ಕಬ್ಬನ್ ಉದ್ಯಾನ (ಸಂಗ್ರಹ ಚಿತ್ರ)
ಬೆಂಗಳೂರು: ‘ಕಬ್ಬನ್ ಉದ್ಯಾನದಲ್ಲಿ ಖಾಸಗಿ ಕಲಾ ಕೇಂದ್ರ ನಿರ್ಮಿಸುವುದಿಲ್ಲವೆಂದು ಸರ್ಕಾರ ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಕಬ್ಬನ್ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷ ಎಸ್. ಉಮೇಶ್ ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಬ್ಬನ್ ಉದ್ಯಾನದಲ್ಲಿ ಖಾಸಗಿ ಕಲಾ ಕೇಂದ್ರ ನಿರ್ಮಿಸಲು ಐದು ಎಕರೆ ಜಾಗವನ್ನು ಉದ್ಯಮಿಯೊಬ್ಬರಿಗೆ ಗುತ್ತಿಗೆ ಆಧಾರದಲ್ಲಿ ನೀಡುತ್ತಿರುವುದು ಖಂಡನೀಯ. ಇದರಿಂದ ಉದ್ಯಾನದ ಸೌಂದರ್ಯಕ್ಕೆ ಧಕ್ಕೆಯಾಗಲಿದೆ. ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ಉದ್ಯಾನದಲ್ಲಿ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸಲಾಗಿದೆ’ ಎಂದು ಆರೋಪಿಸಿದರು.
‘300 ಎಕರೆ ಪ್ರದೇಶದಲ್ಲಿ ವಿಸ್ತರಿಸಿದ್ದ ಕಬ್ಬನ್ ಉದ್ಯಾನ ಈಗ 197 ಎಕರೆ ಮಾತ್ರ ಉಳಿದಿದೆ. ಕಬ್ಬನ್ ಉದ್ಯಾನ ಒಂದು ಸಂರಕ್ಷಿತ ಪ್ರದೇಶ. ಉದ್ಯಾನದ ಅಂದಕ್ಕೆ ಯಾವುದೇ ಧಕ್ಕೆ ಆಗಬಾರದು. ಉದ್ಯಾನ ವೈವಿದ್ಯಮಯ ಪ್ರಾಣಿ–ಪಕ್ಷಿಗಳ ಜೀವಸಂಕುಲಗಳಿಗೆ ನೆಲೆಯಾಗಿದೆ. ಈ ಉದ್ಯಾನವನ್ನು ಸಂರಕ್ಷಿಸುವುದು ಸರ್ಕಾರ ಹಾಗೂ ಸಾರ್ವಜನಿಕರ ಜವಾಬ್ದಾರಿಯಾಗಿದೆ’ ಎಂದು ತಿಳಿಸಿದರು.
‘ಉದ್ಯಾನದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳದಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.