ಬೆಂಗಳೂರು: ‘ಯಾವುದೇ ಭಾಷೆಯಿಂದ ಪದಗಳನ್ನು ಪಡೆಯಲು ಕನ್ನಡಿಗರು ಹಿಂಜರಿಯಬಾರದು. ಪದ ಸಂಪತ್ತು ಇಲ್ಲದೇ ಭಾಷೆ ಬೆಳೆಯದು. ಎಲ್ಲ ಭಾಷೆಗಳಿಂದ ಪಡೆಯುವ ಶಬ್ದಗಳನ್ನು ಕನ್ನಡಕ್ಕೆ ಒಗ್ಗಿಸಬೇಕು. ಅಷ್ಟರ ಮಟ್ಟಿಗೆ ನಾವು ಉದಾರಿಗಳಾಗಬೇಕು’ ಎಂದು ಸಾಹಿತಿ ಎಂ. ವೀರಪ್ಪ ಮೊಯಿಲಿ ತಿಳಿಸಿದರು.
ನಗರದಲ್ಲಿ ಸೋಮವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನಾ ದಿನಾಚರಣೆ, ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇವಭಾಷೆ ಎಂಬುದು ಇಲ್ಲ. ಮನುಷ್ಯ ಸಂವಹನಕ್ಕೆ ಬಳಸುವ ಭಾಷೆಗಳೇ ಎಲ್ಲ. ಕನ್ನಡವು ನಮ್ಮ ಹೃದಯದ ಭಾಷೆ’ ಎಂದು ಹೇಳಿದರು.
ಕನ್ನಡ ನಿಘಂಟು ಒಂದು ಬಾರಿ ರಚಿಸಿದರೆ ಮುಗಿಯಿತು ಎಂಬ ಮನೋಭಾವ ಇರಬಾರದು. ಕಾಲಕಾಲಕ್ಕೆ ಅದಕ್ಕೆ ಹೊಸ ಶಬ್ದಗಳು ಸೇರ್ಪಡೆಗೊಳ್ಳುತ್ತಾ ಹೋಗಬೇಕು. ಕನ್ನಡ ಲಿಪಿ ಸುಧಾರಣೆ ಕೂಡ ಆಗಬೇಕು ಎಂದು ಸಲಹೆ ನೀಡಿದರು.
‘ಸಾಹಿತ್ಯ ಸಮ್ಮೇಳನವು ಭಾಷಾ ಸಮ್ಮೇಳನವಾದರೆ ಸಾಲದು. ವಿಜ್ಞಾನದ ಸಮ್ಮೇಳನವೂ ನಡೆಯಬೇಕು. ಸಾಹಿತ್ಯ ಸಮ್ಮೇಳನವು ಸಾಂಸ್ಕೃತಿಕ ಸಮ್ಮೇಳನವಾಗಿ ಪರಿವರ್ತನೆಗೊಳ್ಳಬೇಕು. ಕನ್ನಡದ ಬೆಳವಣಿಗೆಗೆ ಕೊಡುಗೆ ನೀಡಲಿ ಎಂಬ ಕಾರಣಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರವನ್ನು, ಕನ್ನಡ ವಿಶ್ವವಿದ್ಯಾಲಯವನ್ನು ಆರಂಭಿಸಿದ್ದೆ. ಆದರೆ, ಉದ್ದೇಶ ಈಡೇರಿಲ್ಲ. ಸಂಶೋಧನೆಗಳೆಲ್ಲ ನಿಂತು ಹೋಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಅಲಭ್ಯ ಕೃತಿಗಳನ್ನು ಮರುಮುದ್ರಣ ಮಾಡಲು ಪರಿಷತ್ತು ಮುಂದಾಗಬೇಕು. ಗ್ರಂಥಾಲಯ ಸೆಸ್ ಶೇ 2 ಇತ್ತು. ಅದನ್ನು ಶೇ 6ಕ್ಕೆ ಏರಿಸಿದ್ದೆ. ಆದರೆ, ಈಗ ಆ ಸೆಸ್ ಎಲ್ಲೆಲ್ಲೋ ಖರ್ಚಾಗುತ್ತಿದೆ. ಗ್ರಂಥಾಲಯದ ಬೆಳವಣಿಗೆಗೇ ಬಳಕೆಯಾಗುವಂತೆ ಮಾಡಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಭರತನಾಟ್ಯ ಕಲಾವಿದ ಶ್ರೀಧರ್, ಉದಯವಾಣಿ ಸಂಪಾದಕ ರವಿಶಂಕರ್ ಕೆ.ಭಟ್, ಸಾಹಿತಿ ಬೇಲೂರು ರಾಮಮೂರ್ತಿ, ದತ್ತಿದಾನಿಗಳಾದ ಎಚ್. ವಿಶ್ವನಾಥ್, ಎ. ಪುಷ್ಪಾ ಅಯ್ಯಂಗಾರ್, ಪರಿಷತ್ತಿನ ನೇ.ಭ. ರಾಮಲಿಂಗ ಶೆಟ್ಟಿ, ಪದ್ಮಿನಿ ನಾಗರಾಜು, ಬಿ.ಎಂ. ಪಟೇಲ್‌ಪಾಂಡು ಉಪಸ್ಥಿತರಿದ್ದರು.
ಸ.ರ. ಸುದರ್ಶನ ಅವರಿಗೆ ಕನ್ನಡ ಚಳವಳಿ ವೀರಸೇನಾನಿ ಮ. ರಾಮಮೂರ್ತಿ ದತ್ತಿ ಪ್ರಶಸ್ತಿ, ಎಚ್.ಎ. ಶಕುಂತಳಾ ಭಟ್, ವಿಜಯಾ ಮೋಹನ್ ಅವರಿಗೆ ಬಿ. ಸರೋಜಾದೇವಿ ದತ್ತಿ ಪ್ರಶಸ್ತಿ, ಗುರುದೇವ ನಾರಾಯಣಕುಮಾರ್, ಡಿ.ಬಿ. ರಜಿಯಾ ಅವರಿಗೆ ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ಧರ್ಮದರ್ಶಿಗಳ ದತ್ತಿ, ಗುರುಬಸವ ಮಹಾಮನೆಯ ಬಸವಾನಂದ ಸ್ವಾಮಿ ಅವರಿಗೆ ಎಚ್.ವಿಶ್ವನಾಥ್–ಎಂ.ಎಸ್. ಇಂದಿರಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.