
ಬೆಂಗಳೂರು: ತುರಹಳ್ಳಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಬನಶಂಕರಿ ಆರನೇ ಹಂತದ ಎರಡನೇ ಬ್ಲಾಕ್‌ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ನಿವಾಸಿಗಳು ಆತಂಕಗೊಂಡಿದ್ದಾರೆ.
ಎರಡನೇ ಬ್ಲಾಕ್‌ನ ರಸ್ತೆಯಲ್ಲಿ ಮಂಗಳವಾರ ಬೆಳಗಿನ ಜಾವ ಚಿರತೆ ಓಡಾಡಿರುವ ದೃಶ್ಯ ಮನೆಯೊಂದರ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿರತೆಯು ನಾಯಿಯನ್ನು ಹೊತ್ತೊಯ್ದ ದೃಶ್ಯ ನೋಡಿ ಸುತ್ತಮುತ್ತಲ ಬ್ಲಾಕ್‌ಗಳ ನಿವಾಸಿಗಳು ಭಯಭೀತರಾಗಿದ್ದಾರೆ.
ತುರಹಳ್ಳಿ ಅರಣ್ಯ ಪ್ರದೇಶದಿಂದಲೇ ಚಿರತೆ ಬಂದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಚಿರತೆ ಸೆರೆ ಹಿಡಿಯುವಂತೆ ಈ ಸಂಬಂಧ ಬನಶಂಕರಿ 6ನೇ ಹಂತ 2ನೇ ಬ್ಲಾಕ್ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಸದಸ್ಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
‘ಬನಶಂಕರಿ ಆರನೇ ಹಂತದ ಎರಡನೇ ಬ್ಲಾಕ್‌ನಲ್ಲಿ ಮಂಗಳವಾರ ಚಿರತೆ ಕಾಣಿಸಿಕೊಂಡಿದ್ದು, ಬೀದಿ ನಾಯಿಯನ್ನು ಹೊತ್ತೊಯ್ದಿದೆ. ಜನವರಿ 19ರಂದು ನವಿಲನ್ನು ಸಾಯಿಸಿ, ಅರಣ್ಯದೊಳಗೆ ಎಳೆದುಕೊಂಡು ಹೋಗಿರುವುದನ್ನು ಸ್ಥಳೀಯರು ನೋಡಿದ್ದಾರೆ. ಅಲ್ಲದೇ ಕರಿಯನಪಾಳ್ಯದಲ್ಲಿ ರೈತರ ಕುರಿ, ಮೇಕೆ, ಕೋಳಿಗಳನ್ನು ತಿಂದು ಸಾಯಿಸಿದೆ. ಈ ಪ್ರದೇಶದಲ್ಲಿ ಬೀದಿ ನಾಯಿಗಳು ಚಿರತೆ ದಾಳಿಗೆ ಬಲಿಯಾಗಿವೆ. ಜನರು ಜೀವ ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸ್ಥಳೀಯ ನಿವಾಸಿ ಸತೀಶ್ ಆತಂಕ ವ್ಯಕ್ತಪಡಿಸಿದರು.
‘ಚಿರತೆ ಸೆರೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರಿಗೂ ಮನವಿ ಮಾಡಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಜನರು ರಸ್ತೆಯಲ್ಲಿ ಓಡಾಡಲು ಹೆದರುತ್ತಿದ್ದಾರೆ. ಕಾಡಿನಂಚಿನ ರಸ್ತೆಯಲ್ಲಿ ಓಡಾಡುವಾಗ ಅತ್ಯಂತ ಜಾಗರೂಕರಾಗಿ ಇರಬೇಕು’ ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
‘ಅರಣ್ಯದ ಗಡಿ ಭಾಗದಲ್ಲಿ ಕನಿಷ್ಠ ಹತ್ತು ಅಡಿ ಎತ್ತರದ ಕಾಂಕ್ರೀಟ್ ಗೋಡೆ ನಿರ್ಮಿಸಿ, ಮೇಲ್ಬಾಗದಲ್ಲಿ ಕಬ್ಬಿಣದ ಬೇಲಿ ಅಳವಡಿಸಬೇಕು. ಅರಣ್ಯದ ಕಡೆ ಆಳವಾದ ಕಂದಕ ನಿರ್ಮಿಸಬೇಕು. ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಗಸ್ತು ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.