
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸೂಚನೆ ಮೇರೆಗೆ ಎರಡು ವರ್ಷಗಳ ಹಿಂದೆಯೇ ಅಂತಿಮಗೊಂಡಿದ್ದ 2020ನೇ ಸಾಲಿನ ಪುಸ್ತಕಗಳ ಪಟ್ಟಿಯನ್ನು ರಾಜ್ಯ ಮಟ್ಟದ ನೂತನ ಪುಸ್ತಕ ಆಯ್ಕೆ ಸಮಿತಿ ಗೌಪ್ಯವಾಗಿ ಮರುಪರಿಶೀಲನೆ ನಡೆಸಿದೆ. ಈ ನಡೆ ಪ್ರಕಾಶಕರ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇಲಾಖೆಯ ಏಕಗವಾಕ್ಷಿ ಯೋಜನೆಯಡಿ ಪುಸ್ತಕ ಆಯ್ಕೆಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರ ಸಾಹಿತಿ ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ರಚಿಸಿತ್ತು. ಈ ಸಮಿತಿಯು 2020ನೇ ಸಾಲಿನ ಪುಸ್ತಕಗಳನ್ನು ಕಳೆದ ವರ್ಷ ಆಯ್ಕೆ ಮಾಡಿತ್ತು. ಮೀಸಲು ಅನುದಾನ ಅನ್ಯ ಕಾರ್ಯಗಳಿಗೆ ಬಳಕೆ ಸೇರಿ ವಿವಿಧ ಕಾರಣಗಳಿಂದ ವರ್ಷ ಕಳೆದರೂ ಸರ್ಕಾರವು ಪುಸ್ತಕ ಪಟ್ಟಿಗೆ ಅನುಮೋದನೆ ನೀಡಿ, ಖರೀದಿ ಪ್ರಕ್ರಿಯೆ ನಡೆಸಿರಲಿಲ್ಲ. ಕಳೆದ ಬಜೆಟ್‌ನಲ್ಲಿ ₹ 10 ಕೋಟಿ ಅನುದಾನ ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ, ಇತ್ತೀಚೆಗೆ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ಪುನರ್ ರಚಿಸಿದೆ. ಸಾಹಿತಿ ಕರೀಗೌಡ ಬೀಚನಹಳ್ಳಿ ಅವರ ಅಧ್ಯಕ್ಷತೆಯ ನೂತನ ಸಮಿತಿ ಇಲಾಖೆಯ ಸೂಚನೆ ಮೇರೆಗೆ ಅಂತಿಮಗೊಂಡಿದ್ದ ಪುಸ್ತಕ ಪಟ್ಟಿಯನ್ನು ಮರುಪರಿಶೀಲನೆ ನಡೆಸಿದೆ.
2020ನೇ ಸಾಲಿನ ಪುಸ್ತಕಗಳ ಖರೀದಿ ನನೆಗುದಿಗೆ ಬಿದ್ದಿರುವುದರಿಂದ ಮೂರು ವರ್ಷಗಳ ಪುಸ್ತಕ ಖರೀದಿ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಅಂತಿಮಗೊಂಡ 2020ನೇ ಸಾಲಿನ ಪುಸ್ತಕ ಪಟ್ಟಿಗೆ ಅನುಮೋದನೆ ನೀಡಿ, ಖರೀದಿ ಪ್ರಕ್ರಿಯೆ ನಡೆಸುವಂತೆ ಹಿಂದಿನ ಬಿಜೆಪಿ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ಪ್ರಕಾಶಕರು ಮತ್ತು ಸಾಹಿತಿಗಳು ಹಲವು ಬಾರಿ ಮನವಿ ಮಾಡಿಕೊಂಡಿದ್ದರು. ಈಗ ಮತ್ತೊಮ್ಮೆ ಪರಿಶೀಲನೆ ನಡೆಸಿ, ಅನುಮೋದನೆಗೆ ಸಲ್ಲಿಸಿರುವುದರಿಂದ ಪುಸ್ತಕ ಖರೀದಿ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗಲಿದೆ.
ಕೈಬಿಟ್ಟಿರುವ ಬಗ್ಗೆ ಶಂಕೆ: ರಾಜ್ಯದಲ್ಲಿ ಸುಮಾರು 500 ಪ್ರಕಾಶನ ಸಂಸ್ಥೆಗಳಿವೆ. ಕೆಲವು ಲೇಖಕರು ಕೂಡ ಪ್ರಕಾಶನ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರತಿ ವರ್ಷ ಸುಮಾರು 8 ಸಾವಿರದಿಂದ 10 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಬಹುತೇಕ ಪ್ರಕಾಶಕರು ಗ್ರಂಥಾಲಯ ಇಲಾಖೆಯ ಸಗಟು ಖರೀದಿಯನ್ನೇ ಅವಲಂಬಿಸಿದ್ದಾರೆ. ಏಕಗವಾಕ್ಷಿ ಯೋಜನೆಯಡಿ ಆಯ್ಕೆಯಾದ ಪ್ರತಿ ಶೀರ್ಷಿಕೆಯ 300 ಪ್ರತಿಗಳನ್ನು ಇಲಾಖೆ ಖರೀದಿಸಲಿದೆ. ನೂತನ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯು ಆಯ್ಕೆಯಾದ ಪುಸ್ತಕಗಳ ಪಟ್ಟಿ ಪರಿಶೀಲನೆ ವೇಳೆ ಕೆಲ ಪುಸ್ತಕಗಳನ್ನು ಕೈಬಿಟ್ಟಿರುವ ಬಗ್ಗೆ ಪ್ರಕಾಶಕರ ವಲಯದಲ್ಲಿ ಶಂಕೆ ವ್ಯಕ್ತವಾಗಿದೆ.
‘ಇಲಾಖೆಯ ಸೂಚನೆಯಂತೆ 2020ನೇ ಸಾಲಿನ ಪುಸ್ತಕಗಳ ಮರುಪರಿಶೀಲನೆ ನಡೆಸಿದ್ದೇವೆಯೇ ಹೊರತು ಮರು ಆಯ್ಕೆ ಮಾಡಿಲ್ಲ’ ಎಂದು ಪುಸ್ತಕ ಆಯ್ಕೆ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.
‘ಇದೇ ಮೊದಲ ಬಾರಿ ರಾಜ್ಯ ಸರ್ಕಾರ ರಚಿಸಿದ ಸಮಿತಿಯೇ ಆಯ್ಕೆ ಮಾಡಿದ ಪುಸ್ತಕಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಲಾಗಿದೆ. ಈಗಾಗಲೇ ಖರೀದಿ ಪ್ರಕ್ರಿಯೆ ಸಾಕಷ್ಟು ವಿಳಂಬವಾಗಿದೆ. ಸರ್ಕಾರದ ಈ ನಡೆಯಿಂದ ಪುಸ್ತಕೋದ್ಯಮವೂ ರಾಜಕೀಯ ಬಣ್ಣ ಪಡೆದುಕೊಳ್ಳಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪ್ರಕಾಶಕರೊಬ್ಬರು ಬೇಸರ ವ್ಯಕ್ತಪಡಿಸಿದರು.
Quote - ನಮ್ಮ ಸಮಿತಿಯು ಮೌಲಿಕವಾದ ಪುಸ್ತಕಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಿತ್ತು. ಪುಸ್ತಕ ಪಟ್ಟಿಯನ್ನು ಮರುಪರಿಶೀಲನೆ ಮಾಡುವುದು ಸರಿಯಾದ ಪ್ರಕ್ರಿಯೆಯಲ್ಲ ।ದೊಡ್ಡರಂಗೇಗೌಡ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ
ಪುಸ್ತಕಗಳ ಪಟ್ಟಿಯನ್ನು ನೂತನ ಸಮಿತಿ ಮರುಪರಿಶೀಲನೆ ನಡೆಸಿದ್ದು ಪಟ್ಟಿಯ ಅನುಮೋದನೆಗೆ ಕಾಯುತ್ತಿದ್ದೇವೆ. ಶೀಘ್ರದಲ್ಲಿಯೇ ಖರೀದಿಯೂ ನಡೆಯಲಿದೆ- ಸತೀಶ್ ಕುಮಾರ್ ಹೊಸಮನಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ
ನಮ್ಮ ಸಮಿತಿಯು ಮೌಲಿಕವಾದ ಪುಸ್ತಕಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಿತ್ತು. ಪುಸ್ತಕ ಪಟ್ಟಿಯನ್ನು ಮರುಪರಿಶೀಲನೆ ಮಾಡುವುದು ಸರಿಯಾದ ಪ್ರಕ್ರಿಯೆಯಲ್ಲ- ದೊಡ್ಡರಂಗೇಗೌಡ, ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ
ಪುಸ್ತಕ ಖರೀದಿಗೆ ನಿರ್ದಿಷ್ಟ ಬಜೆಟ್ ಘೋಷಿಸಬೇಕು. ಇಲ್ಲವಾದಲ್ಲಿ ಪ್ರತಿವರ್ಷವೂ ಪುಸ್ತಕ ಖರೀದಿ ಪ್ರಕ್ರಿಯೆ ವಿಳಂಬ ಆಗುತ್ತದೆ. 2020ರ ಪುಸ್ತಕ ಪಟ್ಟಿ ನಮ್ಮ ಮುಂದೆ ಇಲ್ಲ- ।ಕರೀಗೌಡ ಬೀಚನಹಳ್ಳಿ, ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ
ಯೋಜನೆಯಡಿ ಈಗಾಗಲೇ 2021ರ ಪುಸ್ತಕಗಳ ಖರೀದಿ ಪ್ರಕ್ರಿಯೆಯೂ ನಡೆದು 2022ರ ಪುಸ್ತಕಗಳ ಆಯ್ಕೆ ಹಾಗೂ ಖರೀದಿ ಈ ವರ್ಷ ನಡೆಯಬೇಕಾಗಿತ್ತು. ಆದರೆ 2020ರ ಪುಸ್ತಕಗಳ ಖರೀದಿಯೇ ನಡೆಯದಿದ್ದರಿಂದ ಮುಂದಿನ ವರ್ಷಗಳ ಆಯ್ಕೆ ಪ್ರಕ್ರಿಯೆಯೂ ನಡೆದಿಲ್ಲ. ಈಗ 2020ನೇ ಸಾಲಿನ ಪುಸ್ತಕಗಳ ಪಟ್ಟಿಯನ್ನು ಮರುಪರಿಶೀಲನೆ ನಡೆಸಿರುವ ಸಮಿತಿ 2021ನೇ ಸಾಲಿನ ಪುಸ್ತಕಗಳ ಆಯ್ಕೆ ಪ್ರಕ್ರಿಯೆನ್ನು ಕೈಗೆತ್ತಿಕೊಂಡಿದೆ. ಇದರಿಂದಾಗಿ ಇತ್ತೀಚಿನ ಪುಸ್ತಕಗಳು ರಾಜ್ಯದ ಗ್ರಂಥಾಲಯಗಳಲ್ಲಿ ಓದುಗರಿಗೆ ಸಿಗದಂತಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.