ADVERTISEMENT

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ತೇಜಸ್ವಿ ವಿಸ್ಮಯ ಲೋಕ ಅನಾವರಣ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 0:56 IST
Last Updated 15 ಜನವರಿ 2026, 0:56 IST
ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಕೆ.ಪಿ. ಪೂರ್ಣತೇಜಸ್ವಿ ಅವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ: ಪುಷ್ಕರ್‌ ವಿ. 
ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಕೆ.ಪಿ. ಪೂರ್ಣತೇಜಸ್ವಿ ಅವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ: ಪುಷ್ಕರ್‌ ವಿ.    

ಬೆಂಗಳೂರು: ‘ಸಸ್ಯಕಾಶಿ’ ಲಾಲ್‌ಬಾಗ್‌ನ ಗಾಜಿನ ಮನೆಯೊಳಗೆ ಬಣ್ಣ ಬಣ್ಣದ ಹೂವುಗಳ ಮಧ್ಯದಲ್ಲಿ ತಲೆ ಎತ್ತಿರುವ  ಬೃಹತ್ ಬೆಟ್ಟ, ಅದರ ಮೇಲೆ ತೇಜಸ್ವಿ ಅವರ ಪುತ್ಥಳಿ, ಧುಮ್ಮಿಕ್ಕುತ್ತಿರುವ ಕೃತಕ ಜಲಪಾತ, ಪುಷ್ಪಗಳಲ್ಲಿ ಅರಳಿರುವ ‘ನಿರುತ್ತರ’ದ ಮನೆ, ಅದರ ಮುಂಭಾಗದಲ್ಲಿ ತೇಜಸ್ವಿ ಮತ್ತು ರಾಜೇಶ್ವರಿ ದಂಪತಿ ಕುಳಿತಿರುವ ಪ್ರತಿಮೆಗಳು ನೋಡಗರ ಕಣ್ಮನ ಸೆಳೆಯುತ್ತಿವೆ. 

ತೋಟಗಾರಿಕೆ ಇಲಾಖೆಯಿಂದ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ‘ತೇಜಸ್ವಿ ವಿಸ್ಮಯ’ ವಿಷಯ ಆಧಾರಿತ 219ನೇ ಫಲಪುಷ್ಪ ಪ್ರದರ್ಶನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಬುಧವಾರ ಚಾಲನೆ ನೀಡಿದರು. ಪ್ರದರ್ಶನವು ಜ.26ರವರೆಗೆ ನಡೆಯಲಿದೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು–ಬರಹವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ತೇಜಸ್ವಿ ಅವರ ಅಭಿವ್ಯಕ್ತಿಯ ಪರಿಸರದ ಕಾಡು, ಹೊಳೆ, ಪ್ರಾಣಿ–ಪಕ್ಷಿ–ಕೀಟದ ಮಾದರಿಗಳು ಗಮನ ಸೆಳೆಯುತ್ತಿವೆ. ಗಾಜಿನ ಮನೆಯ ಹಿಂಭಾಗದಲ್ಲಿ ಕೃತಕ ಕಾಡಿನ ಮಧ್ಯದಲ್ಲಿ ಕರ್ವಾಲೊ ಕಾದಂಬರಿ ಪಾತ್ರಗಳಾದ ‘ಕಿವಿ’ ನಾಯಿ, ಕರಿಯಪ್ಪ, ಮಂದಣ್ಣ, ಹಾರುವ ಓತಿ, ಮಿಡತೆ, ಜೇನುಹುಳುಗಳು ಪ್ರೇಕ್ಷಕರನ್ನು ಕೈಬೀಸಿ ಕರೆಯುತ್ತಿವೆ. 

ADVERTISEMENT

ಗಾಜಿನ ಮನೆಯ ಕೇಂದ್ರ ಭಾಗದ ಬಲಬದಿಯಲ್ಲಿ ತೇಜಸ್ವಿ ಅವರ ಬಹುಮುಖಿ ವ್ಯಕ್ತಿತ್ವವನ್ನು ಬಿಂಬಿಸುವ ವ್ಯಂಗ್ಯಚಿತ್ರದ ಪ್ರತಿಮೆ ಇದೆ. ಅದರ ಸುತ್ತಲೂ ಜೋಡಿಸಿರುವ ಪುಷ್ಪಗಳ ಮಧ್ಯೆ ತೇಜಸ್ವಿ ಅವರ ಆಯ್ದ 12 ಪುಸ್ತಕಗಳ ಮಾದರಿ, ಪಾತ್ರ–ಸನ್ನಿವೇಶಗಳನ್ನು ಆಧರಿಸಿದ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ಅನನ್ಯ ಫಲಗಳ ಪ್ರದರ್ಶನ: ಗಾಜಿನ ಮನೆಯ ಎಡ ಭಾಗದಲ್ಲಿ ಬಿಳಿಗಿರಿ ರಂಗನಬೆಟ್ಟ, ವಿವಿಧ ಸಸ್ಯಶಾಸ್ತ್ರೀಯ ತೋಟಗಳು, ಮಂಗಳೂರು, ಊಟಿ ಸೇರಿದಂತೆ ದೇಶ–ವಿದೇಶಗಳ ಕಾಡಿನಲ್ಲಿ ಬೆಳೆಯುವ ಅಪರೂಪದ ಫಲಗಳನ್ನು ಸಂಗ್ರಹಸಿ ಪ್ರದರ್ಶಿಸಲಾಗಿದೆ. 

ಗಾಜಿನ ಮನೆಯ ಕೇಂದ್ರ ಭಾಗದ ಎಡ ಬದಿಯಲ್ಲಿ ಕುವೆಂಪು ರೂಪಿಸಿದ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮೊಟ್ಟ ಮೊದಲಿಗೆ ಮದುವೆಯಾಗಿ, ನಾಡಿನಲ್ಲಿ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ತೇಜಸ್ವಿ–ರಾಜೇಶ್ವರಿ ಅವರ ಸರಳ ಮದುವೆ ಸನ್ನಿವೇಶವನ್ನು ವರ್ಟಿಕಲ್‌ ಮಾದರಿ ಗಾರ್ಡನ್‌ನಲ್ಲಿ ರೂಪಿಸಲಾಗಿದೆ. ಇಲ್ಲಿ ತೇಜಸ್ವಿ–ರಾಜೇಶ್ವರಿ ಅವರ ವಿವಾಹವನ್ನು ಕುವೆಂಪು ನೆರೆವೇರಿಸುತ್ತಿರುವ ಪ್ರತಿಮೆಗಳು ನೋಡುಗರ ಗಮನ ಸೆಳೆಯುತ್ತಿವೆ. ಇದಕ್ಕಾಗಿ ಒಟ್ಟು 2.40 ಲಕ್ಷ ಗಿಡಗಳನ್ನು ಬಳಸಲಾಗಿದೆ.  

ಗಾಜಿನ ಮನೆಯ ನಾಲ್ಕು ದಿಕ್ಕುಗಳಲ್ಲಿ ಕುವೆಂಪು–ಹೇಮಾವತಿ, ಶಿವರಾಮ ಕಾರಂತ, ರಾಮಮನೋಹರ ಲೋಹಿಯಾ ಮತ್ತು ರಾಜೇಶ್ವರಿ ತೇಜಸ್ವಿಯರ ಪುತ್ಥಳಿಗಳು ರಾರಾಜಿಸುತ್ತಿವೆ. ಇದರ ಜೊತೆಗೆ ಅಲ್ಲಲ್ಲಿ ಹಾಕಿರುವ ಎಲ್‌ಇಡಿ ಪರದೆಗಳ ಮೇಲೆ ತೇಜಸ್ವಿ ಅವರ ಸಂದರ್ಶನ ಹಾಗೂ ವಿವಿಧ ಮಾಹಿತಿಗಳನ್ನು ಪ್ರಸಾರ ಮಾಡಲಾಗುತ್ತಿದೆ.

 ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸ್ಕೂಟರ್‌ ಅನ್ನು ಅವರ ಮೊಮ್ಮಕಳು ಕುತೂಹಲದಿಂದ ವೀಕ್ಷಿಸಿದರು ಪ್ರಜಾವಾಣಿ ಚಿತ್ರ: ಪುಷ್ಕರ್‌ ವಿ. 
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ವಿವಿಧ ಭಂಗಿಯ ವ್ಯಂಗಚಿತ್ರಗಳ ಪ್ರತಿಮೆಗಳು ಗಮನ ಸೆಳೆದವು ಪ್ರಜಾವಾಣಿ ಚಿತ್ರ: ಪುಷ್ಕರ್‌ ವಿ. 

ತೇಜಸ್ವಿ ಬಹುಮುಖ ವ್ಯಕ್ತಿತ್ವದ ಅನಾವರಣ

ಗಾಜಿನ ಮನೆಯ ಹಿಂಭಾಗದಲ್ಲಿ ತೇಜಸ್ವಿ ಅವರು ಸಂಗೀತ ಚಿತ್ರಕಲೆ ಬೇಟೆ ಕೃಷಿ ಪಕ್ಷಿ ಛಾಯಾಗ್ರಹಣ ಹೋರಾಟ ಸಾಹಿತ್ಯ ಯಂತ್ರ ಹಾಗೂ ಕಂಪ್ಯೂಟರ್‌ ಆಸಕ್ತಿಗಳನ್ನು  ಬಿಂಬಿಸುವ ಆಕರ್ಷಕ ಹಾಗೂ ಅರ್ಥಪೂರ್ಣ ವ್ಯಂಗ್ಯಚಿತ್ರಗಳನ್ನಾಧರಿಸಿದ ಪ್ರತಿಮೆಗಳನ್ನು ಬಹುವರ್ಣದ ಹೂಕುಂಡಗಳ ಜೋಡಣೆಯ ನಡುವೆ ಪ್ರದರ್ಶಿಸಲಾಗಿದೆ. ತೇಜಸ್ವಿ ಅವರ ಬದುಕು–ಬರಹ ಸಾಧನೆ ಕುರಿತ ಬರಹಗಳುಳ್ಳ ಬ್ಯಾನರ್‌ಗಳನ್ನು ಹಾಕಲಾಗಿದೆ. ಗಾಜಿನ ಮನೆಯ ಒಳಾಂಗಣದ ಒಂದು ಸುತ್ತ ಸುತ್ತಾಡಿ ಕಲಾಕೃತಿಗಳನ್ನು ವೀಕ್ಷಿಸುತ್ತಾ ಇಲ್ಲಿ ಹಾಕಿರುವ ಮಾಹಿತಿಗಳನ್ನು ಓದಿದರೆ ತೇಜಸ್ವಿ ಅವರ ವಿಸ್ಮಯ ಲೋಕದ ಪರಿಚಯವಾಗಲಿದೆ.

ತೇಜಸ್ವಿ ಪರಿಕಲ್ಪನೆ ಅಡಿಯಲ್ಲಿ ರೂಪಿಸಿರುವ ಫಲಪುಷ್ಪ ಪ್ರದರ್ಶನ ತುಂಬಾ ಚೆನ್ನಾಗಿದೆ. ತೇಜಸ್ವಿ ಅವರನ್ನು ಬಿಂಬಿಸುವ ಪ್ರತಿಮೆಗಳ ಆಕರ್ಷಕವಾಗಿವೆ. ಇಲ್ಲಿ ಹಾಕಿರುವ ತೇಜಸ್ವಿ ಬರಹಗಳನ್ನು ಒಮ್ಮೆ ವೀಕ್ಷಿಸಿದರೆ ಸಾಕು ಅವರ ಬಗ್ಗೆ ತಿಳಿದುಕೊಳ್ಳಬಹುದು. ನಮ್ಮ ತಾಯಿ  ಇದನ್ನು ವೀಕ್ಷಿಸಿದ್ದರೆ ತುಂಬಾ ಖುಷಿ ಪಡುತ್ತಿದ್ದರು.  
ಈಶಾನ್ಯೆ ಕೆ.ಪಿ. ತೇಜಸ್ವಿಯವರ ಮಗಳು
ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ತೇಜಸ್ವಿ ಅವರನ್ನು ತೋರಿಸಿರುವ ರೀತಿ ಬಹಳ ಅದ್ಭುತವಾಗಿದೆ. ನಾವು ತೇಜಸ್ವಿ ಅವರನ್ನು ಕಳೆದುಕೊಂಡು 20 ವರ್ಷವಾದರೂ ನಮ್ಮ ಜನರು ಇಂದಿಗೂ ಅವರನ್ನು ಸಂಭ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ.
ಸುಶ್ಮಿತಾ ಕೆ.ಪಿ. ತೇಜಸ್ವಿಯವರ ಮಗಳು
ತೇಜಸ್ವಿ ಅವರೊಂದಿಗೆ ಸುಮಾರು 15 ರಿಂದ 20 ವರ್ಷಗಳವರೆಗೆ ಕೆಲಸ ಮಾಡಿದ್ದು ಅವರೊಂದಿಗೆ ಸೇರಿ ಕೆಲವು ಪುಸ್ತಕಗಳನ್ನು ಬರೆದಿದ್ದೇನೆ. ತೇಜಸ್ವಿ ಅವರ ವ್ಯಕ್ತಿತ್ವವನ್ನು ಫಲಪುಷ್ಪ ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ.
ಪ್ರದೀಪ್ ಕೆಂಜಿಗೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ 
ಈ ಬಾರಿ ತೇಜಸ್ವಿ ಅವರ ಪರಿಕಲ್ಪನೆ ಅಡಿಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ  ಚೆನ್ನಾಗಿ ಮೂಡಿ ಬಂದಿದೆ. ಅವರ ಬದುಕು ಬರಹ ಅದ್ಭುತವಾಗಿದೆ. ಮಂತ್ರ ಮಾಂಗಲ್ಯದ ಮಾದರಿ ಉತ್ತಮವಾಗಿದೆ.
ಗಿರೀಶ್‌ ಕುಮಾರ್ ರಾಮನಗರ

‘ಲಾಲ್‌ಬಾಗ್‌ ಮಾದರಿಯಲ್ಲಿ ಉದ್ಯಾನ ನಿರ್ಮಾಣ’

ಬೆಂಗಳೂರು: ‘ಬೆಂಗಳೂರು ಉತ್ತರ ಭಾಗದಲ್ಲಿ ಅರಣ್ಯ ಇಲಾಖೆಯ ಜಾಗದಲ್ಲಿ ಬಸವಣ್ಣನವರ ಹೆಸರಿನಲ್ಲಿ ಲಾಲ್‌ಬಾಗ್‌ ಮಾದರಿಯ ಉದ್ಯಾನ ನಿರ್ಮಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರ ಜೊತೆಗೆ ಬೆಂಗಳೂರಿನ ದಕ್ಷಿಣ ಭಾಗದಲ್ಲೂ ಇದೇ ಮಾದರಿ ಉದ್ಯಾನ ನಿರ್ಮಿಸಲಾಗುವುದು’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಈ ಭಾಗದಲ್ಲಿ ಮೆಟ್ರೊ ಹಾಗೂ ಸುರಂಗದಿಂದ ಲಾಲ್‌ಬಾಗ್‌ಗೆ ತೊಂದರೆಯಾಗುತ್ತದೆ ಎಂದು ಕೆಲವರು ರಾಜಕಾರಣ ಮಾಡಿದ್ದಾರೆ. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಈ ಐತಿಹಾಸಿಕ ಉದ್ಯಾನ ಕಾಪಾಡಲು ಬೇರೆಯವರಿಗಿಂತ ಹೆಚ್ಚಿನ ಆಸಕ್ತಿ ನನಗಿದೆ. ಎಲ್ಲ ಉದ್ಯಾನ ಹಾಗೂ ಕೆರೆಗಳನ್ನು ರಕ್ಷಿಸಲು ನಮ್ಮ ಸರ್ಕಾರ ಬದ್ಧ’ ಎಂದರು.  ‘ಈ ಬಾರಿ ಪೂರ್ಣಚಂದ್ರ ತೇಜಸ್ವಿ ಅವರ ಸಿದ್ಧಾಂತ ಮೌಲ್ಯಗಳ ಪ್ರತಿಬಿಂಬವನ್ನು ಪುಷ್ಪಪ್ರದರ್ಶನದಲ್ಲಿ ರೂಪಿಸಲಾಗಿದೆ. ಬೆಂಗಳೂರಿನ ನಾಗರಿಕರು ವಿದ್ಯಾರ್ಥಿಗಳು 13 ದಿನ ನಡೆಯುವ ಈ ಪ್ರದರ್ಶನದಲ್ಲಿ ಭಾಗವಹಿಸಿ ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು. ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಾಸಕ ಉದಯ್ ಬಿ. ಗರುಡಾಚಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.