ADVERTISEMENT

ನೈಸ್​ ರಸ್ತೆಯಲ್ಲಿ ವಕೀಲ ಜಗದೀಶ್​ ಮೃತದೇಹ

​ಪ್ರಜಾವಾಣಿ ವಾರ್ತೆ
Published 3 ಮೇ 2025, 16:09 IST
Last Updated 3 ಮೇ 2025, 16:09 IST
ಜಗದೀಶ್
ಜಗದೀಶ್   

ಬೆಂಗಳೂರು: ಬನ್ನೇರುಘಟ್ಟ-ಕನಕಪುರ ಮಾರ್ಗದ ನೈಸ್​ ರಸ್ತೆಯಲ್ಲಿ ವಕೀಲ ಜಗದೀಶ್​ ಅವರ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತಪಡಿಸಿರುವ ಕೆಂಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯ ಜಗದೀಶ್ ನಗರದ ಉಲ್ಲಾಳದಲ್ಲಿ ವಾಸವಿದ್ದರು. ಮೇ 2ರಂದು ಸಂಜೆ 7.30 ರಿಂದ 8 ಗಂಟೆ ಸುಮಾರಿಗೆ ನೈಸ್​ ರಸ್ತೆಯಲ್ಲಿ ಅವರ ಕಾರು ಪತ್ತೆಯಾಗಿದ್ದು, ಕಾರು ನಿಲ್ಲಿಸಿದ ಜಾಗದಿಂದ 100 ಮೀಟರ್ ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಕಾರಿನ ಒಂದೆರಡು ಕಡೆಗಳಲ್ಲಿ ಸಣ್ಣ ಪ್ರಮಾಣದ ಅಪಘಾತವಾದ ಗುರುತುಗಳಿವೆ.

ಅಪಘಾತದ ವಿಚಾರವಾಗಿ ಗಲಾಟೆ ನಡೆದಿದೆಯೇ? ಅಥವಾ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ADVERTISEMENT

ಮೃತದೇಹವು ರಕ್ತಸಿಕ್ತವಾಗಿ ಕಂಡುಬಂದಿದ್ದು, ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮತ್ತಷ್ಟು ಮಾಹಿತಿ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದರು. 

‘ರಸ್ತೆ ಪಕ್ಕದಲ್ಲಿ ಮೃತದೇಹ ಪತ್ತೆಯಾದ ಬಗ್ಗೆ ಶುಕ್ರವಾರ ರಾತ್ರಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ರಸ್ತೆ ಪಕ್ಕದಲ್ಲಿ ಕಾರು ನಿಂತಿದ್ದು, ಪಾರ್ಕಿಂಗ್ ಲೈಟ್ ಉರಿಯುತ್ತಿತ್ತು. ಕಾರು ನಿಲ್ಲಿಸಿದ ಜಾಗದಿಂದ 100 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದ್ದು, ಕಾರಿನ ಎರಡು ಕಡೆಗಳಲ್ಲಿ ಅಪಘಾತದ ಗುರುತುಗಳಿವೆ. ಮೃತರ ಸಂಬಂಧಿಕರ ದೂರು ಆಧರಿಸಿ, ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಗೆ ತಂಡವನ್ನು ರಚಿಸಲಾಗಿದೆ’ ಎಂದು ಪಶ್ಚಿಮ ವಲಯದ ಹೆಚುವರಿ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ವಿಕಾಶ್ ತಿಳಿಸಿದ್ದಾರೆ. 

ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.