
ಬೆಂಗಳೂರು: ‘2026ರಲ್ಲಿ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆಯಲಿದ್ದು, ಅಧಿಕಾರದಿಂದ ಭ್ರಷ್ಟರನ್ನು ದೂರವಿಡಲು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹೋರಾಟ ತೀವ್ರಗೊಳಿಸಬೇಕು’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ತಿಳಿಸಿದರು.
ನಗರದಲ್ಲಿ ಭಾನುವಾರ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ‘ಪಾಲಿಕೆ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸಕಾಲದಲ್ಲಿ ನಡೆಸಿಲ್ಲ. ರಾಜ್ಯವನ್ನು ಆಳಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸಂವಿಧಾನದ ಅಧಿಕಾರ ವಿಕೇಂದ್ರೀಕರಣ ಸೂತ್ರಕ್ಕೆ ಕೊಡಲಿ ಪೆಟ್ಟು ನೀಡಿವೆ. ಪ್ರಾಮಾಣಿಕರ ಕೈಗೆ ರಾಜಕೀಯ ಅಧಿಕಾರ ಸಿಗಬೇಕು’ ಎಂದು ಹೇಳಿದರು.
‘ಜನಸಾಮಾನ್ಯರು ರಾಜಕೀಯ ಕ್ಷೇತ್ರಕ್ಕೆ ಬಾರದಂತಹ ಸನ್ನಿವೇಶ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಕ್ಷವು ಪ್ರಾಮಾಣಿಕರು ಚುನಾವಣಾ ರಾಜಕಾರಣದತ್ತ ಮುಖ ಮಾಡಿ, ಪ್ರಜಾಪ್ರಭುತ್ವ ಉಳಿಸುವ ವಾತಾವರಣ ಹುಟ್ಟು ಹಾಕಿದೆ’ ಎಂದು ಹೇಳಿದರು.
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡಿ, ‘ಆಮ್ ಆದ್ಮಿ ಪಕ್ಷ ಉತ್ತರ ಪ್ರದೇಶ, ಗೋವಾ, ಗುಜರಾತ್ ರಾಜ್ಯಗಳಲ್ಲಿ ಪ್ರಬಲವಾಗಿ ಬೆಳೆದಿದೆ. ರಾಜ್ಯದಲ್ಲಿ ಪಕ್ಷ ಮುನ್ನಡೆಸಲು ಕಾರ್ಯಕರ್ತರ ತಂಡ ಹುಟ್ಟು ಹಾಕಲಾಗಿದೆ. ಭವಿಷ್ಯದಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ’ ಎಂದು ಹೇಳಿದರು.
ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ, ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹವಾನಿ, ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ, ಸಂಘಟನಾ ಕಾರ್ಯದರ್ಶಿಗಳಾದ ಅರ್ಜುನ್ ಹಲಗಿ ಗೌಡ, ಬಸವರಾಜ ಮುದಿಗೌಡರ್, ಸತೀಶ್ ಕುಮಾರ್, ರಾಜ್ಯ ಖಜಾಂಚಿ ಪ್ರಕಾಶ್ ನಡುಂಗಡಿ, ಪ್ರಚಾರ ಸಮಿತಿಯ ಅಧ್ಯಕ್ಷ ಲಕ್ಷ್ಮಿಕಾಂತ್ ರಾವ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.