ಬೆಂಗಳೂರು: ‘ಲಾಲ್‌ಬಾಗ್‌ನಲ್ಲಿ ವಾಯು ವಿಹಾರ ಮಾಡುತ್ತಿದ್ದ ವೃದ್ಧರೊಬ್ಬರ ಮೇಲೆ ನಾಯಿ ದಾಳಿ ಮಾಡಿದೆ. ಎಡಗೈ ತೋಳಿನ ಭಾಗಕ್ಕೆ ಕಚ್ಚಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ಲಾಲ್‌ಬಾಗ್‌ನ ವಾಯು ವಿಹಾರಿಗಳು ತಿಳಿಸಿದ್ದಾರೆ.
‘ನಾಯಿ ದಾಳಿಗೊಳಗಾದವರನ್ನು ಬನಶಂಕರಿ ಒಂದನೇ ಹಂತದ ನಿವಾಸಿ ಹೃಷಿಕೇಶ್ (72) ಎಂದು ಗುರುತಿಸಲಾಗಿದೆ. ನಾಯಿ ದಾಳಿ ಮಾಡಿದ ಕೂಡಲೇ ಲಾಲ್‌ಬಾಗ್‌ನಲ್ಲಿರುವ ಕ್ಲಿನಿಕ್‌ನಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಲಾಲ್‌ಬಾಗ್ ಹತ್ತಿರದಲ್ಲಿರುವ ಸೌತ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪ್ರತ್ಯಕ್ಷದರ್ಶಿ ಶಿವಕುಮಾರ್ ಮಾಹಿತಿ ನೀಡಿದರು.
‘ಲಾಲ್‌ಬಾಗ್‌ನ ಉಪನಿರ್ದೇಶಕರ ಕಚೇರಿ ಬಳಿ ಈ ಘಟನೆ ನಡೆದಿದೆ. ಲಾಲ್‌ಬಾಗ್‌ನ ಆವರಣದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ನಿತ್ಯ ವಾಯುವಿಹಾರಿಗಳ ಮೇಲೆ ದಾಳಿ ಮಾಡುತ್ತಿವೆ. ಇಲ್ಲಿ ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ನಾಯಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ತೋಟಗಾರಿಕೆ ಇಲಾಖೆಗೆ ಮನವಿ ಮಾಡಿದರೂ, ಸ್ಪಂದಿಸುತ್ತಿಲ್ಲ’ ಎಂದು ವಾಯು ವಿಹಾರಿಗಳು ದೂರಿದರು.
‘ವೃದ್ಧರೊಬ್ಬರ ಮೇಲೆ ದಾಳಿ ಮಾಡಿದ ನಾಯಿಯನ್ನು ಬಿಬಿಎಂಪಿಯ ಪಶು ಸಂಗೋಪನೆ ವಿಭಾಗದ ಸಿಬ್ಬಂದಿ ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಮುಂದೆ ಇಂತಹ ಘಟನೆಗಳು ಆಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ನಾಯಿ ಮತ್ತು ಹಾವು ಕಡಿತ, ಜೇನು ನೋಣಗಳ ದಾಳಿಗೆ ಒಳಗಾದವರಿಗೆ ಇಲ್ಲಿನ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡುವ ಸೌಲಭ್ಯವಿದೆ’ ಎಂದು ಲಾಲ್‌ಬಾಗ್‌ನ ಉಪನಿರ್ದೇಶಕ ಬಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.