ADVERTISEMENT

ಬಸ್ ಪ್ರಯಾಣ ದರ ಪಟ್ಟಿಯಲ್ಲಿ ಗೊಂದಲ: ಪ್ರಯಾಣಿಕರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:15 IST
Last Updated 26 ಫೆಬ್ರುವರಿ 2020, 19:15 IST

ಬೆಂಗಳೂರು: ಬಸ್ ಪ್ರಯಾಣ ದರ ಏರಿಕೆಯಾದ ಮೊದಲ ದಿನ ಗೊಂದಲಗಳ ನಡುವೆ ಜನರು ಪ್ರಯಾಣ ಮಾಡಿದರು. ಕೆಎಸ್ಆರ್‌ಟಿಸಿ ನೀಡಿರುವ ದರಪಟ್ಟಿಗೂ, ಹಾಲಿ ಇರುವ ಪ್ರಯಾಣ ದರಕ್ಕೂ ವ್ಯತ್ಯಾಸ ಇರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಶೇ 12ರಷ್ಟು ಪ್ರಯಾಣ ದರ ಏರಿಕೆ ಮಾಡಿದ ಕೆಎಸ್ಆರ್‌ಟಿಸಿ, ದರ ಪಟ್ಟಿ ಬಿಡುಗಡೆ ಮಾಡಿತ್ತು. ಅದರ ಪ್ರಕಾರ ಬೆಂಗಳೂರಿನಿಂದ ತುಮಕೂರಿಗೆ ‌₹65 ಇದ್ದ ದರ ₹70 ಆಗಿದೆ. ಹಾಸನಕ್ಕೆ ₹170 ಇದ್ದ ದರ ₹ 190, ಮೈಸೂರಿಗೆ ₹125 ಇದ್ದ ದರ ₹140, ಚಿತ್ರದುರ್ಗಕ್ಕೆ ₹187 ಇದ್ದದ್ದು ₹210 ಆಗಿದೆ.

ಹೊಸ ದರ ಪಟ್ಟಿಯಂತೆ ಬೆಂಗಳೂರಿನಿಂದ ತುಮಕೂರಿಗೆ ₹70 ದರ ಇದೆ. ಆದರೆ, ಬಸ್‌ಗಳಲ್ಲಿ ₹80 ದರ ಪಡೆಯುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ADVERTISEMENT

‘ಕರ್ನಾಟಕ ಸಾರಿಗೆಯ ‘ನಾನ್‌ ಸ್ಟಾಪ್’ ಬಸ್‌ಗಳಲ್ಲಿ ಈ ಮೊದ‍ಲು ₹74 ಇತ್ತು, ಈಗ ₹6 ಹೆಚ್ಚಳವಾಗಿದೆ. ಇಟಿಎಂ ಮಷಿನ್‌ಗಳಲ್ಲಿ ದಾಖಲಾಗಿರುವ ಮೊತ್ತವನ್ನು ನಾವು ಬದಲಿಸಲು ಸಾಧ್ಯವಿಲ್ಲ’ ಎಂದು ನಿರ್ವಾಹಕರು ಪ್ರಯಾ
ಣಿಕರಿಗೆ ಮನವರಿಕೆ ಮಾಡಿಸಲು ಪ್ರಯಾಸಪಟ್ಟರು.

ಈ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿರುವ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ‘ಮೂಲ ಪ್ರಯಾಣ ದರದಲ್ಲಿ ಆದ ಬದಲಾವಣೆಯನ್ನು ಮಾತ್ರ ಮಾಧ್ಯಮಗಳಿಗೆ ನೀಡಲಾಗಿದೆ. ಅರದೊಂದಿಗೆ ಅಪಘಾತ ಪರಿಹಾರ ನಿಧಿ ಮತ್ತು ಟೋಲ್ ಮೊತ್ತ ಕೂಡ ಸೇರುತ್ತದೆ. ಅದನ್ನು ಹೆಚ್ಚಳ ಮಾಡಿಲ್ಲ. ಪ್ರಯಾಣಿಕರು ಗೊಂದಲಕ್ಕೆ ಒಳಗಾಗಬಾರದು’ ಎಂದು ಮನವಿ ಮಾಡಿದರು.

ಇಂದು ಪ್ರತಿಭಟನೆ

ಪ್ರಯಾಣ ದರ ಏರಿಕೆ ಖಂಡಿಸಿ ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್‌) ಗುರುವಾರ ಪ್ರತಿಭಟನೆ ನಡೆಸಲಿದೆ.

‘‌ವಿಪರೀತವಾಗಿ ದರ ಏರಿಕೆ ಮಾಡಿರುವುದು ಪ್ರಯಾಣಿಕರಿಗೆ ಹೊರೆಯಾಗಿದೆ. ಇದರ ವಿರುದ್ಧ ಪುರಭವನದ ಬಳಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದು ಎಸ್‌ಯುಸಿಐ(ಸಿ) ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.