ADVERTISEMENT

ಭಾರತದಲ್ಲಿ ಪುರುಷರ ನರಮೇಧ: ಟ್ರಂಪ್–ಮಸ್ಕ್‌ಗೆ ಟ್ಯಾಗ್ ಮಾಡಿ ಟೆಕ್ಕಿ ಆತ್ಮಹತ್ಯೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2024, 12:38 IST
Last Updated 11 ಡಿಸೆಂಬರ್ 2024, 12:38 IST
<div class="paragraphs"><p>ಅತುಲ್‌ ಸುಭಾಷ್</p></div>

ಅತುಲ್‌ ಸುಭಾಷ್

   

ಬೆಂಗಳೂರು: ಮಾರತ್ತಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಮಂಜುನಾಥ್‌ ಲೇಔಟ್‌ನಲ್ಲಿ ನೆಲಸಿದ್ದ ಉತ್ತರ ಪ್ರದೇಶದ ನಿವಾಸಿ ಅತುಲ್‌ ಸುಭಾಷ್ (34) ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಅತುಲ್‌ ಸಾವಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆತನ ಪತ್ನಿ ಮತ್ತು ಆಕೆಯ ಕುಟುಂಬಸ್ಥರನ್ನು ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಅತುಲ್‌ ಸುಭಾಷ್ ಅವರು ಕೊನೆಯದಾಗಿ ‘ಎಕ್ಸ್‌’ನಲ್ಲಿ (ಟ್ವಿಟರ್‌) ಮಾಡಿದ್ದ ಪೋಸ್ಟ್‌ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿವೆ.

ADVERTISEMENT

‘ಗರ್ಭಪಾತ, ರಾಜಕೀಯದ ವಿರೋಧಾಭಾಸ, ವಾಕ್‌ ಸ್ವಾತಂತ್ರ್ಯ ಹಾಗೂ ವೈವಿಧ್ಯತೆ, ಔಚಿತ್ಯ, ಒಳಗೊಳ್ಳುವಿಕೆ (ಡಿಇಐ) ವಿಷಯದಲ್ಲಿ ಲಕ್ಷಾಂತರ ಜನರನ್ನು ರಕ್ಷಿಸುವ ಅತ್ಯವಿದೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅತುಲ್‌, ಅಮೆರಿಕದ ಉದ್ಯಮಿ ಇಲಾನ್‌ ಮಸ್ಕ್ ಹಾಗೂ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟ್ಯಾಗ್ ಮಾಡಿದ್ದಾರೆ.

‘ಪ್ರಸ್ತುತ ಭಾರತದಲ್ಲಿ ಪುರುಷರ ನರಮೇಧ ನಡೆಯುತ್ತಿದೆ’ ಎಂದೂ ಅತುಲ್‌ ಮತ್ತೊಂದು ಪೋಸ್ಟ್ ಮಾಡಿದ್ದಾರೆ.

‘ಮಹೀಂದ್ರ ಕಂಪನಿಯ ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಅತುಲ್‌ ಸುಭಾಷ್‌ ಅವರು ಕೆಲಸ ಮಾಡುತ್ತಿದ್ದರು. ಮಂಜುನಾಥ ಲೇಔಟ್‌ನ ಮುನ್ನೆಕೊಳ್ಳಾಲದ ಡಾಲ್ಪೀನಿಯಂ ರೆಸಿಡೆನ್ಸಿಯ ಮೂರನೇ ಮಹಡಿಯ ಫ್ಯ್ಲ್ಯಾಟ್‌ನ ನಂ.: ಟಿ–06ನಲ್ಲಿ ನೆಲೆಸಿದ್ದ ಅವರು, ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮೃತ ಅತುಲ್‌ ಅವರ ಸಹೋದರ ಬಿಕಾಸ್‌ಕುಮಾರ್ ಅವರು, ‘ತನ್ನ ಸಹೋದರನ ಸಾವಿಗೆ ಆತನ ಪತ್ನಿ, ಪತ್ನಿಯ ತಾಯಿ, ಸಹೋದರ ಹಾಗೂ ಆಕೆಯ ಚಿಕ್ಕಪ್ಪ ಕಾರಣ’ ಎಂಬುದಾಗಿ ದೂರು ನೀಡಿದ್ದಾರೆ. ಅತುಲ್‌ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದರು. ಅಲ್ಲದೇ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ₹3 ಕೋಟಿಗೆ ಬೇಡಿಕೆ ಇಟ್ಟಿದ್ದರು. ಇದರಿಂದ ಅತುಲ್ ಅವರು ಮಾನಸಿಕ ಹಾಗೂ ದೈಹಿಕವಾಗಿ ನೊಂದಿದ್ದರು. ನಾಲ್ವರ ಪ್ರಚೋದನೆಯಿಂದಲೇ ಸಹೋದರ ಮೃತಪಟ್ಟಿದ್ದಾರೆಂದು ನೀಡಿದ ದೂರು ಆಧರಿಸಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಅತುಲ್‌ 26 ಪುಟಗಳ ಮರಣ ಪತ್ರವನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಮರಣ ಪತ್ರವನ್ನೂ ಇ–ಮೇಲ್‌ ಮೂಲಕ ಸುಪ್ರೀಂ ಕೋರ್ಟ್, ಹೈಕೋರ್ಟ್, ತಮ್ಮ ಕಚೇರಿ, ಕುಟುಂಬ ಸದಸ್ಯರಿಗೆ ಕಳುಹಿಸಿದ್ದರು. ಅತುಲ್‌ ಅವರು ಐದು ವರ್ಷಗಳ ಹಿಂದೆ ವಿವಾಹ ಆಗಿದ್ದರು. ಆರಂಭದಲ್ಲಿ ಉತ್ತರ ಪ್ರದೇಶದಲ್ಲೇ ದಂಪತಿ ನೆಲೆಸಿದ್ದರು. ಎರಡು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು. ಈ ಮಧ್ಯೆ ಕೌಟುಂಬಿಕ ವಿಚಾರಕ್ಕೆ ಗಲಾಟೆ ಮಾಡಿಕೊಂಡು, ಪತ್ನಿ ಉತ್ತರ ಪ್ರದೇಶಕ್ಕೆ ವಾಪಸ್‌ ತೆರಳಿದ್ದರು’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.