದಿ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಚಾರ ಸಮಿತಿಯ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ಎಂ.ಬಿ. ಪಾಟೀಲ, ಸಚಿವರಾದ ಜಿ. ಪರಮೇಶ್ವರ, ಈಶ್ವರ ಖಂಡ್ರೆ, ಬಿ.ಜೆಡ್. ಜಮೀರ್ ಅಹಮದ್ ಖಾನ್ ಸೇರಿದಂತೆ ಹಲವು ನಾಯಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸಚಿವರಾದ ಸತೀಶ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮತ್ತು ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ ಈ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದರು. ಅವರ ಬದಲಿಗೆ ಐವರನ್ನು ನೂತನ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ ಎಐಸಿಸಿ ವಾರದ ಹಿಂದೆ ಆದೇಶ ಹೊರಡಿಸಿತ್ತು.
ನಿರ್ಗಮಿತ ಕಾರ್ಯಾಧ್ಯಕ್ಷರಿಗೆ ಧನ್ಯವಾದ ಹೇಳುವುದರ ಜತೆಯಲ್ಲೇ ನೂತನ ಕಾರ್ಯಾಧ್ಯಕ್ಷರನ್ನು ಸ್ವಾಗತಿಸಿದ ಶಿವಕುಮಾರ್, ‘ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷರ ಹುದ್ದೆಯಲ್ಲಿದ್ದವರು ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಕೋವಿಡ್ ಸಂಕಷ್ಟದ ಅವಧಿಯಲ್ಲಿ ರಾಜ್ಯದ ಜನರ ಜತೆ ನಿಂತು ಸೇವೆ ಸಲ್ಲಿಸಿದ್ದರು’ ಎಂದರು.
‘ಪಕ್ಷ ಸಂಘಟನೆಯಲ್ಲಿ ಶ್ರಮ ವಹಿಸುವವರಿಗೆ ಉತ್ತಮ ಸ್ಥಾನಗಳು ದೊರಕುತ್ತವೆ. ಹೊಸ ಕಾರ್ಯಾಧ್ಯಕ್ಷರ ಅವಧಿಯಲ್ಲಿ ಪಕ್ಷವು ಮತ್ತಷ್ಟು ಎತ್ತರಕ್ಕೆ ಏರಬೇಕು. ನೀವು ಇಲ್ಲಿ ಸಾಕ್ಷ್ಯ ಬಿಟ್ಟು ಹೋಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.