ADVERTISEMENT

ಐ.ಟಿ ಸಿಟಿಗೆ ಲಂಡನ್ ತಜ್ಞರ ತ್ರಿಸೂತ್ರ

ಸಾರಿಗೆ ವ್ಯವಸ್ಥೆ ಸುಧಾರಣೆಗೆ ಟಿಎಫ್‌ಎಲ್‌ ಪರಿಣತರ ಸಲಹೆ ಪಡೆದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 19:59 IST
Last Updated 17 ಅಕ್ಟೋಬರ್ 2019, 19:59 IST
ಸಭೆಯ ಬಳಿಕ ಸಿ.ಎನ್.ಅಶ್ವತ್ಥನಾರಾಯಣ ಅವರು ಟ್ರಾನ್ಸ್‌ಪೋರ್ಟ್ ಫಾರ್ ಲಂಡನ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಶಶಿ ವರ್ಮಾ, ಹಿರಿಯ ವಿತರಣಾ ಯೋಜನಾ ವ್ಯವಸ್ಥಾಪಕ ಬೆನ್ ಜಾನ್ಸನ್, ಬಿ–ಪ್ಯಾಕ್‌ ಸಿಇಒ ರೇವತಿ ಅಶೋಕ್ ಜತೆ ಸಮಾಲೋಚನೆ ನಡೆಸಿದರು –ಪ್ರಜಾವಾಣಿ ಚಿತ್ರ
ಸಭೆಯ ಬಳಿಕ ಸಿ.ಎನ್.ಅಶ್ವತ್ಥನಾರಾಯಣ ಅವರು ಟ್ರಾನ್ಸ್‌ಪೋರ್ಟ್ ಫಾರ್ ಲಂಡನ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಶಶಿ ವರ್ಮಾ, ಹಿರಿಯ ವಿತರಣಾ ಯೋಜನಾ ವ್ಯವಸ್ಥಾಪಕ ಬೆನ್ ಜಾನ್ಸನ್, ಬಿ–ಪ್ಯಾಕ್‌ ಸಿಇಒ ರೇವತಿ ಅಶೋಕ್ ಜತೆ ಸಮಾಲೋಚನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಐ.ಟಿ ಸಿಟಿಯನ್ನು ಲಂಡನ್ ರೀತಿಯಲ್ಲೇ ಸುಂದರ ನಗರವನ್ನಾಗಿಸಲು ಮೂರು ಸೂತ್ರಗಳನ್ನು ಪಾಲಿಸಿ’ ಎಂದು ಲಂಡನ್ ಸಾರಿಗೆ ತಜ್ಞರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ನಗರದಲ್ಲಿ ಸಂಚಾರ ದಟ್ಟಣೆಯ ಸವಾಲು ಎದುರಿಸುವ ಮಾರ್ಗೋಪಾಯಗಳನ್ನು ಕಂಡುಹಿಡಿಯಲು ‘ಟ್ರಾನ್ಸ್‌ಪೋರ್ಟ್‌ ಫಾರ್ ಲಂಡನ್‌ (ಟಿಎಫ್‌ಎಲ್‌)’ ಹಿರಿಯ ಅಧಿಕಾರಿಗಳ ಮತ್ತು ಇದೇ ಕ್ಷೇತ್ರದಲ್ಲಿ ತೊಡಗಿರುವ ನಗರದ ಪರಿಣಿತರ ಜತೆ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಗುರುವಾರ ಸಭೆ ನಡೆಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಲಭ್ಯ ಇರುವ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಮತ್ತು ಸಾಂಸ್ಥಿಕ ರಚನೆ ಸರಿಯಾಗಿದ್ದರೆ ಸುಂದರ ನಗರವನ್ನು ನಿರ್ಮಾಣ ಮಾಡಬಹುದು ಎಂಬುದಕ್ಕೆ ಲಂಡನ್‌ ಉದಾಹರಣೆ. ಈ ಮೂರು ಅಂಶಗಳನ್ನು ಪರಿಗಣಿಸಿ ಎಂದು ಟಿಎಫ್‌ಎಲ್ ಮುಖ್ಯ ತಂತ್ರಜ್ಞಾನ ಅಧಿಕಾರಿ ಶಶಿವರ್ಮಾ ಸಲಹೆ ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

‘ವಿವಿಧ ಸಾರಿಗೆ ವ್ಯವಸ್ಥೆಗಳನ್ನು ಒಂದೇ ವ್ಯವಸ್ಥೆಯಡಿ ತಂದರೆ ನಿರ್ವಹಣೆ ಸುಲಭವಾಗಲಿದೆ. ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಸಾರಿಗೆ
ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಬಹುದು ಎಂದು ಹೇಳಿದ್ದಾರೆ. ಹಾಗೆಂದ ಮಾತ್ರಕ್ಕೆ ಲಂಡನ್ ಮಾದರಿಯ ಸಾರಿಗೆ ವ್ಯವಸ್ಥೆ ಜಾರಿಗೆ ಬರಲಿದೆ ಎಂಬ ಅರ್ಥವಲ್ಲ. ಬೆಂಗಳೂರಿನ ಸಾರಿಗೆ ವ್ಯವಸ್ಥೆ ಸುಧಾರಿಸಲು ಕೆಲಸ ಮಾಡುತ್ತಿರುವ ತಜ್ಞರ ಸಲಹೆಯನ್ನೂ ಪಡೆದಿದ್ದೇವೆ. ಎಲ್ಲಾ ಸಲಹೆಗಳನ್ನೂ ಒಟ್ಟುಗೂಡಿಸಿ ಕೆಲವೇ ದಿನಗಳಲ್ಲಿ ‘ಬೆಂಗಳೂರು ಮಾದರಿ’ ಸಾರಿಗೆ ವ್ಯವಸ್ಥೆ ಸೃಷ್ಟಿಸಲಾಗವುದು’ ಎಂದರು.

‘ವಿವಿಧ ಸಾರಿಗೆ ವ್ಯವಸ್ಥೆಗಳನ್ನು ಸಂಯೋಜಿಸಲು ಏಕೀಕೃತ ಮಹಾನಗರ ಸಾರಿಗೆ ಪ್ರಾಧಿಕಾರವನ್ನೂ (ಯುಎಂಟಿಎ) ಮೀರಿದ ವ್ಯವಸ್ಥೆ ಹುಟ್ಟು ಹಾಕುವ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ’ ಎಂದು ಅವರು ಹೇಳಿದರು.

ಬಿ.ವೈ. ವಿಜಯೇಂದ್ರ ಹಾಜರು

ನಗರಾಭಿವೃದ್ಧಿ ಇಲಾಖೆ ಕರೆದಿದ್ದ ಈ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಪಾಲ್ಗೊಂಡಿದ್ದರು.

ಈ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎನ್. ವಿಜಯಭಾಸ್ಕರ ಸೇರಿದಂತೆ ಸಾರಿಗೆ ಸಂಸ್ಥೆಗಳ ಮುಖ್ಯಸ್ಥರು, ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಜಯೇಂದ್ರ ಈ ಸಭೆಯಲ್ಲಿ ಭಾಗವಹಿಸಿದ್ದು ಅಚ್ಚರಿ ಮೂಡಿಸಿತು. ‌

ಈ ಬಗ್ಗೆ ಅಶ್ವತ್ಥನಾರಾಯಣ ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ‘ಇದು ಸರ್ಕಾರದ ಅಧಿಕೃತ ಸಭೆಯಲ್ಲ. ಬಿ–ಪ್ಯಾಕ್ ಸಂಸ್ಥೆಯವರು ಕರೆದಿರುವ ಸಭೆ. ನಮ್ಮನ್ನೂ ಅವರೇ ಆಹ್ವಾನಿಸಿದ್ದು. ವಿಜಯೇಂದ್ರ ಅವರನ್ನೂ ಅವರೇ ಕರೆದಿರಬಹುದು’ ಎಂದರು.

ಆದರೆ, ಬಿಎಂಆರ್‌ಡಿಎ ಸಮ್ಮೇಳನ ಸಭಾಂಗಣದಲ್ಲಿ ಸಭೆ ಆಯೋಜಿಸಿರುವ ಬಗ್ಗೆ ಸೂಚನಾ ಪತ್ರವನ್ನು ನಗರಾಭಿವೃದ್ಧಿ ಇಲಾಖೆಯು ಎಲ್ಲಾ ಇಲಾಖೆಗಳಿಗೂ ಬುಧವಾರವೇ ಕಳುಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.