ADVERTISEMENT

ಗಾಂಧಿ ಕಥೆ ಹೇಳಲಿದೆ ಲಾಲ್‌ಬಾಗ್‌

ಈ ಬಾರಿಯ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನ ಬಾಪೂಜಿಗೆ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 19:54 IST
Last Updated 15 ಡಿಸೆಂಬರ್ 2018, 19:54 IST
ಗಾಂಧೀಜಿ
ಗಾಂಧೀಜಿ   

ಬೆಂಗಳೂರು: ಸತ್ಯ, ಶಾಂತಿ, ಅಂಹಿಸೆ ಎಂದಾಕ್ಷಣ ಥಟ್‌ ಅಂತ ನೆನಪಾಗುವುದು ರಾಷ್ಟ್ರಪಿತಮಹಾತ್ಮ ಗಾಂಧಿ. ಅವರ‌ನ್ನು ಸಹಸ್ರಾರು ಪುಷ್ಪಗಳಲ್ಲಿ ಕಣ್ತುಂಬಿಕೊಳ್ಳುವ ಕಾಲ ಸನ್ನಿಹಿತವಾಗಲಿದೆ.

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ನಿಮಿತ್ತ ನಡೆಯಲಿರುವ ಈ ಬಾರಿಯ ಫಲಪುಷ್ಪ ಪ್ರದರ್ಶನ, ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಅವರಿಗೆ ಸಮರ್ಪಣೆಯಾಗಲಿದೆ. ಗಾಂಧಿ ಕಥೆ ಹೇಳಲು ರಾಜ್ಯ ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ.

ಗಾಜಿನಮನೆಯಲ್ಲಿ ಬಾಪು ಕುಟೀರ,ಗಾಂಧಿ ಚರಕ, ಸಬರಮತಿ ಆಶ್ರಮ, ರಾಜ್‌ಘಾಟ್‌, ದಂಡಿ ಸತ್ಯಾಗ್ರಹ ಸೇರಿದಂತೆ ಬಾಪು ಅವರನ್ನು ನೆನಪಿಸುವ ದೃಶ್ಯಗಳು ಹೂಗಳಲ್ಲಿ ಮೈದಳೆಯಲಿವೆ. ಅಷ್ಟೇ ಅಲ್ಲದೆ, ‘ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಮಾತನಾಡಬೇಡ’ ಎಂಬ ಸಂದೇಶ ಸಾರುವಮೂರು ಕೋತಿಗಳೂ ರೂಪು ತಾಳಲಿವೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್‌, ‘ಈ ಬಾರಿ ನಡೆಯಲಿರುವ 209ನೇ ಫಲಪುಷ್ಪ ಪ್ರದರ್ಶನವನ್ನು ‘ಗಾಂಧೀಜಿ’ ಅವರಿಗೇ ಸಮರ್ಪಣೆ ಮಾಡಬೇಕೆಂದು ಗುರುವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇನ್ನೂ ಒಂದು ಸುತ್ತಿನ ಸಭೆ ನಡೆಯಬೇಕಿದ್ದು, ಅಂತಿಮ ಯೋಜನೆ ರೂಪುಗೊಳ್ಳಲಿದೆ’ ಎಂದು ತಿಳಿಸಿದರು.

‘ಗಾಜಿನ ಮನೆಯ ಹೊರಭಾಗದಲ್ಲಿ ಗಾಂಧಿ ಕುರಿತು ಛಾಯಾಚಿತ್ರಗಳ ಪ್ರದರ್ಶನ, ಸಿರಿಧಾನ್ಯ, ಹುಲ್ಲಿನಲ್ಲಿ ಬಾಪೂಜಿ ಪ್ರತಿಮೆ ಹಾಗೂ ಸ್ವಚ್ಛ ಭಾರತವನ್ನು ಪ್ರತಿನಿಧಿಸುವ ಗಾಂಧಿ ಕನ್ನಡಕ ರೂಪಿಸುವ ಯೋಚನೆ ಇದೆ. ಗಾಂಧಿ ಸಂದೇಶಬಿತ್ತರಿಸಲಿದ್ದೇವೆ’ ಎಂದುಇಲಾಖೆ ಉಪನಿರ್ದೇಶಕ (ಲಾಲ್‌ಬಾಗ್‌) ಚಂದ್ರಶೇಖರ್‌ ಹೇಳಿದರು.

‘ಪ್ರದರ್ಶನಕ್ಕೆ ಸುಮಾರು ₹1.8 ಕೋಟಿ ವೆಚ್ಚ ಮಾಡಲಾಗುತ್ತಿದೆ. ಪುಣೆ, ಊಟಿ ಸೇರಿದಂತೆ ವಿವಿಧೆಡೆಯಿಂದ ಹೂಗಳನ್ನು ತರಿಸಿಕೊಳ್ಳಲಿದ್ದೇವೆ. ಚೆಂಡು, ಸೇವಂತಿ, ಗುಲಾಬಿ... ಹೀಗೆ, ಬಗೆಬಗೆಯ ಹೂಗಳ ಸುಮಾರು 25 ಸಾವಿರಕ್ಕೂ ಹೆಚ್ಚು ಕುಂಡಗಳು ನಮ್ಮಲ್ಲೆ ಲಭ್ಯವಿವೆ’ ಎಂದು ತಿಳಿಸಿದರು.‌

ಫಲಪುಷ್ಪ ಪ್ರದರ್ಶನ ಜ.18 ರಿಂದ 27ರ ತನಕ ನಡೆಯಲಿದೆ.

ಪ್ರವೇಶ ಶುಲ್ಕ

ವಿದ್ಯಾರ್ಥಿಗಳಿಗೆ ಮತ್ತು ಶಾಲಾ ಬಸ್‌ಗಳಿಗೆ ಪ್ರವೇಶ ಉಚಿತ

ದೊಡ್ಡವರಿಗೆ₹70

ಮಕ್ಕಳಿಗೆ₹20

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.