ಬೆಂಗಳೂರು: ‘ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು ತಮ್ಮ ವ್ಯಕ್ತಿತ್ವದ ಘನತೆ ಹೆಚ್ಚಿಸಿಕೊಂಡಿದ್ದಾರೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ‘ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನದಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಿಗೆ ಶನಿವಾರ ಬಹುಮಾನ ವಿತರಿಸಿ ಅವರು ಮಾತನಾಡಿದರು.
‘ಗಿಡ-ಮರಗಳು, ಉದ್ಯಾನಗಳನ್ನು ಪೋಷಿಸುವ ಸ್ಪರ್ಧೆಗಳಲ್ಲಿ ಇಂತಹ ಸ್ಪರ್ಧೆಗಳಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕೃತಿಯ ಉಳಿವಿನ ಕುರಿತಾದ ಕಾಳಜಿಯನ್ನು ಪರಿಚಯಿಸಬೇಕು. ಲಾಲ್‌ಬಾಗ್‌ನಲ್ಲಿ ಆಯೋಜಿಸುವ ಫಲಪುಷ್ಪ ಪ್ರದರ್ಶನದಲ್ಲಿ ಚರಿತ್ರೆಯನ್ನು ಪುಷ್ಪಗಳಲ್ಲಿ ಮರು ಸೃಷ್ಟಿಸಲಾಗುತ್ತದೆ’ ಎಂದರು.
ಗಾಜಿನ ಮನೆಯ ಪ್ರದರ್ಶಿಕೆಗಳು, ತೋಟಗಳ ಸ್ಪರ್ಧೆಗಳು, ಇಕೆಬಾನ, ಪುಷ್ಪ ಭಾರತಿ, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಒಣ ಹೂವಿನ ಜೋಡಣೆ, ಥಾಯ್‌ಆರ್ಟ್, ಜಾನೂರ್, ಬೋನ್ಸಾಯ್ ಗಿಡಗಳ ಪ್ರದರ್ಶನ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರು ಬಹುಮಾನ ಪಡೆದರು.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್, ಇಲಾಖೆಯ ಹೆಚ್ಚುವರಿಗೆ ನಿರ್ದೇಶಕಿ ನಂದಾ, ಲಾಲ್‌ಬಾಗ್ ಉಪನಿರ್ದೇಶಕ ಎಚ್.ಟಿ. ಬಾಲಕೃಷ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.