ADVERTISEMENT

₹75 ಕೋಟಿ ಮೌಲ್ಯದ ಒತ್ತುವರಿ ಪ್ರದೇಶ ತೆರವು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 22:09 IST
Last Updated 4 ಸೆಪ್ಟೆಂಬರ್ 2021, 22:09 IST

ಬೆಂಗಳೂರು: ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆಯು ಜಿಲ್ಲಾಧಿಕಾರಿ ಜೆ. ಮಂಜುನಾಥ್ ನೇತೃತ್ವದಲ್ಲಿ ಶನಿವಾರ ನಡೆಯಿತು. ಐದು ತಾಲ್ಲೂಕುಗಳಲ್ಲಿ ಒಟ್ಟು ₹75 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಯಿತು.

ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳನ್ನು ರಕ್ಷಿಸಲು ಕಾರ್ಯಾಚರಣೆ ನಡೆಯಿತು.

‘ನಾಲ್ಕು ತಾಲ್ಲೂಕುಗಳಲ್ಲಿ ಒಟ್ಟು 20 ಕೆರೆ ಪ್ರದೇಶದಲ್ಲಿ 32 ಎಕರೆ ಒತ್ತುವರಿಯಾಗಿತ್ತು. ಬೆಂಗಳೂರು ಉತ್ತರ, ಯಲಹಂಕ ಮತ್ತು ಆನೇಕಲ್ ತಾಲ್ಲೂಕುಗಳಲ್ಲಿ ಸರ್ಕಾರಿ ಗೋಮಾಳ 9.15 ಎಕರೆಮತ್ತು ಬೆಂಗಳೂರು ಉತ್ತರ ಮತ್ತು ಪೂರ್ವ ತಾಲ್ಲೂಕಿನಲ್ಲಿ ಸರ್ಕಾರಿ ಗುಂಡು ತೋಪು 3 ಎಕರೆ ಸೇರಿದಂತೆ ₹20.51 ಕೋಟಿ ಮೌಲ್ಯದ ಒಟ್ಟು 13.11ಎಕರೆಗೋಮಾಳ ಜಮೀನುಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಯಿತು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ADVERTISEMENT

‘ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಒಟ್ಟು 10 ಎಕರೆ ವಿಸ್ತೀರ್ಣದ ಸರ್ಕಾರಿ ಕೆರೆ ಜಮೀನು, ಯಲಹಂಕ ತಾಲ್ಲೂಕಿನ ಸಿಂಗನಾಯಕನಹಳ್ಳಿ ಗ್ರಾಮದಲ್ಲಿ ಒಟ್ಟು 2.37 ಎಕರೆ ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡಲಾಯಿತು’ ಎಂದರು.

ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ ಒಟ್ಟು 20.20 ಎಕರೆ ವಿಸ್ತೀರ್ಣದ ಸರ್ಕಾರಿ ಕೆರೆ ಜಮೀನು,ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ 1.15 ಎಕರೆ, ವಿಸ್ತೀರ್ಣದ ಸರ್ಕಾರಿ ಕೆರೆ ಜಮೀನನ್ನು ವಶಪಡಿಸಿಕೊಳ್ಳಲಾಯಿತು ಎಂದು ಮಾಹಿತಿ ನೀಡಿದರು.

ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಒಟ್ಟು 10.30 ಎಕರೆ ವಿಸ್ತೀರ್ಣದ ಸರ್ಕಾರಿ ಕೆರೆ ಜಮೀನನ್ನು ವಶಪಡಿಸಿಕೊಳ್ಳಲಾಯಿತು ಎಂದು ಮಂಜುನಾಥ್ ಹೇಳಿದರು.

ಎಲ್ಲ ತಾಲ್ಲೂಕುಗಳ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.