ADVERTISEMENT

ಅತಿ ವೇಗದ ಚಾಲನೆ: ಲ್ಯಾಂಬೋರ್ಗಿನಿ ಕಾರು ಚಾಲಕನ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 23:30 IST
Last Updated 21 ಜನವರಿ 2026, 23:30 IST
<div class="paragraphs"><p>ಎಫ್‌ಐಆರ್‌</p></div>

ಎಫ್‌ಐಆರ್‌

   

ಬೆಂಗಳೂರು: ಇಲ್ಲಿನ ಮೈಸೂರು ರಸ್ತೆಯಲ್ಲಿ ಅತಿ ವೇಗವಾಗಿ ಕಾರು ಚಾಲನೆ ಮಾಡಿ ಪಾದಚಾರಿಗಳು ಹಾಗೂ ವಾಹನ ಸವಾರರ ಜೀವಕ್ಕೆ ಅಪಾಯ ಉಂಟುಮಾಡಿದ್ದ ಲ್ಯಾಂಬೋರ್ಗಿನಿ ಕಾರು ಚಾಲಕನ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ರಸ್ತೆಯ ರಾಜರಾಜೇಶ್ವರಿನಗರ ಆರ್ಚ್ ಬಳಿ 2025ರ ಡಿ.14ರಂದು ಹಸಿರು ಬಣ್ಣದ ಲ್ಯಾಂಬೋರ್ಗಿನಿ ಕಾರು ಅತಿ ವೇಗದಲ್ಲಿ ಸಂಚರಿಸಿತ್ತು. ಈ ದೃಶ್ಯವನ್ನು ಸಹ ವಾಹನ ಸವಾರರು, ಮೊಬೈಲ್‍ನಲ್ಲಿ ಸೆರೆಹಿಡಿದು, ಜ.19ರಂದು ‘ಎಕ್ಸ್’ ಖಾತೆಯಲ್ಲಿ ಅದರ ವಿಡಿಯೊ ಪೋಸ್ಟ್‌ ಮಾಡಿದ್ದರು. ಕೆಂಗೇರಿ ಸಂಚಾರ ಠಾಣೆ ಪೊಲೀಸರು, ವಿಡಿಯೊ ಪರಿಶೀಲನೆ ನಡೆಸಿದಾಗ, ಅತಿ ವೇಗವಾಗಿ ಕಾರು ಚಾಲನೆ ಮಾಡಿದ್ದು ಪತ್ತೆಯಾಗಿತ್ತು. ಲ್ಯಾಂಬೋರ್ಗಿನಿ ಕಾರಿನ ನೋಂದಣಿ ಸಂಖ್ಯೆ ಆಧರಿಸಿ ವಾಹನದ ಮಾಲೀಕರನ್ನು ಪತ್ತೆ ಹಚ್ಚಿ, ಪ್ರಕರಣ ದಾಖಲಿಸಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

‘ಇಂದಿರಾನಗರದ ರೇವತಿಕುಮಾರ್ ಎಂಬುವರಿಗೆ ಸೇರಿದ ಲ್ಯಾಂಬೋರ್ಗಿನಿ ಕಾರಿನಲ್ಲಿ ಅವರ ಸಂಬಂಧಿ ರಾಜೇಂದ್ರ ಎಂಬುವರು ಡಿ.14ರಂದು ಕಾರು ಚಾಲನೆ ಮಾಡಿಕೊಂಡು ಮೈಸೂರಿಗೆ ಹೋಗಿದ್ದರು. ಅತಿ ವೇಗವಾಗಿ ಮತ್ತು ಪಥ ಬದಲಿಸುತ್ತಾ ಕಾರು ಚಾಲನೆ ಮಾಡಿದ್ದರು. ಅಲ್ಲದೇ ಕಾರಿನ ಸೈಲೆನ್ಸರ್‌ ಸಹ ಮಾರ್ಪಾಡು ಮಾಡಲಾಗಿತ್ತು. ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಕಾರು ಜಪ್ತಿ ಮಾಡಿದ್ದೇವೆ’ ಎಂದು ಸಂಚಾರ ಪೊಲೀಸರು ಹೇಳಿದರು.

ಆರ್‌ಟಿಒ ಅಧಿಕಾರಿಗಳು ಸಹ ಪ್ರತ್ಯೇಕವಾಗಿ ದೂರು ದಾಖಲಿಸಿ ದಂಡ ವಿಧಿಸಿದ್ದಾರೆ ಎಂದು ಮೂಲಗಳು ಹೇಳಿವೆ.‌

‌ಲ್ಯಾಂಬೋರ್ಗಿನಿ ಕಾರನ್ನು ರೇವತಿಕುಮಾರ್ ಅವರು ಮಹಾರಾಷ್ಟ್ರದಲ್ಲಿ ಖರೀದಿಸಿದ್ದರು. ರಾಜ್ಯದ ಸಾರಿಗೆ ಇಲಾಖೆಗೆ ತೆರಿಗೆ ಪಾವತಿಸಿದ್ದರು. ಆದರೆ, ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.