ರೈತರೊಂದಿಗೆ ಸಿಎಂ ಚರ್ಚೆ
ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ರೈತರ ಜಮೀನು ಸ್ವಾಧೀನ ಕುರಿತು ಚರ್ಚಿಸಲು ವಿಧಾನಸೌಧದಲ್ಲಿ ಶುಕ್ರವಾರ ಕರೆದಿದ್ದ ರೈತ ಮುಖಂಡರು, ಹೋರಾಟಗಾರರು ಹಾಗೂ ಸ್ಥಳೀಯ ರೈತರ ಸಭೆಯನ್ನು ಇದೇ ಜುಲೈ 15ಕ್ಕೆ ಮುಂದೂಡಲಾಯಿತು.
ಈ ಕುರಿತು ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕೈಗಾರಿಕಾ ವಲಯ ಅಭಿವೃದ್ಧಿಗಾಗಿ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ ಸುಮಾರು 13 ಹಳ್ಳಿಗಳ ವ್ಯಾಪ್ತಿಯ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು 2022ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಈ ಕುರಿತು ಒಂದಷ್ಟು ಕಾನೂನು ತಡಕುಗಳಿವೆ. ಕಾನೂನು ಅಭಿಪ್ರಾಯ ಪಡೆದು, ಕೋರ್ಟ್ ತೀರ್ಪುಗಳನ್ನು ಪರಿಶೀಲಿಸಿ, ಅಂತಿಮ ನಿರ್ಧಾರ ತೆಗದುಕೊಳ್ಳಲಾಗುವುದು. ಅದಕ್ಕಾಗಿ 10 ದಿನಗಳ ಸಮಯ ಕೇಳಿದ್ದೇವೆ ಎಂದರು.
ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕಿಗೆ 13 ಗ್ರಾಮಗಳ 1,777.2 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು 2021ರಲ್ಲಿ ಪ್ರಾಥಮಿಕ ಅಧಿಸೂಚನೆ, 2022ರಲ್ಲಿ ಆದೇಶ ಹೊರಡಿಸಲಾಗಿತ್ತು. ಭೂಸ್ವಾಧೀನ ವಿರೋಧಿಸಿ ಅಂದಿನಿಂದಲೂ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ.
ಚನ್ನರಾಯಪಟ್ಟಣ, ಮಟ್ಟಿಬಾರ್ಲು ಮತ್ತು ಶ್ರೋತ್ರೀಯ ತೆಲ್ಲೋಹಳ್ಳಿಗಳಲ್ಲಿನ ನೀರಾವರಿ, ಕೃಷಿ ಮತ್ತು ಜನವಸತಿಗಳನ್ನು ಪರಿಗಣಿಸಿ, 231.23 ಎಕರೆ, 185.18 ಎಕರೆ ಮತ್ತು 78.21 ಎಕರೆ ಸೇರಿ 495 ಎಕರೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಜೂನ್ 24ರಂದು ಘೋಷಿಸಿದ್ದರು. ಆದರೆ, ರೈತರು ಸರ್ಕಾರದ ನಿರ್ಧಾರವನ್ನು ಒಪ್ಪದೇ 13 ಗ್ರಾಮಗಳ ವ್ಯಾಪ್ತಿಯ ಎಲ್ಲ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ–ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ರೈತರು ಆಹೋರಾತ್ರಿ ಹೋರಾಟ ಮುಂದುವರಿಸಿದ್ದಾರೆ.
ರೈತ ಮುಖಂಡರಾದ ಎಚ್.ಆರ್. ಬಸವರಾಜಪ್ಪ, ಚುಕ್ಕಿ ನಂಜುಂಡಸ್ವಾಮಿ, ಸಿದ್ದನಗೌಡ ಪಾಟೀಲ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಬಿ.ಆರ್. ಪಾಟೀಲ ಉಪಸ್ಥಿತರಿದ್ದರು.
ಭೂಸ್ವಾಧೀನ ಅಧಿಸೂಚನೆ ಹಿಂಪಡೆಯಲು ಇರುವ ಕಾನೂನು ತೊಡಕುಗಳನ್ನು ನಿವಾರಸಿಕೊಳ್ಳಲು ಸರ್ಕಾರ 10 ದಿನಗಳ ಸಮಯ ಕೇಳಿದೆ. ಅಧಿಸೂಚನೆ ರದ್ದುಪಡಿಸುವ ನಂಬಿಕೆ ಇದೆ.ಬಡಗಲಪುರ ನಾಗೇಂದ್ರ, ಸಂಯುಕ್ತ ಹೋರಾಟ–ಕರ್ನಾಟಕದ ಸಂಚಾಲಕ
ರಾಜ್ಯ ಸರ್ಕಾರ ಜುಲೈ 15ರಂದು ಮತ್ತೆ ಸಭೆ ನಿಗದಿ ಮಾಡಿದೆ. ಅವರು ಏನೇ ನಿರ್ಧಾರ ತೆಗೆದುಕೊಳ್ಳಲಿ. ರೈತರ ಒಂದಿಂಚೂ ಜಾಗ ಬಿಟ್ಟುಕೊಡುವುದಿಲ್ಲಪ್ರಕಾಶ್ ರಾಜ್, ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.