ADVERTISEMENT

ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಪ್ರತಿಭಟನೆ; ವಶದಲ್ಲಿರುವಾಗಲೇ ಪ್ರತಿಭಟನಾ ಸಭೆ

ಪುರಭವನದ ಮುಂದೆ ಪ್ರತಿಭಟನೆ ನಡೆಸಿದವರನ್ನು ಆಡುಗೋಡಿಗೆ ಒಯ್ದಿದ್ದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 23:33 IST
Last Updated 12 ಫೆಬ್ರುವರಿ 2026, 23:33 IST
ಪ್ರತಿಭಟನಕಾರರನ್ನು ಕರೆದೊಯ್ಯಲು ಖಾಸಗಿ ಬಸ್‌ಗೆ ಹತ್ತಿಸಿದ ಪೊಲೀಸರು
ಪ್ರಜಾವಾಣಿ ಚಿತ್ರ: ಎಂ. ಎಸ್. ಮಂಜುನಾಥ್
ಪ್ರತಿಭಟನಕಾರರನ್ನು ಕರೆದೊಯ್ಯಲು ಖಾಸಗಿ ಬಸ್‌ಗೆ ಹತ್ತಿಸಿದ ಪೊಲೀಸರು ಪ್ರಜಾವಾಣಿ ಚಿತ್ರ: ಎಂ. ಎಸ್. ಮಂಜುನಾಥ್    

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ, ನರೇಗಾ ಉಳಿಸಲು ಆಗ್ರಹಿಸಿ ನಗರದ ಪುರಭವನದ ಬಳಿ ಪ್ರತಿಭಟನೆ ನಡೆಸಿದವರನ್ನು ಪೊಲೀಸರು ವಶಕ್ಕೆ ಪಡೆದು ಆಡುಗೋಡಿಯಲ್ಲಿರುವ ಕವಾಯತು ಮೈದಾನಕ್ಕೆ ಕರೆದೊಯ್ದರು. ಕಾರ್ಮಿಕ ನಾಯಕರು ಅಲ್ಲಿಯೇ ಸಭೆ ನಡೆಸಿದರು.

ಮುಖಂಡರ ಭಾಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವುದನ್ನು ಗಮನಿಸಿದ ಪೊಲೀಸರು ಸಭೆಯನ್ನು ಮೊಟಕುಗೊಳಿಸಿದರು. 

ಇಂಟಕ್‌ನ ಲಕ್ಷ್ಮಿ ವೆಂಕಟೇಶ್, ಶಾಮಣ್ಣ ರೆಡ್ಡಿ, ಎಐಟಿಯುಸಿಯ ವಿಜಯ ಭಾಸ್ಕರ್, ಜಯಮ್ಮ, ಅಮ್ಜದ್, ಸಿಐಟಿಯುಸಿಯ ವರಲಕ್ಷ್ಮಿ, ಮೀನಾಕ್ಷಿ ಸುಂದರಂ, ಗೋಪಾಲಗೌಡ, ಎಚ್‌ಎಂಎಸ್‌ನ ಆರ್.ವಿ. ಹರೀಶ್, ನಾಗನಾಥ್, ಎಐಯುಟಿಯುಸಿಯ ಕೆ. ಸೋಮಶೇಖರ್, ನಾಗಲಕ್ಷ್ಮಿ, ಕೆ.ವಿ. ಭಟ್, ಟಿಯುಸಿಸಿಯ ಜಿ.ಆರ್. ಶಿವಶಂಕರ್, ಎಐಸಿಸಿಟಿಯುನ  ಕ್ಲಿಪ್ಪನ್ ರೋಜಾರಿಯೋ, ಅಪ್ಪಣ್ಣ, ಎಚ್‌ಎಂಕೆಪಿಯ ಕಾಳಪ್ಪ, ಕೆಡಬ್ಲ್ಯುಯುನ ಈ.ಕೆ.ಎನ್. ರಾಜನ್, ಮಿಲ್ಕಿಯೋರ್, ಕೆಐಇಇಎಫ್‌ನ ಗಂಗಣ್ಣ, ರವಿ, ಎನ್‌ಸಿಎಲ್‌ನ ಲೀಲಾವತಿ, ರಫೀಕ್ ಅವರನ್ನು ಆಡುಗೋಡಿಗೆ ಕರೆದೊಯ್ಯಲಾಗಿತ್ತು.

ADVERTISEMENT

ರೈತ ಸಂಘಟನೆಯ ಬಡಗಲಪುರ ನಾಗೇಂದ್ರ, ಜನಶಕ್ತಿಯ ನೂರ್ ಶ್ರೀಧರ್, ರೈತ ಮುಖಂಡರಾದ ಯಶವಂತ್ ಸಹಿತ ಅನೇಕರನ್ನು ಕೋರಮಂಗಲದಲ್ಲಿರುವ ಸಿ.ಆರ್ ಮೈದಾನಕ್ಕೆ ಕರೆದೊಯ್ಯಲಾಯಿತು.

ಸಾಕಾಗದ ಬಸ್‌: ಮುಷ್ಕರವನ್ನು ಬೆಂಬಲಿಸಿ ಭಾರಿ ಸಂಖ್ಯೆಯಲ್ಲಿ ಕಾರ್ಮಿಕರು ಜಮಾವಣೆಗೊಂಡಿದ್ದರಿಂದ ಅವರನ್ನು ಒಯ್ಯಲು ಸಾಕಷ್ಟು ಬಸ್‌ಗಳು ಇಲ್ಲದೇ  ಪೊಲೀಸರು ಪರದಾಡುವಂತಾಯಿತು. ಪ್ರತಿಭಟನಕಾರರನ್ನು ಒಯ್ಯಲೆಂದು ಇದ್ದ ಬಿಎಂಟಿಸಿ ಬಸ್‌ಗಳು ತುಂಬಿ ಹೋದರೂ ಮತ್ತಷ್ಟು ಕಾರ್ಮಿಕರಿದ್ದರು. ಅದೇ ಸಮಯದಲ್ಲಿ ‘ಇನ್‌ಫಾಂಟ್‌’ ಎಂಬ ಖಾಸಗಿ ಕಂಪನಿಯ ಖಾಲಿ ಬಸ್‌ ಒಂದು ಪುರಭವನದ ಮುಂದೆ ಸಾಗುತ್ತಿರುವುದನ್ನು ಕಂಡು ಪೊಲೀಸರು ನಿಲ್ಲಿಸಿದರು. ಪ್ರತಿಭಟನಕಾರರನ್ನು ಕರೆದೊಯ್ಯುವಂತೆ ತಿಳಿಸಿದರು. ಆದರೆ, ಕಂಪನಿಯ ಅನುಮತಿ ಇಲ್ಲದೇ ಬೇರೆಯವರನ್ನು ಕರೆದೊಯ್ಯಲು ಸಾಧ್ಯವಿಲ್ಲ ಎಂದು ಚಾಲಕ ನಿರಾಕರಿಸಿದರು. ಆ ನಂತರ ಕಂಪನಿಯವರೊಂದಿಗೆ ಮಾತನಾಡಿ ಆ ಬಸ್‌ ಬಳಸಿಕೊಳ್ಳಲಾಯಿತು.

‘36 ‘ಎ’ ಮಾರ್ಗದ ಬಿಎಂಟಿಸಿ ಬಸ್‌ ಒಂದು ಐದಾರು ಪ್ರಯಾಣಿಕರೊಂದಿಗೆ ಸಾಗುತ್ತಿತ್ತು. ಆ ಬಸ್‌ ಅನ್ನು ನಿಲ್ಲಿಸಿದ ಪೊಲಿಸರು ಪ್ರಯಾಣಿಕರನ್ನು ಇಳಿಸಿ, ಪ್ರತಿಭಟನಕಾರರನ್ನು ಅದರಲ್ಲಿ ಕಳುಹಿಸಿದರು. ಆ ನಂತರ ಆ ಪ್ರಯಾಣಿಕರನ್ನು ಬೇರೆ ಬಸ್‌ಗಳಿಗೆ ಹತ್ತಿಸಿದರು.

ವಿವಿಧೆಡೆ ಪ್ರತಿಭಟನೆ: ಜಿಗಣಿ, ಬೊಮ್ಮಸಂದ್ರ, ಹೊಸಕೋಟೆ, ದೊಡ್ಡಬಳ್ಳಾಪುರ, ವೈಟ್‌ಫೀಲ್ಡ್, ನೆಲಮಂಗಲ, ದಾಬಸ್‌ಪೇಟೆ ಮುಂತಾದ ಕೈಗಾರಿಕಾ ಪ್ರದೇಶಗಳಲ್ಲಿ ಭಾರಿ ಸಂಖ್ಯೆಯಲ್ಲಿ ಕಾರ್ಮಿಕರು ಜಮಾಯಿಸಿ ಮೆರವಣಿಗೆ ನಡೆಸಿದರು. ಬೆಂಗಳೂರಿನ ಹಲವು ಕಾರ್ಖಾನೆಗಳು ಸ್ಥಗಿತಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.