ADVERTISEMENT

ಆಟೊ ನಿಲುಗಡೆ ವಿಚಾರವಾಗಿ ಜಗಳ: ಚಾಲಕನ ಮನೆಗೆ ನುಗ್ಗಿ ಹಲ್ಲೆ– ಮೂವರು ಬಂಧನ

ಕೋಮು ಗಲಭೆಯೆಂದು ಸುಳ್ಳು ಸುದ್ದಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 13:59 IST
Last Updated 25 ಮಾರ್ಚ್ 2024, 13:59 IST
<div class="paragraphs"><p> ಬಂಧನ</p></div>

ಬಂಧನ

   

ಬೆಂಗಳೂರು: ಆಟೊ ನಿಲುಗಡೆ ವಿಚಾರವಾಗಿ ಜಗಳ ತೆಗೆದು ಚಾಲಕರೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಮೂವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ಪ್ರಗತಿಪುರದ ಸೈಯದ್ ಮೊಹಮ್ಮದ್ ತಾಹಾ, ಇವರ ತಂದೆ ಕರೀಂ ಹಾಗೂ ಸ್ನೇಹಿತ ಆಫ್ರೀದ್‌ ಪಾಷಾ ಬಂಧಿತರು. ಆಟೊ ಚಾಲಕ ಸುಕುಮಾರ್ ನೀಡಿದ್ದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡು, ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಎಲ್ಲರೂ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಆರೋಪಿಗಳ ಜೊತೆಯಲ್ಲಿ ಮತ್ತಷ್ಟು ಮಂದಿ ಆಟೊ ಚಾಲಕನ ಮನೆಗೆ ನುಗ್ಗಿ ಗಲಾಟೆ ಮಾಡಿರುವ ಆರೋಪವಿದೆ. ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಘಟನೆಯ ವಿಡಿಯೊ ಚಿತ್ರೀಕರಿಸಿದ್ದಾರೆ. ಅದೇ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ವಿಡಿಯೊ ಆಧರಿಸಿ ಎಲ್ಲರ ಗುರುತು ಪತ್ತೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಹಲವು ದಿನಗಳ ಜಗಳ

‘ದೂರುದಾರ ಸುಕುಮಾರ್ ಅವರ ಮನೆಯ ಪಕ್ಕದಲ್ಲಿ, ಆರೋಪಿ ಸೈಯದ್ ಮೊಹಮ್ಮದ್ ತಾಹಾ ಮಾವ ವಾಸವಿದ್ದಾರೆ. ಆಟೊ ಚಾಲಕನಾಗಿದ್ದ ಮೊಹಮ್ಮದ್ ತಾಹಾ, ನಿತ್ಯವೂ ರಾತ್ರಿ ಮಾವನ ಮನೆ ಎದುರು ಆಟೊ ನಿಲ್ಲಿಸುತ್ತಿದ್ದ. ದೂರುದಾರ ಸುಕುಮಾರ್ ಸಹ ತಮ್ಮ ಮನೆ ಎದುರು ಆಟೊ ನಿಲ್ಲಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಆಟೊ ನಿಲ್ಲಿಸುವ ವಿಚಾರವಾಗಿ ಭಾನುವಾರ ರಾತ್ರಿ ಮೊಹಮ್ಮದ್ ತಾಹಾ ಹಾಗೂ ಸುಕುಮಾರ್ ನಡುವೆ ಜಗಳ ಶುರುವಾಗಿತ್ತು. ಸ್ಥಳದಿಂದ ಹೊರಟು ಹೋಗಿದ್ದ ಮೊಹಮ್ಮದ್ ತಾಹಾ, ತಂದೆ ಹಾಗೂ ಸ್ನೇಹಿತರನ್ನು ಕರೆತಂದು ಸುಕುಮಾರ್ ಅವರ ಮನೆಗೆ ನುಗ್ಗಿದ್ದ. ಸುಕುಮಾರ್ ಮೇಲೆ ಹಲ್ಲೆ ಮಾಡಿದ್ದ. ಪತ್ನಿ ಹಾಗೂ ಮಕ್ಕಳ ಮೇಲೂ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆಯೊಡ್ಡಿದ್ದ. ಮೊಬೈಲ್ ಹಾಗೂ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಆರೋಪವೂ ಇದೆ’ ಎಂದು ಪೊಲೀಸರು ತಿಳಿಸಿದರು.

‘ಮಾಹಿತಿ ಬರುತ್ತಿದ್ದಂತೆ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು. ಗಲಾಟೆ ಹೆಚ್ಚಾಗಿದ್ದರಿಂದ, ಮನೆ ಎದುರು ಜನರು ಸೇರಿದ್ದರು. ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಹೇಳಿದರು.

ಕೋಮು ಗಲಭೆಯೆಂದು ಸುಳ್ಳು ಸುದ್ದಿ

‘ಆಟೊ ನಿಲುಗಡೆ ವಿಚಾರವಾಗಿ ಅಕ್ಕ–ಪಕ್ಕದ ಮನೆಯವರ ನಡುವೆ ಗಲಾಟೆ ಆಗಿದೆ. ಆದರೆ, ಕೆಲವರು ಇದನ್ನು ಕೋಮು ಗಲಭೆ ಎಂಬುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಅಂಥ ಯಾವುದೇ ಸಂಗತಿ ತನಿಖೆಯಲ್ಲಿ ಕಂಡುಬಂದಿಲ್ಲ’ ಎಂದು ದಕ್ಷಿಣ ವಿಭಾಗದ ಡಿಸಿಪಿ (ಪ್ರಭಾರ) ಶಿವಪ್ರಕಾಶ್ ದೇವರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.