ADVERTISEMENT

ಬೆಂಗಳೂರು | ಕೆಪಿಎಂಇ ಉಲ್ಲಂಘನೆ: ವೈದ್ಯಕೀಯ ಸಂಸ್ಥೆಗಳಿಗೆ ದಂಡ

ಎರಡು ಆಸ್ಪತ್ರೆಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 14:28 IST
Last Updated 12 ನವೆಂಬರ್ 2025, 14:28 IST
.
.   

ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯ (ಕೆಪಿಎಂಇ) ನಿಯಮಗಳ ಉಲ್ಲಂಘನೆ ಕಾರಣ ಆಸ್ಪತ್ರೆಗಳು ಸೇರಿ 18 ವೈದ್ಯಕೀಯ ಸಂಸ್ಥೆಗಳಿಗೆ ಒಟ್ಟು ₹ 4 ಲಕ್ಷ ದಂಡ ವಿಧಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ.

ಕೆಪಿಎಂಇ ನೋಂದಣಿ ಮತ್ತು ಕುಂದು ಕೊರತೆ ಪ್ರಾಧಿಕಾರದ ಸಭೆಯನ್ನು ಅವರು ನಗರದಲ್ಲಿ ಬುಧವಾರ ನಡೆಸಿದರು. ಕೆಪಿಎಂಇ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಆರೋಗ್ಯಾಧಿಕಾರಿಗಳು 57 ಪ್ರಕರಣಗಳ ಬಗ್ಗೆ ವಿವರ ಸಲ್ಲಿಸಿದ್ದರು. ಇವುಗಳಲ್ಲಿ ಮಾದನಾಯಕನಹಳ್ಳಿಯಲ್ಲಿರುವ ಪಬ್ಲಿಕ್ಸ್ ಹೆಲ್ತ್‌ ಕೇರ್ ಹಾಗೂ ಯಲಹಂಕದಲ್ಲಿರುವ ಎನ್‌ಡಿಆರ್ ಆಸ್ಪತ್ರೆ ವಿರುದ್ಧ ಎಫ್‌ಐಆರ್ ದಾಖಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಒಂದು ಪ್ರಕರಣವನ್ನು ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ ವರ್ಗಾಯಿಸಲಾಗಿದೆ. ಒಂಬತ್ತು ಪ್ರಕರಣಗಳನ್ನು ಮುಂದಿನ ಸಭೆಯಲ್ಲಿ ಮಂಡಿಸಲು ಆದೇಶಿಸಿದ್ದಾರೆ.

ADVERTISEMENT

ದಂಡ ವಿಧಿಸಲ್ಪಟ್ಟ ಸಂಸ್ಥೆಗಳು: ಕೆಂಗೇರಿ ಉಪನಗರದಲ್ಲಿರುವ ಶ್ರೀ ಫೌಂಡೇಷನ್, ಕಗ್ಗಲೀಪುರದಲ್ಲಿರುವ ಸಾಯಿ ಕ್ಲಿನಿಕ್ ಹಾಗೂ ತಾವರೆಕೆರೆ ಹೋಬಳಿಯಲ್ಲಿರುವ ವಿನಾಯಕ್ ಕ್ಲಿನಿಕ್‌ಗೆ ತಲಾ ₹ 50 ಸಾವಿರ ದಂಡ ವಿಧಿಸಲಾಗಿದೆ. ಕಗ್ಗಲೀಪುರದಲ್ಲಿರುವ ಸಪ್ತಗಿರಿ ಕ್ಲಿನಿಕ್, ತಾವರೆಕೆರೆಯಲ್ಲಿರುವ ಸಾಯಿ ಕ್ಲಿನಿಕ್, ಇಂದಿರಾನಗರದಲ್ಲಿರುವ ದಿ ವೈಟ್ ಎಲಿಫೆಂಟ್ ಆಲ್ಟರ್ನೇಟ್ ಥೆರಪಿ ಕ್ಲಿನಿಕ್, ಬಸವೇಶ್ವರ ಬಡಾವಣೆಯಲ್ಲಿರುವ ಅಂಜನಾದ್ರಿ ಮೆಡಿಕಲ್ ಸರ್ವೀಸ್ ಸ್ಟೋರ್ಸ್, ಮಾದನಾಯಕನಹಳ್ಳಿಯಲ್ಲಿರುವ ನಾರಾಯಣ ದಂತ ಚಿಕಿತ್ಸಾ ಕೇಂದ್ರ ಹಾಗೂ ಪಬ್ಲಿಕ್ಸ್ ಹೆಲ್ತ್‌ ಕೇರ್‌ಗೆ ತಲಾ ₹ 25 ಸಾವಿರ ದಂಡ ವಿಧಿಸಲಾಗಿದೆ. 

ತಾವರೆಕೆರೆಯ ಮಾತೃಶ್ರೀ ಕ್ಲಿನಿಕ್‌ಗೆ ₹ 20 ಸಾವಿರ ದಂಡ ಹಾಕಲಾಗಿದೆ. ಸುಶ್ರುತ ಕ್ಲಿನಿಕ್, ಕೆಂಗೇರಿ ಉಪ ನಗರದಲ್ಲಿರುವ ವರ್ಷ ಫೌಂಡೇಷನ್, ಮಂಜುನಾಥನಗರದಲ್ಲಿರುವ ತಿರುಮಲ ಕ್ಲಿನಿಕ್, ಶಾಮಣ್ಣ ಗಾರ್ಡನ್‌ನಲ್ಲಿರುವ ಇಸ್ರಾರ್ ಕ್ಲಿನಿಕ್, ನಿಸರ್ಗ ಲೇಔಟ್‌ನಲ್ಲಿರುವ ಆದ್ಯ ಕ್ಲಿನಿಕ್ ಹಾಗೂ ಬೇಗೂರಿನಲ್ಲಿರುವ ಹೋಪ್ ಫೌಂಡೇಷನ್‌ಗೆ ತಲಾ ₹ 10 ಸಾವಿರ ದಂಡ ವಿಧಿಸಲಾಗಿದೆ.

ಮೈಲಸಂದ್ರ ಕೆರೆಯ ಹತ್ತಿರ ಇರುವ ರಮೇಶ್ ರೆಡ್ಡಿ ಲೇಔಟ್‌ನಲ್ಲಿ ಸುಮಾ ಎಂಬುವವರು ಅನಧಿಕೃತವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿರುವುದು ವಿಚಾರಣೆ ವೇಳೆ ದೃಢಪಟ್ಟಿದ್ದು, ಅವರಿಗೆ ₹ 10 ಸಾವಿರ ದಂಡ ಹಾಕಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.