ADVERTISEMENT

ಗಾಂಧಿ ತಾತನೊಂದಿಗೆ ಮಾತು

ಲಾಲ್‌ಬಾಗ್‌ನ ಸಾಬರಮತಿ ಆಶ್ರಮದಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 19:26 IST
Last Updated 19 ಜನವರಿ 2019, 19:26 IST
ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಶನಿವಾರ ಹರಿದು ಬಂದ ಜನಸಾಗರ –ಪ್ರಜಾವಾಣಿ ಚಿತ್ರ 
ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಶನಿವಾರ ಹರಿದು ಬಂದ ಜನಸಾಗರ –ಪ್ರಜಾವಾಣಿ ಚಿತ್ರ    

ಬೆಂಗಳೂರು: ಮೆಲ್ಲ ಮೆಲ್ಲನೆ ಹೆಜ್ಜೆ ಹಾಕುತ್ತ, ಕೋಲು ಹಿಡಿದು ಬಂದ ಗಾಂಧಿ ತಾತನನ್ನು ಕಂಡಪುಟಾಣಿಗಳು ತಾತನ ಕೈ ಹಿಡಿದು ‘ಹಾಯ್‌ ತಾತ... ಗಾಂಧಿ ತಾತ... ಇಲ್ಲಿಗೇಕೆ ಬಂದೆ, ಯಾವಾಗ ಮತ್ತು ಹೇಗೆ ಬಂದೆ....’ ಎಂದು ಪ್ರಶ್ನಿಸುತ್ತಿದ್ದರು.

ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಗಣರಾಜ್ಯೋತ್ಸವ ನಿಮಿತ್ತ ಆಯೋಜಿಸಿರುವ ಗಾಂಧಿ ಸ್ಮರಣೆಯ ಫಲಪುಷ್ಪ ಪ್ರದರ್ಶನದಲ್ಲಿ ಸಾಬರಮತಿ ಆಶ್ರಮದ ಮುಂದೆ ಶನಿವಾರ ಮಕ್ಕಳು ತಾತನೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತ, ಅವರೊಂದಿಗೆ ಮಾತುಕತೆ ನಡೆಸಿದ ಪರಿ ಇದು. ಹಿರಿಯರು ಕೂಡ ಇದರಲ್ಲಿ ಭಾಗಿಯಾಗಿದ್ದರು.

ಗಾಂಧಿಯನ್ನೇ ಆದರ್ಶವಾಗಿಟ್ಟುಕೊಂಡು ಅವರಂತೆ ಸರಳ ಜೀವನದ ಮೊರೆ ಹೊಕ್ಕ 75 ವರ್ಷದ ವೇಮಗಲ್‌ ಸೋಮಶೇಖರ್‌ ಅವರು,‘ಮಹಾತ್ಮ ಗಾಂಧೀಜಿ ಅವರು ಅತ್ಯಂತ ಸರಳವಾಗಿ ಬದುಕಿದ್ದವರು. ಇದ್ದಷ್ಟು ಕಾಲ ಸತ್ಯ, ಶಾಂತಿ, ಅಹಿಂಸೆಯನ್ನೇ ಮಂತ್ರವಾಗಿ ಜಪಿಸಿದ್ದವರು. ನಾನು ಅವರನ್ನು ಮೆಚ್ಚಿಕೊಳ್ಳಲು ಇದೇ ಕಾರಣ, ಪ್ರೇರಣೆ’ ಎಂದು ಹೇಳಿದರು.

ADVERTISEMENT
ಗಾಂಧಿ ವೇಷಧಾರಿ ವೇಮಗಲ್ ಸೋಮಶೇಖರ್ ಅವರೊಂದಿಗೆ ಸಾರ್ವಜನಿಕರ ಮಾತುಕತೆ –ಪ್ರಜಾವಾಣಿ ಚಿತ್ರ

‘ಈತನಕ ಹಲವಾರು ಕಾರ್ಯಕ್ರಮಗಳಲ್ಲಿ ಗಾಂಧಿ ವೇಷ ತೊಟ್ಟು ಕೂತಿರುವೆ. ಇದಕ್ಕೆ ನನ್ನ ಕುಟುಂಬದ ಬೆಂಬಲವೂ ಇದೆ. ಇಲ್ಲಿಯೂ ಹಾಗೇ ಕೂರಬೇಕಿನಿಸಿದ್ದರಿಂದ ಮತ್ತೆ ಗಾಂಧಿ ವೇಷಧಾರಿಯಾಗಿ ಇಂದಿನ ಪೀಳಿಗೆಗೆ ಅವರ ಸಂದೇಶಗಳನ್ನು ಸಾರಲು ಬಂದಿರುವೆ’ ಎಂದು ಅವರು ತಿಳಿಸಿದರು.

ಎಂ.ಎಚ್‌.ಮರಿಗೌಡ ಸಭಾಂಗಣದಲ್ಲಿ ಮಕ್ಕಳು ಮತ್ತು ಮಹಿಳೆಯರಿಗೆ ಹೂ ಜೋಡಣೆ ಮತ್ತು ತರಕಾರಿ ಕೆತ್ತನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 175 ಜನ ಭಾಗಿಯಾಗಿದ್ದರು. ಇಲ್ಲಿ ಪ್ರದರ್ಶನಗೊಂಡ ಹೂಗಳ ಜೋಡಣೆಯನ್ನು ಭಾನುವಾರ ಸಂಜೆವರೆಗೂ ವೀಕ್ಷಣೆ ಮಾಡಬಹುದು.

ಭೇಟಿ ನೀಡಿದವರು

* ವಯಸ್ಕರು;17,050

* ಮಕ್ಕಳು;5,980

* ಸಂಗ್ರಹ ಮೊತ್ತ; ₹10.23 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.