
ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದ ಸಿದ್ಧತೆಯಲ್ಲಿ ತೊಡಗಿರುವ ಕಾರ್ಮಿಕರು
ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.
ಬೆಂಗಳೂರು: ‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬದುಕು–ಬರಹ ವಿಷಯ ಆಧಾರಿತ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವು ಲಾಲ್‌ಬಾಗ್‌ನಲ್ಲಿ ಜ.14ರಿಂದ 26ರವರೆಗೆ ನಡೆಯಲಿದೆ’ ಎಂದು ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಆರ್. ಗಿರೀಶ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೇಜಸ್ವಿ–ವಿಸ್ಮಯ’ ಪರಿಕಲ್ಪನೆಯಡಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ತೇಜಸ್ವಿ ಅವರಿಗೆ ಪುಷ್ಪ ಗೌರವ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ತೇಜಸ್ವಿ ಅವರ ಜೀವನ, ಸಾಧನೆ, ಪ್ರಕೃತಿ ಜೊತೆಗಿನ ಒಡನಾಟವನ್ನು ಪುಷ್ಪಗಳಲ್ಲಿ ಅನಾವರಣಗೊಳಿಸಲಾಗುತ್ತಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು.
‘ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ 219ನೇ ಫಲಪುಷ್ಪ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ (ಜನವರಿ 14) ಸಂಜೆ 4ಕ್ಕೆ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭಾಗವಹಿಸಲಿದ್ದು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ. ಗರುಡಾಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.
‘ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ದಟ್ಟ ಕಾಡಿನ ಮಡಿಲಿನಲ್ಲಿರುವ 1,800 ಚದರ ಅಡಿಯಲ್ಲಿ ಬೃಹತ್ ಬೆಟ್ಟ, ಜಲಪಾತದ ಮಾದರಿ ನಿರ್ಮಿಸಲಾಗುತ್ತಿದೆ. ಇದರ ಮುಂಭಾಗದಲ್ಲಿಯೇ ತೇಜಸ್ವಿಯವರ ನಿರುತ್ತರ ಮನೆಯ ಪುಷ್ಪ ಮಾದರಿ, ಅದರ ಮುಂದೆ ನಾಲ್ಕು ಅಡಿ ಎತ್ತರದ ತೇಜಸ್ವಿ–ರಾಜೇಶ್ವರಿ ಅವರ ಪ್ರತಿಮೆಗಳು, ಸ್ಕೂಟರ್ ಮತ್ತು ಕರ್ವಾಲೊ ಕಾದಂಬರಿಯ ಪಾತ್ರವಾದ ಕಿವಿ ನಾಯಿ, ಕರಿಯಪ್ಪ, ಮಂದಣ್ಣ, ತೇಜಸ್ವಿ ಅವರ ಆಸಕ್ತಿಯನ್ನು ನೆನಪಿಸುವ ಹಾರುವ ಓತಿ, ಮಿಡತೆ, ಜೇನುಹುಳು ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳು ಇರಲಿವೆ’ ಎಂದು ವಿವರಿಸಿದರು.
‘16 ಅಡಿ ಉದ್ದ, 20 ಅಡಿ ಅಗಲ ಹಾಗೂ 10 ಅಡಿ ಎತ್ತರದ ನಿರುತ್ತರ ಮನೆ ನಿರ್ಮಿಸಲಾಗಿದ್ದು, ಇದಕ್ಕೆ 1.8 ಲಕ್ಷ ಗುಲಾಬಿ ಹಾಗೂ ಸೇವಂತಿಗೆ ಹೂಗಳನ್ನು ಬಳಸಿಕೊಂಡು ಈ ಪರಿಕಲ್ಪನೆ ಸಿದ್ಧಪಡಿಸಲಾಗುತ್ತಿದೆ. ತೇಜಸ್ವಿ ಪ್ರತಿಷ್ಠಾನದ ಕಟ್ಟಡದ ಪ್ರತಿರೂಪಕ್ಕೆ 1 ಲಕ್ಷ ಪುಷ್ಪಗಳನ್ನು ಬಳಸಲಾಗುತ್ತದೆ. ಪುಷ್ಪಗಳಲ್ಲಿ ಅರಳಿರುವ ಜೇನುಹುಳು, ಬಣ್ಣದ ಚಿಟ್ಟೆಗಳು, ಕಪ್ಪೆ, ಜೀರುಂಡೆ ಮತ್ತು ಬಸವನ ಹುಳುಗಳ ಪರಿಕಲ್ಪನೆಗಳಿಗೆ 25 ಸಾವಿರ ವಿವಿಧ ವರ್ಣದ ಹೂಗಳನ್ನು ಬಳಸಲಾಗುತ್ತದೆ’ ಎಂದರು.
‘ಕುವೆಂಪು–ಹೇಮಾವತಿ, ಶಿವರಾಮ ಕಾರಂತ, ರಾಮಮನೋಹರ ಲೋಹಿಯಾ ಮತ್ತು ರಾಜೇಶ್ವರಿ ತೇಜಸ್ವಿಯರ ಪ್ರತಿಮೆಗಳು ರಾರಾಜಿಸಲಿವೆ. ಗಾಜಿನ ಮನೆಯ ಬಲಬದಿಯಲ್ಲಿ ತೇಜಸ್ವಿಯವರ ವ್ಯಂಗ್ಯಚಿತ್ರ, ಪ್ರತಿಮೆಗಳು ಹಾಗೂ ಅವರ ಪುಸ್ತಕದ ಪಾತ್ರಗಳು ಇರಲಿವೆ. ಎಡಬದಿಯಲ್ಲಿ ಮಂತ್ರ ಮಾಂಗಲ್ಯ ಪರಿಕಲ್ಪನೆಯ ವರ್ಟಿಕಲ್ ಗಾರ್ಡನ್ ನಿರ್ಮಿಸಲಾಗುತ್ತಿದೆ’ ಎಂದು ತಿಳಿಸಿದರು.
ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದ ಸಿದ್ಧತೆಯಲ್ಲಿ ತೊಡಗಿರುವ ಕಾರ್ಮಿಕರು
ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕಾಗಿ ಹೂವಿನ ಕುಂಡಗಳನ್ನು ಜೋಡಿಸಿದ ಕಾರ್ಮಿಕರು
ಪ್ರವೇಶ ಶುಲ್ಕ
ಲಾಲ್‌ಬಾಗ್‌ನ ಎಲ್ಲ ಪ್ರವೇಶ ದ್ವಾರಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳ ವ್ಯವಸ್ಥೆ ಮಾಡಲಾಗಿದೆ. https:/hasiru.karnataka.gov.in/flowershow/login.aspx ಕೊಂಡಿ ಬಳಸಿ ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು.
ವಯಸ್ಕರಿಗೆ ₹ 80
ರಜಾ ದಿನಗಳಲ್ಲಿ ₹ 100
ಮಕ್ಕಳಿಗೆ ₹ 30
ಸಮವಸ್ತ್ರ ಧರಿಸಿ ಬರುವ ಶಾಲಾ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ
ಪ್ರದರ್ಶನದ ಸಮಯ: ಬೆಳಿಗ್ಗೆ 6ರಿಂದ ಸಂಜೆ 7ರವರೆಗೆ
ಅಂಕಿ–ಅಂಶಗಳು
₹3.2 - ಕೋಟಿಫಲಪುಷ್ಪ ಪ್ರದರ್ಶನದ ಒಟ್ಟು ವೆಚ್ಚ
10 ಲಕ್ಷ - ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುವವರ ಅಂದಾಜು ಸಂಖ್ಯೆ
136 - ಉದ್ಯಾನದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು
35 ಲಕ್ಷಕ್ಕೂ ಹೆಚ್ಚು - ಅಂದಾಜು ಬಳಕೆಯಾಗುವ ಹೂ ಕುಂಡಗಳು ಪ್ರತ್ಯೇಕಿಸಿದ ಹೂಗಳ ಸಂಖ್ಯೆ
ವಾಹನ ನಿಲುಗಡೆ ಎಲ್ಲಿ?
ಹಾಪ್‌ಕಾಮ್ಸ್ ಆವರಣ ಮತ್ತು ಜೆ.ಸಿ. ರಸ್ತೆಯಲ್ಲಿರುವ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣ
ಶಾಂತಿನಗರ ಬಸ್ ನಿಲ್ದಾಣದ ಬಹುಮಹಡಿ ವಾಹನ ನಿಲ್ದಾಣ
ಅಲ್ ಅಮೀನ್ ಕಾಲೇಜು ಮೈದಾನ
ನಾಟಕ ಪ್ರದರ್ಶನ ಉಪನ್ಯಾಸ 15ರಿಂದ
ಲಾಲ್‌ಬಾಗ್‌ನ ಹುಲ್ಲುಹಾಸು ಪ್ರದೇಶದಲ್ಲಿ ಜ.15ರಿಂದ 26ರವರೆಗೆ ಪ್ರತಿದಿನ ಸಂಜೆ 5 ರಿಂದ 7 ಗಂಟೆವರೆಗೆ ನಾಟಕ ಪ್ರದರ್ಶನ ಹಾಗೂ ಉಪನ್ಯಾಸ ಕಾರ್ಯಕ್ರಮಗಳು ಜರುಗಲಿವೆ. ಜ.15ರಂದು ತೇಜಸ್ವಿಯವರ ಕುಟುಂಬದ ಸದಸ್ಯರಾದ ತಾರಿಣಿ ಚಿದಾನಂದಗೌಡ ಚಿದಾನಂದಗೌಡ ಸುಸ್ಮಿತಾ ಈಶಾನ್ಯೆ ಅವರೊಂದಿಗೆ ಸಂವಾದ 16ರಂದು ನನ್ನ ತೇಜಸ್ವಿ ನಾಟಕ ಪ್ರದರ್ಶನ 17ರಂದು ತೇಜಸ್ವಿ ಸಹಜ ಕೃಷಿ ಚಿಂತನೆಗಳ ಬಗ್ಗೆ ಉಪನ್ಯಾಸ 18ರಂದು ಕರ್ವಾಲೊ ನಾಟಕ ಪ್ರದರ್ಶನ 19ರಂದು ಚಲನಚಿತ್ರ ರಂಗಭೂಮಿ ಪ್ರತಿಭೆಗಳೊಂದಿಗೆ ಸಂವಾದ 20ರಂದು ಕೃಷ್ಣೇಗೌಡನ ಆನೆ ನಾಟಕ ಪ್ರದರ್ಶನ 21ರಂದು ತೇಜಸ್ವಿ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ 22ರಂದು ಜುಗಾರಿ ಕ್ರಾಸ್ ನಾಟಕ ಪ್ರದರ್ಶನ 23ರಂದು ತೇಜಸ್ವಿ ವಿಶ್ವರೂಪ ದರ್ಶನ 24ರಂದು ಯಮಳ ಪ್ರಶ್ನೆ ನಾಟಕ ಪ್ರದರ್ಶನ 25ರಂದು ತೇಜಸ್ವಿ ಆಪ್ತರೊಂದಿಗೆ ಸಂವಾದ 26ರಂದು ನಾಟಕ ಪ್ರದರ್ಶನ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.