ಬೆಂಗಳೂರು: ಬಣ್ಣ ಕಳೆದುಕೊಂಡ ಗೋಡೆಗಳು, ವಾರಸುದಾರರಿಲ್ಲದೇ ತುಕ್ಕು ಹಿಡಿದು ನಿಂತಿದ್ದ ವಾಹನಗಳು, ರಾತ್ರಿ ವೇಳೆ ಮದ್ಯ ವ್ಯಸನಿಗಳ ಅಡ್ಡೆ, ಎಲ್ಲೆಂದರಲ್ಲಿ ಬಿದ್ದಿರುವ ಖಾಲಿ ಬಾಟಲಿಗಳು, ಕೊಳಚೆ ನೀರು ಸಂಗ್ರಹವಾಗಿ ದುರ್ವಾಸನೆ... ಕೃಷ್ಣರಾಜೇಂದ್ರ ಮಾರುಕಟ್ಟೆಯ ವಾಣಿಜ್ಯ ಕಟ್ಟಡದ ಕೆಳ ಅಂತಸ್ತಿನಲ್ಲಿರುವ ವಾಹನ ನಿಲುಗಡೆ ಪ್ರದೇಶವು ಹೀಗೆ ಗಬ್ಬೆದ್ದು ನಾರುತ್ತಿದೆ. ನಿರ್ವಹಣೆಯಿಲ್ಲದೆ ಸೊರಗಿದೆ.
ಇನ್ನು ಕೆಲವೇ ದಿನಗಳಲ್ಲಿ ಇದಕ್ಕೆ ಮುಕ್ತಿ ಸಿಗಲಿದ್ದು, ವಾಹನ ನಿಲುಗಡೆ ಪ್ರದೇಶದ ಚಹರೆಯೇ ಬದಲಾಗಲಿದೆ. ಸೊರಗಿದ್ದ ವಾಹನ ನಿಲುಗಡೆ(ಪಾರ್ಕಿಂಗ್ ಸ್ಥಳ) ಪ್ರದೇಶಕ್ಕೆ ಹೊಸ ಹೊಳಪು ಸಿಗಲಿದೆ.
ಈ ಹಿಂದೆ ಗುತ್ತಿಗೆ ಪಡೆದಿದ್ದ ಕಂಪನಿಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಹಿಂದಿನ ಬಿಬಿಎಂಪಿ) ಟೆಂಡರ್ ಹಣವನ್ನು ಪಾವತಿಸದಿರುವ ಕಾರಣಕ್ಕೆ ಹೊಸ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ‘ಪಿನ್ಸ್ ರಾಯಲ್ ಪಾರ್ಕಿಂಗ್ ಸಲ್ಯೂಷನ್ ಕಂಪನಿ’ಯು ಈಗ ಗುತ್ತಿಗೆ ಪಡೆದುಕೊಂಡಿದ್ದು, ನವೀಕರಣ ಕಾಮಗಾರಿ ಆರಂಭಿಸಿದೆ.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿರುವ ‘ಬಹುಮಹಡಿ ಪಾರ್ಕಿಂಗ್ ಕಟ್ಟಡ’ದ ಗುತ್ತಿಗೆ ಪಡೆದಿರುವ ‘ಪಿನ್ಸ್ ಕಂಪನಿ’ಯೇ ಈ ಸ್ಥಳವನ್ನೂ 10 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿದೆ. ‘ಅಡ್ವಾನ್ಸ್ಡ್ ಪಾರ್ಕಿಂಗ್ ತಂತ್ರಜ್ಞಾನ’(ದುಬೈ ಮಾದರಿಯ ತಂತ್ರಜ್ಞಾನ) ಅಳವಡಿಸುವ ಕೆಲಸಗಳು ವೇಗದಿಂದ ಸಾಗುತ್ತಿವೆ. ಜಿಬಿಎ (ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಅನುಷ್ಠಾನಕ್ಕೆ ಬಂದಮೇಲೆ ಮತ್ತೊಂದು ‘ಸ್ಮಾರ್ಟ್ ಪಾರ್ಕಿಂಗ್’ ಸ್ಥಳವು ವಾಹನ ಚಾಲಕರ ಬಳಕೆಗೆ ಲಭಿಸುವ ಕಾಲ ಸನ್ನಿಹಿತವಾಗಿದೆ.
ಹಣ ಬಾಕಿ ಉಳಿಸಿಕೊಂಡಿದ್ದ ಕಂಪನಿ: ಈ ಹಿಂದೆ ಗುತ್ತಿಗೆ ಪಡೆದಿದ್ದ ಕಂಪನಿಯು 2023ರ ಫೆಬ್ರುವರಿ 28ರಿಂದ 2026ರ ಫೆಬ್ರುವರಿ 27ರವರೆಗೆ ಮೂರು ವರ್ಷಗಳ ಅವಧಿಗೆ ಪ್ರತಿ ತಿಂಗಳು ₹14 ಲಕ್ಷವನ್ನು ಬಿಬಿಎಂಪಿಗೆ ಪಾವತಿಸುವುದಾಗಿ ಟೆಂಡರ್ ಪಡೆದಿತ್ತು. ಆದರೆ, ಕಂಪನಿಯು ಪೂರ್ಣ ಮೊತ್ತವನ್ನು ಪಾವತಿ ಮಾಡಿರಲಿಲ್ಲ. ನಿಯಮಾವಳಿಯಂತೆ ಸ್ವಚ್ಛತೆಯನ್ನೂ ಕಾಪಾಡಿರಲಿಲ್ಲ. ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ನಿಗದಿ ಪಡಿಸಿರುವ ದರಪಟ್ಟಿಯನ್ನು ಆಗಮನ ಹಾಗೂ ನಿರ್ಗಮನ ದ್ವಾರದಲ್ಲಿ ಅಳವಡಿಸಿರಲಿಲ್ಲ. ಈ ಸಂಬಂಧ ಸಾರ್ವಜನಿಕರಿಂದಲೂ ದೂರುಗಳು ಬಂದಿದ್ದವು. ಅಧಿಕ ಮಳೆ ಬಂದು ಪಾರ್ಕಿಂಗ್ ಸ್ಥಳದಲ್ಲಿ ನೀರು ಸಂಗ್ರಹಗೊಂಡರೆ ಟೆಂಡರ್ ಪಡೆದವರೇ ಸ್ವಚ್ಛತೆ ಮಾಡಬೇಕು ಎಂಬ ಷರತ್ತಿದ್ದರೂ ಅದನ್ನು ಉಲ್ಲಂಘಿಸಲಾಗಿತ್ತು. ಹೀಗಾಗಿ, ಹೊಸದಾಗಿ ಟೆಂಡರ್ ಕರೆಯಲಾಗಿದೆ ಎಂದು ಮೂಲಗಳು ಹೇಳಿವೆ.
ಪಿನ್ಸ್ ಕಂಪನಿಗೆ ಮೊದಲ ಐದು ವರ್ಷಕ್ಕೆ ತಲಾ ₹40.50 ಲಕ್ಷಕ್ಕೆ ಬಿಡ್ ಆಗಿದೆ. ನಂತರದ ವರ್ಷಗಳಲ್ಲಿ ಬಿಡ್ ಮೊತ್ತವು ಏರಿಕೆ ಆಗಲಿದೆ. ಅಂದಾಜು ₹4.50 ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
‘ಕೆ.ಆರ್ ಮಾರುಕಟ್ಟೆ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗೆ ಸ್ಥಳದ ಅಭಾವವಿದೆ. ಮುಂಜಾನೆಯೇ ಬಂದರೆ ಮಾತ್ರ ರಸ್ತೆಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಲು ಜಾಗ ದೊರೆಯಲಿದೆ. ಬೆಳಿಗ್ಗೆ ಎಂಟರ ನಂತರ ಬಂದರೆ ದೂರದಲ್ಲಿ ವಾಹನ ನಿಲುಗಡೆ ಮಾಡಿ ಮಾರುಕಟ್ಟೆಗೆ ಬರಬೇಕಾಗದ ಪರಿಸ್ಥಿತಿಯಿದೆ. ಈ ಸ್ಥಳವು ನವೀಕರಣಗೊಂಡು ಬಳಕೆಗೆ ಲಭ್ಯವಾದರೆ ಹೆಚ್ಚು ಅನುಕೂಲವಾಗಲಿದೆ’ ಎಂದು ಸವಾರ ದಿಲೀಪ್ ಹೇಳಿದರು.
ಸೆ.2ರಿಂದಲೇ ನವೀಕರಣ ಕಾಮಗಾರಿ ಆರಂಭವಾಗಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ವಾಹನ ನಿಲುಗಡೆಗೆ ಅವಕಾಶ ಸಿಗಲಿದೆ. ಪಾರ್ಕಿಂಗ್ ಸ್ಥಳವು ಸಿ.ಸಿ.ಟಿ.ವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಇರಲಿದೆ–ಕುಮಾರ್ ವ್ಯವಸ್ಥಾಪಕ ಪಿನ್ಸ್ ರಾಯಲ್ ಪಾರ್ಕಿಂಗ್ ಸಲ್ಯೂಷನ್ ಕಂಪನಿ
ಕೆಲವು ವರ್ಷಗಳಿಂದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಈ ಸ್ಥಳದಲ್ಲಿ ಅನಧಿಕೃತವಾಗಿ ತಮ್ಮ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದರು. ಜಿಬಿಎ ಟೆಂಡರ್ ನೀಡಿರುವುದಕ್ಕೆ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ದಿನದ 24 ಗಂಟೆಯೂ ವಾಹನ ಪಾರ್ಕಿಂಗ್‌ಗೆ ಅವಕಾಶ
ಉಚಿತ ವೈ–ಫೈ ವ್ಯವಸ್ಥೆ
ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ
ಕಾಫಿ ಶಾಪ್
ಆರ್‌ಒ ಕುಡಿಯುವ ನೀರಿನ ಘಟಕ ಅಳವಡಿಕೆ
ವಾಲೆಟ್ ಪಾರ್ಕಿಂಗ್
ಇ.ವಿ ಚಾರ್ಜಿಂಗ್ ಪಾಯಿಂಟ್
ವ್ಹೀಲ್ ಚೇರ್ ವ್ಯವಸ್ಥೆ
ಅಡ್ವಾನ್ಸ್ಡ್ ಸೆಕ್ಯೂರಿಟಿ ಸಿಸ್ಟಂ
ವಾರಸುದಾರರಿಲ್ಲದೇ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದ ವಿವಿಧ ಮಾದರಿಯ ವಾಹನಗಳನ್ನು ಕೆ.ಆರ್.ಮಾರುಕಟ್ಟೆ ಠಾಣೆಯ ಪೊಲೀಸರಿಗೆ ಗುತ್ತಿಗೆ ಸಂಸ್ಥೆಯು ಹಸ್ತಾಂತರಿಸಿದೆ. ವಾಹನಗಳನ್ನು ನಿಲುಗಡೆ ಮಾಡಿದ್ದ ಕೆಲವು ಮಾಲೀಕರು ಅವುಗಳನ್ನು ಕೊಂಡೊಯ್ಯಲು ಇದುವರೆಗೂ ಬಂದಿರಲಿಲ್ಲ. 169 ದ್ವಿಚಕ್ರ ವಾಹನ 20 ಆಟೊ 10 ಕಾರು ಸೇರಿ ಒಟ್ಟು 348 ವಾಹನಗಳನ್ನು ಪೊಲೀಸರ ಸುಪರ್ದಿಗೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.