ADVERTISEMENT

ಮಾಧ್ಯಮ–ಜನಪ್ರತಿನಿಧಿಗಳು ಜತೆಯಾಗಿ ಸಾಗಲಿ: ಯು.ಟಿ. ಖಾದರ್

ತರಬೇತಿ ಶಿಬಿರದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 14:23 IST
Last Updated 9 ಫೆಬ್ರುವರಿ 2024, 14:23 IST
ಕರ್ನಾಟಕ ವಿಧಾನ ಮಂಡಲದ ತರಬೇತಿ ಸಂಸ್ಥೆಯ ವತಿಯಿಂದ 16ನೇ ವಿಧಾನಸಭೆಯ ಸದಸ್ಯರಿಗೆ ಮತ್ತು ಮಾಧ್ಯಮದವರಿಗೆ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತರಬೇತಿಯಲ್ಲಿ ಪಾಲ್ಗೊಂಡಿದ್ದ ಶಾಸಕರನ್ನು ಮಾತನಾಡಿಸಿದರು –ಪ್ರಜಾವಾಣಿ ಚಿತ್ರ
ಕರ್ನಾಟಕ ವಿಧಾನ ಮಂಡಲದ ತರಬೇತಿ ಸಂಸ್ಥೆಯ ವತಿಯಿಂದ 16ನೇ ವಿಧಾನಸಭೆಯ ಸದಸ್ಯರಿಗೆ ಮತ್ತು ಮಾಧ್ಯಮದವರಿಗೆ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತರಬೇತಿಯಲ್ಲಿ ಪಾಲ್ಗೊಂಡಿದ್ದ ಶಾಸಕರನ್ನು ಮಾತನಾಡಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಾಧ್ಯಮಗಳಿಲ್ಲದೇ ಜನಪ್ರತಿನಿಧಿಗಳಿಲ್ಲ. ಜನಪ್ರತಿನಿಧಿಗಳಿಲ್ಲದೇ ಮಾಧ್ಯಮಗಳೂ ಇಲ್ಲ. ಹಾಗಾಗಿ ಸಮಾಜದ ಒಳಿತಿಗಾಗಿ ಇಬ್ಬರೂ ಜೊತೆಯಾಗಿಯೇ ಮುಂದೆ ಸಾಗಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದ ವರದಿಗಾರರಿಗೆ ಮತ್ತು ಜನಪ್ರತಿನಿಧಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಬಜೆಟ್‌ ಅಧಿವೇಶನದಲ್ಲಿ ಎಲ್ಲ ಶಾಸಕರು ಭಾಗವಹಿಸಬೇಕು. ಯಾವುದು ಅಗತ್ಯ ಎಂದು ತಿಳಿದು ಮಾತನಾಡುವ ಬದಲು ಅನಗತ್ಯ ವಿಷಯಗಳ ಬಗ್ಗೆ ಮಾತನಾಡಿ ಕಲಾಪದ ಚರ್ಚೆಯನ್ನು ವ್ಯರ್ಥಗೊಳಿಸಬಾರದು. ಚರ್ಚೆಗಳು ಚಿಂತನೆಗೆ ಅವಕಾಶ ನೀಡಬೇಕು ಎಂದು ತಿಳಿಸಿದರು.

ADVERTISEMENT

ಪ್ರಚಾರದ ವಿಚಾರಗಳಿಗಿಂತ ಸಮಾಜಮುಖಿ ವಿಚಾರಗಳಿಗೆ ಮಾಧ್ಯಮದವರು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ಅಜೆಂಡಾವನ್ನು ಓದಿಕೊಂಡು ತಯಾರಾಗಿ ಸದನಕ್ಕೆ ಬಂದರೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಕ್ಷೇತ್ರಕ್ಕೆ ಒಳ್ಳೆಯದನ್ನು ಮಾಡಬಹುದು. ಶಾಸಕರು ಸದನದಲ್ಲಿ ಭಾಗವಹಿಸುವುದಷ್ಟೇ ಅಲ್ಲ, ಒಂದು ಡೈರಿ ಇಟ್ಟುಕೊಂಡು ನೋಟ್‌ ಮಾಡಿಕೊಳ್ಳಬೇಕು. ಹೇಗೆ ಪ್ರಶ್ನೆ ಕೇಳಬೇಕು? ಹೇಗೆ ಉತ್ತರ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವಿಧಾನ ಮಂಡಲದಲ್ಲಿ ಅತ್ಯುತ್ತಮ ಗ್ರಂಥಾಲಯವಿದೆ. ಅದರಲ್ಲಿ ಜಗತ್ತಿನ ಪುಸ್ತಕಗಳು ಮಾತ್ರವಲ್ಲ, ಕಲಾಪದ ನಡಾವಳಿಗಳು ಕೂಡ ಇವೆ. ಅವುಗಳನ್ನು ಓದಿ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕರ್ನಾಟಕ ಪ್ರೆಸ್‍ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್, ಎಡಿಟರ್‌ ಗಿಲ್ಡ್‌ ಅಧ್ಯಕ್ಷ ರವಿ ಹೆಗಡೆ, ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಉಪಸ್ಥಿತರಿದ್ದರು.

‘ಮಾಧ್ಯಮಕ್ಕೂ ಜವಾಬ್ದಾರಿ ಇರಲಿ’

ವಿಧಾನಸಭಾ ಅಧಿವೇಶನದಲ್ಲಿ ಜನಪ್ರತಿನಿಧಿಗಳಿಗಿರುವಷ್ಟೆ ಜವಾಬ್ದಾರಿ ಪತ್ರಿಕಾ ಮಾಧ್ಯಮದವರಿಗೂ ಇರುತ್ತದೆ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ನಿಯಮಿತದ ಅಧ್ಯಕ್ಷರಾದ ಅಪ್ಪಾಜಿ ಸಿ.ಎಸ್.ನಾಡಗೌಡ ತಿಳಿಸಿದರು. ಅಧಿವೇಶನದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಯ ಬಗ್ಗೆ ಹಾಗೂ ಸಾರ್ವಜನಿಕ ಮಹತ್ವದ ವಿಷಯಕ್ಕೆ ಪ್ರಾಮುಖ್ಯ ನೀಡಬೇಕು ಎಂದು ಸಲಹೆ ನೀಡಿದರು. ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ ‘ಅಧಿವೇಶನವನ್ನು ನೇರ ವೆಬ್‍ಕಾಸ್ಟಿಂಗ್ ಮೂಲಕ ಎಲ್ಲಿಂದಾದರೂ ವೀಕ್ಷಿಸಿ ವರದಿ ಮಾಡಬಹುದು. ಮಾಧ್ಯಮದವರು ವಸ್ತುಸ್ಥಿತಿಯನ್ನು ಅರಿತು ಸುದ್ದಿ ಮಾಡಬೇಕು. ಸರ್ಕಾರ ಬಿಚ್ಚಿಡುವ ಮಾಹಿತಿಗಿಂತ ಮುಚ್ಚಿಟ್ಟಿದ್ದನ್ನು ಹುಡುಕಿ ವರದಿ ಮಾಡಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.