ADVERTISEMENT

Lalbagh | ಫಲಪುಷ್ಪ ಪ್ರದರ್ಶನವೋ, ಕಿರು ಮಾರುಕಟ್ಟೆಯೋ!

ಖಲೀಲಅಹ್ಮದ ಶೇಖ
Published 12 ಆಗಸ್ಟ್ 2025, 22:45 IST
Last Updated 12 ಆಗಸ್ಟ್ 2025, 22:45 IST
<div class="paragraphs"><p>ಲಾಲ್‌ಬಾಗ್‌ನ ಗಾಜಿನ ಮನೆಯ ಹಿಂಭಾಗದಲ್ಲಿ ಕಿರು ಮಾರುಕಟ್ಟೆಯಲ್ಲಿ ಸಾರ್ವಜನಿಕರು ಉತ್ಪನ್ನಗಳನ್ನು ಖರೀದಿಸಿದರು</p><p></p></div>

ಲಾಲ್‌ಬಾಗ್‌ನ ಗಾಜಿನ ಮನೆಯ ಹಿಂಭಾಗದಲ್ಲಿ ಕಿರು ಮಾರುಕಟ್ಟೆಯಲ್ಲಿ ಸಾರ್ವಜನಿಕರು ಉತ್ಪನ್ನಗಳನ್ನು ಖರೀದಿಸಿದರು

   

ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ADVERTISEMENT

ಬೆಂಗಳೂರು: ಆಲಂಕಾರಿಕ ವಸ್ತುಗಳು, ಅಡುಗೆಮನೆ ಸಾಮಗ್ರಿಗಳು, ಸಿದ್ಧ ಉಡುಪುಗಳು, ತಿಂಡಿ–ತಿನಿಸು, ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳ ಮಳಿಗೆಗಳಿಗೆ ಲಗ್ಗೆ ಇಟ್ಟಿದ್ದ ಸಾರ್ವಜನಿರು, ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದರು. ಇದು ಕಿರು ಮಾರುಕಟ್ಟೆಯ ಪ್ರಾಂಗಣದಂತೆ ಭಾಸವಾಯಿತು.

ಲಾಲ್‌ಬಾಗ್‌ ಸಸ್ಯೋದ್ಯಾನದಲ್ಲಿ ಕಂಡು ಬರುವ ದೃಶ್ಯಗಳು ಇವು.

ತೋಟಗಾರಿಕೆ ಇಲಾಖೆಯು ಸ್ವಾತಂತ್ರ್ಯೋತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಿದೆ. ಇದಕ್ಕಾಗಿ ಗಾಜಿನ ಮನೆಯ ಹಿಂಭಾಗದಲ್ಲಿ 148 ತಾತ್ಕಾಲಿಕ ವಾಣಿಜ್ಯ ಮಳಿಗೆಗಗಳನ್ನು ತೆರೆಯಲು ಅವಕಾಶ ನೀಡಿದೆ. ಉದ್ಯಾನದ ಆವರಣದಲ್ಲಿರುವ ಅಧಿಕೃತ ಮಾರಾಟ ಮಳಿಗೆಗಳಲ್ಲಿ ಆಟಿಕೆಗಳು, ಗೃಹ ಉಪಯೋಗಿ, ಕರಕುಶಲ ವಸ್ತುಗಳು, ಅಡುಗೆ ಪದಾರ್ಥಗಳು, ಬ್ಯಾಗ್, ಪರ್ಸ್, ಉಪ್ಪಿನಕಾಯಿ, ಹಪ್ಪಳ, ಒಣ್ಣ ಹಣ್ಣುಗಳು, ಐಸ್‌ ಕ್ರೀಮ್, ಮಸಾಲೆ ಪದಾರ್ಥಗಳು, ಅಗರಬತ್ತಿ, ಫೋಟೊ ಫ್ರೇಮ್‌, ಕೃತಕ ಹೂವುಗಳು ಸೇರಿದಂತೆ ವಿವಿಧ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದರು. ಬಹುತೇಕ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಚೀಲಗಳು ಕಂಡು ಬಂದವು. ಇದರಿಂದ ಉದ್ಯಾನದ ಸಸ್ಯ ಸಂಪತ್ತಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂಬುದು ಸಾರ್ವಜನಿಕರ ಆರೋಪ.

ತೋಟಗಾರಿಕೆಯ ಬಗ್ಗೆ ಮಾಹಿತಿ ನೀಡುವ ಮಳಿಗೆಗಳಿಗೆ ಇಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂಬುದು ತೋಟಗಾರಿಕೆ ಇಲಾಖೆಯ ವಾದ. ಆದರೆ ಇಲ್ಲಿ ಅಂತಹ ಮಳಿಗೆಗಳ ಸಂಖ್ಯೆ ಬಹಳ ಕಡಿಮೆ ಇವೆ ಎಂಬುದು ಪರಿಸರ ಪ್ರೇಮಿಗಳ ದೂರು.  

‘ಲಾಲ್‌ಬಾಗ್‌ನಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯುವ ಹಾಗೂ ಪ್ಲಾಸ್ಟಿಕ್‌ ಬಳಕೆ ಮಾಡುವ ಮಳಿಗೆಯನ್ನು ತೆರವುಗೊಳಿಸಲಾಗುತ್ತದೆ. ಈ ಬಾರಿ ಇಂತಹ ಮೂರು ಮಳಿಗೆಗಳನ್ನು ತೆರವುಗೊಳಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.  

ಲಾಲ್‌ಬಾಗ್‌ನ ಗಾಜಿನ ಮನೆಯ ಹಿಂಭಾಗದಲ್ಲಿ ಕಿರು ಮಾರುಕಟ್ಟೆಯಲ್ಲಿ ಸಾರ್ವಜನಿಕರು ಉತ್ಪನ್ನಗಳನ್ನು ಖರೀದಿಸಿದರು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

‘ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ, ಮಾವು ಹಾಗೂ ಹಲಸಿನ ಮೇಳದ ಸಂದರ್ಭದಲ್ಲಿ ಮಾತ್ರ ತಾತ್ಕಾಲಿಕ ವಾಣಿಜ್ಯ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಪ್ಲಾಸ್ಟಿಕ್‌ ಸೇರಿದಂತೆ ಪರಿಸರಕ್ಕೆ ಹಾನಿಯಾಗುವ ಯಾವುದೇ ರೀತಿಯ ವಸ್ತುಗಳನ್ನು ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳಿಗೆ ತೆರೆಯಲು ಅರ್ಜಿ ಸಲ್ಲಿಸುವವರಿಗೆ ಮೊದಲೇ ಈ ಬಗ್ಗೆ ಸೂಚನೆ ನೀಡಲಾಗುತ್ತದೆ. ಇದಕ್ಕಾಗಿಯೇ ವ್ಯಾಪಾರಸ್ಥರಿಂದ ಮುಂಗಡವಾಗಿ ₹5 ಸಾವಿರ ಪಡೆದುಕೊಳ್ಳಲಾಗುತ್ತದೆ. ಪ್ಲಾಸ್ಟಿಕ್‌ ಬಳಕೆ ಮಾಡಿದರೆ, ಆ ಹಣವನ್ನು ಮುಟ್ಟುಗೋಲು ಹಾಕಿಕೊಂಡು, ಮಳಿಗೆಯನ್ನು ತೆರವುಗೊಳಿಸಲಾಗುತ್ತದೆ’ ಎಂದರು.

‘ಈ ಬಾರಿಯ ಫಲಪುಷ್ಪ ಪ್ರದರ್ಶನವು 12 ದಿನ ನಡೆಯುತ್ತದೆ. ಇದಕ್ಕಾಗಿಯೇ ಲಾಲ್‌ಬಾಗ್‌ನ ಆವರಣದಲ್ಲಿ ವಾಣಿಜ್ಯ ಮಳಿಗೆಗಳನ್ನು ತೆರೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಇದಕ್ಕಾಗಿ ಒಂದು ಸಮಿತಿಯನ್ನು ರಚಿಸಿ, ತೋಟಗಾರಿಕೆ ಇಲಾಖೆಯ ಪರಿಕರಗಳು, ಈ ಬಗ್ಗೆ ಮಾಹಿತಿ ನೀಡುವ ಹಾಗೂ ಪರಿಸರಕ್ಕೆ ಪೂರಕವಾಗಿರುವ 148 ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿತ್ತು. ಮಳಿಗೆಗಳನ್ನು ತೆರೆಯಲು ಲಾಲ್‌ಬಾಗ್‌ನಲ್ಲಿ ಪ್ರತ್ಯೇಕ ಪ್ರಾಂಗಣ ಇದೆ. ಅಲ್ಲಿಯೇ ವ್ಯಾಪಾರ–ವಹಿವಾಟು ಮಾಡಲಾಗುತ್ತಿದೆ. ಇದರಿಂದ ಉದ್ಯಾನದ ಸಸ್ಯ ಸಂಪತ್ತಿಗೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ’ ಎಂದು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.