ADVERTISEMENT

ಯುವತಿ ಜೊತೆ ಒಡನಾಟ: ಸಹೋದ್ಯೋಗಿ ತಲೆ ಜಜ್ಜಿ ಕೊಲೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2023, 0:21 IST
Last Updated 18 ಅಕ್ಟೋಬರ್ 2023, 0:21 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ನಗರದ 8ನೇ ಮೈಲಿಯ ಕಂಪನಿಯೊಂದರ ಎಂಜಿನಿಯರ್ ಲೋಕೇಶ್ ಕೊಲೆ ಪ್ರಕರಣ ಭೇದಿಸಿರುವ ಮಾದನಾಯಕನಹಳ್ಳಿ ಠಾಣೆ ಪೊಲೀಸರು, ಸಹೋದ್ಯೋಗಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

‘ದಾವಣಗೆರೆಯ ಲೋಕೇಶ್ ಅವರನ್ನು ಇತ್ತೀಚೆಗೆ ಅಪಹರಣ ಮಾಡಿ, ತಲೆ ಜಜ್ಜಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡು, ಸಹೋದ್ಯೋಗಿ ಪ್ರತಾಪ್ ಹಾಗೂ ಈತನ ಸ್ನೇಹಿತ ಮಂಜುನಾಥ್‌ನನ್ನು ಸೆರೆ ಹಿಡಿಯಲಾಗಿದೆ’ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ADVERTISEMENT

‘ಕಂಪನಿಯಲ್ಲಿದ್ದ ಯುವತಿಯೊಬ್ಬಳನ್ನು ಲೋಕೇಶ್ ಹಾಗೂ ಪ್ರತಾಪ್ ಇಷ್ಟಪಡುತ್ತಿದ್ದರು. ಆದರೆ, ಯುವತಿಯು ಲೋಕೇಶ್‌ ಜೊತೆ ಒಡನಾಟ ಹೊಂದಿದ್ದರು. ಇದೇ ಕಾರಣಕ್ಕೆ ಪ್ರತಾಪ್, ಲೋಕೇಶ್ ಅವರನ್ನು ಅಪಹರಿಸಿ ಕೊಲೆ ಮಾಡಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.

ಯುವತಿಗೆ ಕೆಲಸ ಕೊಡಿಸಿದ್ದ ಪ್ರತಾಪ್: ‘ಚಿಕ್ಕಬಳ್ಳಾಪುರದ ಪ್ರತಾಪ್, ಕೆಲ ವರ್ಷಗಳ ಹಿಂದೆಯಷ್ಟೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಬಾಲ್ಯ ಸ್ನೇಹಿತೆಯಾಗಿದ್ದ ಯುವತಿಗೂ ಅದೇ ಕಂಪನಿಯಲ್ಲಿ ಕೆಲಸಕೊಡಿಸಿದ್ದ. ಆರಂಭದಲ್ಲಿ ಇಬ್ಬರೂ ಚೆನ್ನಾಗಿ ಮಾತನಾಡಿಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಡಿಪ್ಲೊಮಾ ಮುಗಿಸಿದ್ದ ಲೋಕೇಶ್‌, ಕೆಲ ತಿಂಗಳ ಹಿಂದೆಯಷ್ಟೇ ಎಂಜಿನಿಯರ್ ಆಗಿ ಕಂಪನಿಗೆ ಸೇರಿದ್ದರು. ಯುವತಿ ಜೊತೆ ಸ್ನೇಹ ಬೆಳೆಸಿದ್ದರು. ಕೆಲದಿನಗಳಲ್ಲಿ ಇಬ್ಬರ ನಡುವೆ ಹೆಚ್ಚು ಒಡನಾಟ ಬೆಳೆದಿತ್ತು. ಇಬ್ಬರೂ ಹಲವೆಡೆ ಸುತ್ತಾಡುತ್ತಿದ್ದರು. ಇದನ್ನು ನೋಡಿದ್ದ ಪ್ರತಾಪ್, ಲೋಕೇಶ್‌ಗೆ ತಾಕೀತು ಮಾಡಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯೂ ಆಗಿತ್ತು’ ಎಂದು ಮೂಲಗಳು ಹೇಳಿವೆ.

ಮೆಟ್ರೊ ನಿಲ್ದಾಣ ಬಳಿ ಅಪಹರಣ: ‘ಲೋಕೇಶ್ ಅವರು ಅಕ್ಟೋಬರ್ 5ರಂದು ಕೆಲಸ ಮುಗಿಸಿಕೊಂಡು ನಾಗಸಂದ್ರ ಮೆಟ್ರೊ ನಿಲ್ದಾಣ ಬಳಿ ನಡೆದುಕೊಂಡು ಹೊರಟಿದ್ದರು. ಅವರನ್ನು ಬೈಕ್‌ನಲ್ಲಿ ಅಪಹರಣ ಮಾಡಿದ್ದ ಪ್ರತಾಪ್ ಹಾಗೂ ಮಂಜುನಾಥ್, ಕುಕ್ಕನಹಳ್ಳಿ ಬಳಿಯ ಜಮೀನೊಂದಕ್ಕೆ ಕರೆದೊಯ್ದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಲೋಕೇಶ್ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ತಲೆ ಮೇಲೆ ಕಲ್ಲು ಎತ್ತಿಹಾಕಿ ಜಜ್ಜಿ ಕೊಂದಿದ್ದರು. ನಂತರ, ಸ್ಥಳದಿಂದ ಪರಾರಿಯಾಗಿದ್ದರು. ಮೃತದೇಹ ನೋಡಿದ್ದ ಜಮೀನು ಮಾಲೀಕ ಠಾಣೆಗೆ ದೂರು ನೀಡಿದ್ದರು. ಲೋಕೇಶ್ ಬಗ್ಗೆ ಕಂಪನಿಯಲ್ಲಿ ವಿಚಾರಿಸಿದಾಗ, ಪ್ರತಾಪ್ ಜೊತೆ ಜಗಳವಾಗಿದ್ದ ಸಂಗತಿ ಗೊತ್ತಾಗಿತ್ತು. ಪ್ರತಾಪ್‌ನನ್ನು ವಶಕ್ಕೆ ಪಡೆದಾಗ ತಪ್ಪೊಪ್ಪಿಕೊಂಡ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.