ADVERTISEMENT

‘ಕೃಷಿ’ ಸಮಸ್ಯೆ; ತಜ್ಞರ ಸಲಹೆಗೆ ರೈತ ‘ಖುಷಿ’

ಮೇಳದ ‘ಸಲಹಾ ಸೇವಾ ಕೇಂದ್ರ’ಕ್ಕೆ ಉತ್ತಮ ಸ್ಪಂದನೆ l ಕೃಷಿ ಸುಧಾರಣೆಗೆ ಮಾಹಿತಿ

ಸಂತೋಷ ಜಿಗಳಿಕೊಪ್ಪ
Published 12 ನವೆಂಬರ್ 2021, 20:13 IST
Last Updated 12 ನವೆಂಬರ್ 2021, 20:13 IST
ಕೃಷಿ ಸಲಹಾ ಕೇಂದ್ರದಲ್ಲಿ ರೈತರ ಜೊತೆ ಕೃಷಿ ತಜ್ಞರು ಚರ್ಚಿಸಿದರು. ಪ್ರಜಾವಾಣಿ ಚಿತ್ರ : ಅನೂಪ್ ರಾಘ.ಟಿ.
ಕೃಷಿ ಸಲಹಾ ಕೇಂದ್ರದಲ್ಲಿ ರೈತರ ಜೊತೆ ಕೃಷಿ ತಜ್ಞರು ಚರ್ಚಿಸಿದರು. ಪ್ರಜಾವಾಣಿ ಚಿತ್ರ : ಅನೂಪ್ ರಾಘ.ಟಿ.   

ಬೆಂಗಳೂರು: ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಹೇಗೆ ? ಯಾವ ಬೆಳೆ ಬೆಳೆದರೆ ಲಾಭದಾಯಕ ? ಬೆಳೆ ರೋಗ ಹಾಗೂ ಕೀಟಗಳ ನಿವಾರಣೆಗೆ ಯಾವ ಔಷಧಿ ಸಿಂಪಡಿಸಬೇಕು? ಲಾಭದಾಯಕ ಕೃಷಿಗಾಗಿ ಯಾವೆಲ್ಲ ಪದ್ಧತಿ ಅನುಸರಿಸಬೇಕು? ಸಾವಯವ ಗೊಬ್ಬರ ತಯಾರಿಕೆ ಹೇಗೆ? ಕೃಷಿ ಜೊತೆಯಲ್ಲೇ ಜೇನು ಸಾಕಿದರೆ ಹಾಗೂ ಕಿರು ಅರಣ್ಯ ಸೃಷ್ಟಿಸಿದರೆ ಲಾಭವೇ? ...

ಈ ರೀತಿಯ ನೂರಾರು ಪ್ರಶ್ನೆಗಳಿಗೆ ಕೃಷಿ ತಜ್ಞರಿಂದ ರೈತರು ಉತ್ತರ ಪಡೆಯಲು ‘ಕೃಷಿ ಮೇಳ’ ವೇದಿಕೆಯಾಯಿತು. ಕೃಷಿ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರಿಗೆ ಉಚಿತವಾಗಿ ಸಲಹೆ ನೀಡಲು ಮೇಳದಲ್ಲಿ ‘ಕೃಷಿ ಸಲಹಾ ಕೇಂದ್ರ’ ತೆರೆಯಲಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಬೆಂಗಳೂರು, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ತುಮಕೂರು, ಮಂಡ್ಯ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳ ರೈತರು ಮೇಳಕ್ಕೆ ಬರುತ್ತಿದ್ದಾರೆ. ಆ ಪೈಕಿ ಕೆಲವರು, ಕೃಷಿ ಸಲಹಾ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಅದನ್ನು ಆಲಿಸುತ್ತಿರುವ ತಜ್ಞರು, ಪರಿಹಾರದ ಸಲಹೆಯನ್ನು ಲಿಖಿತವಾಗಿ ನೀಡುತ್ತಿದ್ದಾರೆ.

ADVERTISEMENT

‘ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಕೃಷಿ ಮೇಳದ ಉದ್ದೇಶ. ಹೀಗಾಗಿಯೇ ಸಲಹಾ ಸೇವಾ ಕೇಂದ್ರ ತೆರೆಯಲಾಗಿದೆ. ಒಬ್ಬೊಬ್ಬ ರೈತರದ್ದು ಒಂದೊಂದು ಪ್ರಶ್ನೆಯಾಗಿದ್ದು, ಇಡೀ ಕೃಷಿ ಕ್ಷೇತ್ರದ ಸಮಸ್ಯೆ ಚಿತ್ರಣ ನಮಗಾಗುತ್ತಿದೆ’ ಎಂದು ಕೇಂದ್ರದ ಉಸ್ತುವಾರಿ ಡಾ. ಎನ್‌. ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಣ ಬೇಸಾಯದಲ್ಲಿ ಕೃಷಿ ಸುಧಾರಣೆಗೆ ಏನು ಮಾಡಬೇಕೆಂಬ ಗೊಂದಲ ರೈತರಲ್ಲಿದೆ. ತೋಟಗಾರಿಕೆಯಲ್ಲಿ ಪಾಲಿಹೌಸ್ ಕೃಷಿಗೆ ಬೇಡಿಕೆ ಬಂದಿದ್ದು, ಈ ಬಗ್ಗೆ ತಿಳಿದುಕೊಳ್ಳಲು ರೈತರು ಪ್ರಯತ್ನಿಸುತ್ತಿದ್ದಾರೆ. ಪರಾಗ ಸ್ಪರ್ಶದಿಂದ ಇಳುವರಿ ಹೆಚ್ಚಿಸಲು ಜೇನು ಸಾಕಾಣಿಕೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಈ ಬಗ್ಗೆಯೇ ಹೆಚ್ಚು ರೈತರು ಪ್ರಶ್ನೆ ಕೇಳುತ್ತಿದ್ದಾರೆ.’

‘ಬೆಳೆಗಳಲ್ಲಿ ಕಾಣಿಸುತ್ತಿರುವ ರೋಗಗಳು ಹಾಗೂ ಕೀಟಗಳ ಹಾವಳಿ ಬಗ್ಗೆ ರೈತರಲ್ಲಿ ಆತಂಕ ಶುರುವಾಗಿದೆ. ಇದಕ್ಕೆ ಔಷಧೋಪಚಾರವೇನು ? ಎಂಬುದನ್ನು ವಿಚಾರಿಸುತ್ತಿದ್ದಾರೆ. ಬೆಳೆಗೆ ಸೂಕ್ತ ಮಾರುಕಟ್ಟೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕೃಷಿ ಜೊತೆಯಲ್ಲೇ ಕಿರು ಅರಣ್ಯ ಬೆಳೆಸುವ ಆಲೋಚನೆ ರೈತರಲ್ಲಿದೆ. ಇದಕ್ಕೆಲ್ಲ ಮಣ್ಣಿನ ಫಲವತ್ತತೆ ಹೇಗಿರಬೇಕು ? ಮಣ್ಣಿನ ಆರೋಗ್ಯ ಕಾಯ್ದುಕೊಳ್ಳಲು ಏನು ಮಾಡಬೇಕು ? ಎಂಬ ಬಗ್ಗೆಯೂ ರೈತರು ಸಲಹೆ ಪಡೆಯುತ್ತಿದ್ದಾರೆ’ ಎಂದೂ ಹೇಳಿದರು.

‘ಬಿತ್ತನೆ ಬೀಜಗಳ ಆಯ್ಕೆ ಹಾಗೂ ಯಾವ ಕಾಲದಲ್ಲಿ ಯಾವ ಬೆಳೆ ಬಿತ್ತನೆ ಮಾಡಬೇಕು ಎಂಬುದನ್ನು ರೈತರು ತಿಳಿದುಕೊಳ್ಳುತ್ತಿದ್ದಾರೆ. ರೋಗ ಹಾಗೂ ಕೀಟ ಮುಕ್ತ ಬೀಜಗಳಿಗೆ ಬೇಡಿಕೆ ಇರಿಸುತ್ತಿದ್ದಾರೆ. ರೈತರ ಪ್ರತಿಯೊಂದು ಸಮಸ್ಯೆಗಳಿಗೆ ಸಲಹೆ ನೀಡಿರುವ ತಜ್ಞರು, ಅದೇ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅಧ್ಯಯನವನ್ನೂ ನಡೆಸಲಿದ್ದಾರೆ’ ಎಂದೂ ನಾಗರಾಜು ಮಾಹಿತಿ ನೀಡಿದರು.

ಬೀಜ ವಿಜ್ಞಾನ, ಪಶು ವಿಜ್ಞಾನ, ಅರಣ್ಯ ಶಾಸ್ತ್ರ, ಆಹಾರ ವಿಜ್ಞಾನ, ಜೇನು ಕೃಷಿ, ಕೃಷಿ ಜೀವಶಾಸ್ತ್ರ, ಮಣ್ಣು ವಿಜ್ಞಾನ, ತೋಟಗಾರಿಕೆ ಸೇರಿದಂತೆ ವಿವಿಧ ವಿಭಾಗಗಳ ತಜ್ಞರು ಕೇಂದ್ರದಲ್ಲಿ ಲಭ್ಯವಿದ್ದಾರೆ. ಕೇಂದ್ರದಲ್ಲಿ ‘ಕಿಯೊಸ್ಕ್’ ಇರಿಸಲಾಗಿದ್ದು, ಅದರ ಮೂಲಕವೂ ಕೃಷಿ ಹಾಗೂ ಬೆಳೆಗಳ ಬಗ್ಗೆ ರೈತರು ಮಾಹಿತಿ
ಪಡೆದುಕೊಳ್ಳುತ್ತಿದ್ದಾರೆ.

ಆನ್‌ಲೈನ್ ಮೂಲಕವೂ ಸೇವೆ: ‘ರೈತರ ಪ್ರಶ್ನೆಗಳಿಗೆ ಆನ್‌ಲೈನ್ ಮೂಲಕವೂ ಉತ್ತರಿಸಲಾಗುತ್ತಿದೆ. ಆನ್‌ಲೈನ್ ವೇದಿಕೆಯಲ್ಲಿ 50 ರೈತರು ಉತ್ತರ ಪಡೆದುಕೊಂಡಿದ್ದಾರೆ’ ಎಂದೂ ನಾಗರಾಜು ಹೇಳಿದರು.

‘617 ರೈತರ ಭೇಟಿ’

‘ಮೇಳಕ್ಕೆ ಬಂದಿದ್ದ ರೈತರ ಪೈಕಿ 617 ರೈತರು, ಸಲಹಾ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಪಡೆದುಕೊಂಡಿದ್ದಾರೆ’ ಎಂದು ಎನ್‌. ನಾಗರಾಜು ಮಾಹಿತಿ ನೀಡಿದರು.

‘ಮೊದಲ ದಿನವಾದ ಗುರುವಾರ 186 ರೈತರು ಹಾಗೂ ಶುಕ್ರವಾರ 431 ರೈತರು ಕೇಂದ್ರದ ಸದುಪಯೋಗ ಪಡೆದುಕೊಂಡಿದ್ದಾರೆ’ ಎಂದರು.

ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಕೃಷಿ ಮೇಳ ನಡೆಯುತ್ತಿದೆ. ಇಲ್ಲಿಗೆ ಬಂದ ರೈತರು, ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಹೋಗಬೇಕು. ಇದಕ್ಕಾಗಿ ಕೃಷಿ ತಜ್ಞರ ತಂಡ ಸಜ್ಜುಗೊಳಿಸಲಾಗಿದೆ. ಕೇಂದ್ರಕ್ಕೆ ಬರುವ ರೈತರಿಗೆ ಮಾರ್ಗದರ್ಶನ ಮಾಡುತ್ತಿದೆ.

- ಡಾ. ಕೆ.ಸಿ. ನಾರಾಯಣಸ್ವಾಮಿ, ಶಿಕ್ಷಣ ವಿಭಾಗದ ನಿರ್ದೇಶಕ

ಜಮೀನಿನ ಮಣ್ಣಿನ ಬಗ್ಗೆ ತಜ್ಞರ ಸಲಹೆ ಪಡೆದಿದ್ದೇನೆ. ಮಣ್ಣು ಹದ ಮಾಡುವುದು ಹೇಗೆ? ಎಂಬಿತ್ಯಾದಿ ಸಲಹೆಗಳನ್ನು ತಜ್ಞರು ನೀಡಿದ್ದಾರೆ. ತಜ್ಞರು ಆಡು ಭಾಷೆಯಲ್ಲಿ ವಿವರಣೆ ನೀಡಿದ್ದು, ಬೇಗನೇ ಅರ್ಥವಾಯಿತು.

- ಪಿ. ಪ್ರವೀಣ್,ಶ್ರೀರಂಗಪಟ್ಟಣದ ಪಾಲಹಳ್ಳಿ ರೈತ

ಬೆಳೆ ರೋಗ ಸಮಸ್ಯೆಯಿಂದ ನೊಂದಿದ್ದ ನನಗೆ, ಕೃಷಿ ತಜ್ಞರು ಉತ್ತಮ ಸಲಹೆ ನೀಡಿದ್ದಾರೆ. ಇಂಥ ತಜ್ಞರು ತಾಲ್ಲೂಕಿಗೊಬ್ಬರಂತೆ ಇರಬೇಕು. ಕೃಷಿ ಮೇಳಕ್ಕಾಗಿ ಕಾಯದೇ ನಿತ್ಯವೂ ರೈತರಿಗೆ ಸಲಹೆ ಸಿಗುವ ವೇದಿಕೆ ರೂಪಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು.

- ತ್ಯಾರಮಲ್ಲೇಶ,ಪಾವಗಡದ ಕತ್ತಿಕ್ಯಾತನಹಳ್ಳಿಯ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.