ಬೆಂಗಳೂರು: ಕುಂದಾಪ್ರ ಕನ್ನಡ ಪ್ರತಿಷ್ಠಾನದ ವತಿಯಿಂದ ‘ಕುಂದಾಪ್ರ ಕನ್ನಡ ಹಬ್ಬ’ ಜುಲೈ 26 ಮತ್ತು 27ರಂದು ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್ ಬಳಿ ಇರುವ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು ಮತ್ತು ಉಪಾಧ್ಯಕ್ಷ ನರಸಿಂಹ ಬೀಜಾಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇದು ಆರನೇ ಕುಂದಾಪ್ರ ಕನ್ನಡ ಹಬ್ಬವಾಗಿದ್ದು, ಶನಿವಾರ ಬೆಳಿಗ್ಗೆಯೇ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ 5ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಬ್ಬ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಲೋಕಾರ್ಪಣೆಗೊಳ್ಳಲಿದೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿಗಳು, ನಟ, ನಟಿಯರು ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
ಜುಲೈ 27ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉದ್ಯಮಿಗಳು, ಕಲಾವಿದರು ಭಾಗವಹಿಸಲಿದ್ದಾರೆ. ಎರಡೂ ದಿನ ಪ್ರವೇಶ ಉಚಿತವಾಗಿದೆ ಎಂದರು.
ಕುಂದಾಪುರ ಮೂಲದ ಸಾಧಕರಾದ ಮಣಿಪಾಲ ಗ್ರೂಪ್ ಆಫ್ ಹಾಸ್ಪಿಟಲ್ಸ್ ಅಧ್ಯಕ್ಷ ಡಾ.ಎಚ್. ಸುದರ್ಶನ ಬಲ್ಲಾಳ್ ಅವರಿಗೆ ಶನಿವಾರ ಹಾಗೂ ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಭಾನುವಾರ ‘ಊರ ಗೌರವ’ ವಿಶೇಷ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಎರಡು ದಿನಗಳಲ್ಲಿ400ಕ್ಕೂ ಹೆಚ್ಚು ಕಲಾವಿದರು ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಅಟ್ಟಣಿಗೆ ಆಟ ಎನ್ನುವ ವಿಶೇಷ ಯಕ್ಷಗಾನ ಪ್ರದರ್ಶನ ಇರಲಿದೆ. ಕುಂದಾಪುರದ ಅಪರೂಪದ ವಿಶೇಷದ ಖಾದ್ಯಗಳ ಆಹಾರ ಮೇಳ ಇರಲಿದ್ದು, ಮಾಂಸಾಹಾರ ಮತ್ತು ಸಸ್ಯಾಹಾರಗಳ 50ಕ್ಕೂ ಅಧಿಕ ಬಗೆಯ ತಿನಿಸುಗಳಿರಲಿವೆ. ಕುಂದಾಪುರದ್ದೇ ಆದ ವಿಶೇಷ ವಸ್ತುಗಳು ಸಿಗುವ ಕುಂದಾಪುರ ಸಂತೆ ನಡೆಯಲಿದೆ ಎಂದು ವಿವರಿಸಿದರು.
ಎರಡು ದಿನಗಳ ಈ ಸಮಾರಂಭದಲ್ಲಿ ನಟರಾದ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಪ್ರವೀರ್ ಶೆಟ್ಟಿ, ಶೈನ್ ಶೆಟ್ಟಿ, ಸಂಗೀತ ನಿರ್ದೇಶಕ ರವಿ ಬಸ್ರೂರು, ನಟಿ ರಕ್ಷಿತಾ ಪ್ರೇಮ್ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಎಚ್. ಅಮರನಾಥ್ ಶೆಟ್ಟಿ, ವಿಜಯ್ ಶೆಟ್ಟಿ, ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಏನೇನು ಇರಲಿವೆ?
ಜುಲೈ 26 ಶನಿವಾರ
ಸಾವ್ರ್ ಹಣ್ಣಿನ ವಸಂತ, ಹೌಂದರಾಯನ ವಾಲ್ಗ, ಕುಂದಾಪ್ರದಡುಗೆ: ವಿಶೇಷ ತಿಂಡಿ-ತಿನಿಸು, ಭಕ್ಷ್ಯ ಭೋಜನ ಒಳಗೊಂಡ ಆಹಾರ ಮೇಳ
ಮೂಕಜ್ಜಿಯ ಕನಸುಗಳು: ಪುಸ್ತಕ ಮೇಳ
ಸ್ವರ ಕುಂದಾಪ್ರ: ಸಂಗೀತ ಕಾರ್ಯಕ್ರಮ
ಪಟ್ಟಾಂಗ: ಕುಂದಾಪುರ ನೆಲಮೂಲದ ಆಚರಣೆ-ಆರಾಧನೆ, ಕಟ್ಟು-ಕಟ್ಟಳೆ ಕುರಿತ ಚರ್ಚೆ
ಬಾರ್ಕೂರಿನ್ ಹಡ್ಗ್: ವಿಶೇಷ ನೃತ್ಯರೂಪಕ
ನೂಪುರ ಸಂಚಾರ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರಸ್ತುತಿ ಪಡಿಸುವ ಸಾಂಸ್ಕೃತಿ ಕಾರ್ಯಕ್ರಮ
ಅಟ್ಟಣಿಗೆ ಆಟ: ಎರಡು ವೇದಿಕೆಯಲ್ಲಿ ನಡೆಯುವ ವಿಶೇಷ ಯಕ್ಷಗಾನ, ಪ್ರಸಂಗ-ದಕ್ಷಯಜ್ಱ
ವಿಶೇಷ ಅಭಿನಂದನೆ: ಆರೈಕೆ ನಿರಾಶ್ರಿತರ ಆಶ್ರಮ
ಜುಲೈ 27ರ ಭಾನುವಾರ
ಪಿಳ್ಳಂಗೋವಿಯ ಚೆಲುವ ಕೃಷ್ಣನಾ: ವಿದ್ಯಾಭೂಷಣರ ಗಾನಯಾನದ ಸುವರ್ಣ ಸಂಭ್ರಮ
ಬಾಲಗೋಪಾಲ: ಮಕ್ಕಳ ಮಹಾಸಂಗಮದ ಯಕ್ಷನೃತ್ಯ
ಹಂದಾಡಿ ಕ್ವಿಜ್: ಮನು ಹಂದಾಡಿ ನಡೆಸಿಕೊಡುವ ಕುಂದಾಪ್ರ ಕನ್ನಡದ ರಸಪ್ರಶ್ನೆ ಕಾರ್ಯಕ್ರಮ
ಚಂದಾಮುಡಿ: ಕುಂದಾಪ್ರದ ಸುಂದರ-ಸುಂದರಿಯರ ಫ್ಯಾಷನ್ ಶೋ
ಕಾಳಿಂಗ-ಕಾಳಿಂಗ: ಕಾಳಿಂಗ ನಾವಡ ಮತ್ತು ಪಿ.ಕಾಳಿಂಗರಾಯರ ಪದ-ಪದ್ಯಗಳ ಅನುರಣನ, ರಘು ದೀಕ್ಷಿತ್ ಲೈವ್ ಕನ್ಸರ್ಟ್
ವಿಶೇಷ ಅಭಿನಂದನೆ: ಕ್ಲೀನ್ ಕುಂದಾಪುರ, ಸೇವ್ ಅವರ್ ಓಷನ್.
ಎರಡೂ ದಿನ ಹೊರಾಂಗಣದಲ್ಲಿ ಹುಲಿ ಕುಣಿತ, ಕೊರಗರ ಡೋಲುವಾದನ, ಹೋಳಿ ಕುಣಿತ, ಬ್ಯಾಂಡ್ ಸೆಟ್, ಬಿಡಿ ಪಟಾಕಿ, ಕುಂದಾಪುರದ ವಿಶೇಷ ವಸ್ತುಗಳು ಸಿಗುವ ಕುಂದಾಪ್ರ ಸಂತೆ ಹಾಗೂ ಕುಂದಾಪುರದ ಡಿಜಿಟಲ್ ಟೂರ್ ‘ಇಲ್ಕಾಣಿ ಕುಂದಾಪ್ರ’ ಇರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.